Header Ads Widget

ಸುಮನಸಾ ಕೊಡವೂರು ರಂಗಹಬ್ಬದ ಮೂರನೇ ದಿನದ ಕಾರ್ಯಕ್ರಮದಲ್ಲಿ ವೆಂಕಟರಮಣ ಐತಾಳ್

ಉಡುಪಿ: ನಾಟಕಗಳಿಗೆ, ರಂಗಚಟುವಟಿಕೆಗಳಿಗೆ ಜನರ ಬೆಂಬಲದ ಜೊತೆಗೆ ಸರ್ಕಾರದಿಂದಲೂ ಪ್ರೋತ್ಸಾಹ ದೊರೆಯುತ್ತಿತ್ತು. ಅದು ನಿಂತು ಹೋಗಿದೆ. ಜನರೇ ರಂಗಭೂಮಿಯನ್ನು ಬೆಳೆಸಬೇಕಾದ ಕಾಲದಲ್ಲಿ ನಾವು ಇದ್ದೇವೆ ಎಂದು ಯಕ್ಷ ರಂಗಾಯಣ ಕಾರ್ಕಳ ಇದರ ಅಧ್ಯಕ್ಷ ಬಿ.ಆರ್. ವೆಂಕಟರಮಣ ಐತಾಳ್ ತಿಳಿಸಿದರು.  


ಅಜ್ಜರಕಾಡು ಭುಜಂಗಪಾರ್ಕ್ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಸುಮನಸಾ ಕೊಡ ವೂರು ಸಾಂಸ್ಕೃತಿಕ ಸಂಘಟನೆಯ 13ನೇ ವರ್ಷದ ರಂಗಹಬ್ಬ ಮೂರನೇ ದಿನದ ಅಧ್ಯಕ್ಷತೆ ವಹಿಸಿ ಅವರು ಮಂಗಳವಾರ ಮಾತನಾಡಿದರು.


ಮಾತಿನ ಮೂಲಕ ಬೆನ್ನು ತಟ್ಟುವುದರ ಜೊತೆಗೆ ಆರ್ಥಿಕ ನೆರವು ಕೂಡ ನೀಡುವ ಮೂಲಕ ರಂಗ ಸಂಸ್ಥೆಗಳನ್ನು ಕಲಾ ಪ್ರೇಮಿಗಳು, ದಾನಿಗಳು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.


ರಂಗಭೂಮಿ ಈ ಹಿಂದಿನ ಎಲ್ಲ ಕಾಲಕ್ಕಿಂತ ವೇಗವಾಗಿ ಈಗ ಬೆಳೆಯುತ್ತಿದೆ. ಅದರ ಬೆಳವಣಿಗೆ ಎರಡು ರೀತಿಯಲ್ಲಿ ಆಗುತ್ತಿದೆ. ಸುಮನಸಾ ಕೊಡುವೂರು ಸಂಘಟನೆಯ ರೀತಿಯಲ್ಲಿ ಸಮಾಜದ ಒಳಿತಿಗೆ ಪೂರಕವಾಗಿ ಬೆಳೆಯುವ ಪ್ರಕ್ರಿಯೆ ನಡೆಯಬೇಕು ಎಂದರು.


ನಾಟಕ ಬರೆದವರನ್ನು, ನಿರ್ದೇಶಿಸಿದವರನ್ನು, ಅಭಿನಯಿಸಿದವರನ್ನು ಎಲ್ಲರೂ ಗುರುತಿಸುತ್ತಾರೆ. ಸನ್ಮಾನಿಸುತ್ತಾರೆ. ಆದರೆ, ಹಿನ್ನೆಲೆಯಲ್ಲಿದ್ದುಕೊಂಡು ಕೆಲಸ ಮಾಡುವವರನ್ನು ಗುರುತಿಸುವುದು ಕಡಿಮೆ. ನೇಪಥ್ಯದಲ್ಲಿ ಇರುವವರನ್ನೂ ಗುರುತಿಸುವ ಮೂಲಕ ವಿಶಿಷ್ಠ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.


ಮಲ್ಪೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಸಿ. ಬಂಗೇರ ಮಾತನಾಡಿ, ಕಲಾವಿದರಿಗೆ ಜಾತಿ, ಮತ, ಪಂಥ, ಲಿಂಗದ ಭೇದ ಇರುವುದಿಲ್ಲ. ನಾಟಕದಲ್ಲಿ ಹೆಣ್ಣು ಗಂಡಾಗಬಹುದು. ಗಂಡು ಹೆಣ್ಣಾಗಬಹುದು. ನಾಟಕವು ಮನರಂಜನೆ ಮಾತ್ರವಾಗದೇ ಅರಿವು ಮೂಡಿಸುವ ಸಮಾಜಕ್ಕೆ ದಿಕ್ಕು ತೋರಿಸುವ ಪ್ರಕ್ರಿಯೆ ಎಂದು ಹೇಳಿದರು.


ರಂಗಸನ್ಮಾನ ಪಡೆದ ರಾಜು ಕಡೆಕಾರ್ ಅವರು ಕವನ ವಾಚನದ ಮೂಲಕ ಕೃತಜ್ಞತೆ ಸಲ್ಲಿಸಿದರು. ನಿರ್ಮಿತಿ ಕೇಂದ್ರದ ನಿರ್ದೇಶಕ ದಿವಾಕರ ಪೂಜಾರಿ ಅಂಬಲಪಾಡಿ, ಏಳೂರು ಮೊಗವೀರ ಮಹಾಜನ ಸಂಘದ ಅಧ್ಯಕ್ಷ ರತ್ನಾಕರ ಸಾಲಿಯಾನ್, ಕಲ್ಯಾಣಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣ ದೇವಾಡಿಗ, ಮಲ್ಪೆಯ ಉದ್ಯಮಿ ರವಿರಾಜ್ ತಿಂಗಳಾಯ, ಸುಮನಸಾ ಕೊಡವೂರು ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಉಪಸ್ಥಿತರಿದ್ದರು.


ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ಸ್ವಾಗತಿಸಿದರು. ಚಂದ್ರಕಾಂತ್ ಕಲ್ಮಾಡಿ ವಂದಿಸಿದರು. ರಾಧಿಕಾ ದಿವಾಕರ್ ಮತ್ತು ಕಾವ್ಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಅನಿಕೇತನ ಹಾಸನ ಕಲಾವಿದರು 'ಕಿರಗೂರಿನ ಗಯ್ಯಾಳಿಗಳು" ನಾಟಕ ಪ್ರದರ್ಶಿಸಿದರು.