Header Ads Widget

ವೈದ್ಯೋ ನಾರಾಯಣೋ ಹರಿ: ~ ✍️​ ಸುಜಾತ ಶೆಟ್ಟಿ, ಹೆಬ್ರಿ.

 

ವೈದ್ಯರು ಮತ್ತು ರೋಗಿಗಳ ನಡುವಣ ಸಂಬಂಧ ಹಳಸುತ್ತಿರುವ ಇಂದಿನ ದಿನಗಳಲ್ಲಿ ಹೀಗೂ ಇದ್ದಾರೆ ಯೇ ? ಹೌದು ಹೀಗೆ ಇದ್ದಾರೆ ಇನ್ನು ಕೂಡಾ !! ಖಂಡಿತವಾಗಿಯೂ. ಸರ್ಕಾರಿ ಆಸ್ಪತ್ರೆ ಎಂದರೆ ಬಡವರಿಗೆ ಮಾತ್ರ ಸೀಮಿತವಾದುದಲ್ಲ.

ಅಶಕ್ತರ ಜೊತೆ ಸಶಕ್ತರು ಹುಡುಕಿಕೊಂಡು ಬರುವ ರೀತಿಯಲ್ಲಿ ಸೇವೆ ನೀಡುತ್ತಿರುವ ​ಉಡುಪಿ ಜಿಲ್ಲಾ​ ಸರ್ಕಾರಿ  ಆಸ್ಪತ್ರೆಯಿದೆ. ಕೆಲವೊಮ್ಮೆ ಅಪೂರ್ವವೂ​, ಅಪರೂಪವೂ ಎಣಿಸಲಾರದ ಸುಕೃತ್ಯಗಳು ಸುಗಮವಾಗಿ ಸುಗಟಿತಗೊಳ್ಳುತ್ತವೆ. ಕುಚೇಲನಿಗೆ ಕೇಶವನ ದರುಶನವಾದ ತೆರದಲಿ   ಜಿಲ್ಲಾ ಆಸ್ಪತ್ರೆ ಯ ಸರ್ಜನ್​ ಡಾ​। ಹೆಚ್​. ಅಶೋಕ್ ಅವರ ದರುಶನವಾಯ್ತು.


ನನ್ನ ತಂದೆಯ ಗಂಭೀರ ಅನಾರೋಗ್ಯದ  ಸಂದರ್ಭ.​ ದಿಕ್ಕು ತೋಚದೆ ನರಳಾಡುತ್ತಿರುವ ಈ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಜಿಲ್ಲಾ ಸರ್ಜನ್ ಅಶೋಕ್ ಅವರ ಬಳಿ ಬಂದಾಗ ದೇವರಂತೆ ಅವರು ಸ್ಪಂದಿಸಿದರು.​ “ವೈದ್ಯೋ ನಾರಾಯಣೋ ಹರಿ” ಎಂಬ ಉಕ್ತಿಯಂತೆ​ ಆಪತ್ಕಾಲದಲ್ಲಿ ಸಿಲುಕಿ ನೊಂದು ಬೆಂದು ಬಾಡಿ ಬಸವಳಿದು ಸುಡುಬಿಸಿಲಿನ ನಡು ಮಧ್ಯಾಹ್ನ ಬಂದು ನನ್ನ ತಂದೆಯ ಅನಾರೋಗ್ಯದ ಚಿಂತೆ ನನ್ನನ್ನು ಈಗಾಗಲೇ ಹೈರಾಣಾಗಿಸಿದೆ.


ಒಂದು ಕಡೆ ನನ್ನ ತಂದೆ ಕಾಯಿಲೆ ಬಗ್ಗೆ ಅವರ ಬಳಿ ಹೇಳುವಂತಿಲ್ಲ ಹೇಳಿಕೊಂಡರೆ ಮುಂದೇನಾ ಗುತ್ತದೆ ಎಂಬ ಸುಳಿವು ನನ್ನ ಮತ್ತಷ್ಟು ಆತಂಕ​ಕ್ಕೀಡು ಮಾಡಿತ್ತು.​ ಈ ಕಾಯಿಲೆಯ ಬಗ್ಗೆ ನನಗಿರುವ ಭಯ, ದುಃಖವನ್ನು ಅವರ ಬಳಿ ಒಂದೇ ಸಮನೇ ಉಸಿರುಗಟ್ಟಿ ಬಿತ್ತರಿಸುವುದನ್ನು ಶಾಂತವಾಗಿ ಆಲಿಸಿದ ಅವರು, ನನ್ನ ಮುಖ ದಿಟ್ಟಿಸಿ ನೋಡಿ ತಕ್ಷಣ ಟೀ ತರಿಸಿ, ಕುಡಿವ ತನಕ ಬಿಡದೆ, ಅನಂತರ ಅಮೃತ ಸಮಾನವಾದ ಸಮಾಧಾನ, ಧೈರ್ಯ, ಮನೋಸ್ಥೈರ್ಯ ಸಾಂತ್ವನದ ನುಡಿಯ ಸಿಂಚನ ಗೈದರು. (ಮನಃಶಾಸ್ತ್ರಜ್ಞನಂತೆ ತಕ್ಷಣ ಅಂತರಂಗದ ತೊಳಲಾಟ ಅರ್ಥೈಸಿಕೊಂಡ ಪುಣ್ಯಾತ್ಮ).

ರಕ್ತ ಸಂಬಂಧಿಗಳಿಗಿಂತ ಮಿಗಿಲು ಈ ಹೃದಯಸಂಬಂಧ ಶ್ರೇಷ್ಟ ಎನ್ನುವಂತೆ ಇವರು ನನ್ನ ಪಾಲಿಗೆ ತೋರಿಸಿಕೊಟ್ಟರು. ಬಂಧುಗಳಲ್ಲ, ಆಪ್ತರಲ್ಲ, ನೆಂಟರಲ್ಲ.​ ಆದರೆ, ಇವರಲ್ಲಿರುವ ವಿಶೇಷ ಕಾಳಜಿ ಯನ್ನು ನೋಡಿ ಬೆರಗಾದೆ.​ ಈ ವೈದ್ಯರನ್ನು ಸ್ಮರಿಸುವುದು ನನ್ನ ಧರ್ಮ.

ಆಪತ್ಕಾಲದಲ್ಲಿ ಆಪದ್ಬಾವರಂತೆ ನನ್ನ ತಂದೆಯ ಅನಾರೋಗ್ಯ ಉಲ್ಬಣಗೊಂಡಾಗ ತಕ್ಷಣ ನೆರವಿಗೆ ನಿಂತರು. ಸಹಾನಮಯಿ, ಕರುಣಾಮೂರ್ತಿ ವೆಂಕಟೇಶ್ ಸರ್ ಅಷ್ಟೇ ಸ್ಪಂದಿಸಿದರು.​ ಫಲಾಫಲ ದೇವರಿಗೆ ಅರ್ಪಿಸಿ ಸಲ್ಲಿಸಿದ ಇವರ ಸೇವೆಯನ್ನು ಕಂಡು ನಾವು ಧನ್ಯರು.​ ಖಾಸ​ಗಿ ಆಸ್ಪತ್ರೆಯಲ್ಲಿ ಹೇಳಿದಷ್ಟು ಬಿಲ್ಲು ಪಾವತಿಸಿದ ನಮಗೆ ಅಲ್ಲಿ ನೀಡುವ ಸೇವೆ ನಿಜಕ್ಕೂ ಮನಸ್ಸಿಗೆ ಬೇಸರ ತರಿಸಿದೆ. ಇಲ್ಲಿ ಅದೆಷ್ಟೋ ಸಮಾಧಾನ ತಂದಿತು.

ಡಾ​। ಹೆಚ್ ಅಶೋಕ್,  ಜಿಲ್ಲಾ ಸರ್ಜನ್ ಹಾಗೂ ಡಾ​. ವೆಂಕಟೇಶ್  ಪ್ರತೀ ದಿನದ ಹಿತವಾದ ನುಡಿಯೊಂದಿಗಿನ ವೈದ್ಯಕೀಯ ಸೇವೆ ಪದಗಳಿಗೆ ನಿಲುಕದ್ದು.​ ಸರ್ಕಾರಿ ಸಂಬಳದ ದರ್ಪದಲ್ಲಿ ಮೆರೆವ ಅದೆಷ್ಟೋ ಮಂದಿಗೆ ಇವರನ್ನು ನೋಡಿ ಕಲಿಯುವುದು ಸಾಕಷ್ಟಿದೆ ಎಂದು ನನ್ನ ಅನಿಸಿಕೆ.

ಈ ವೈದ್ಯರಿಂದ ಉಪಕೃತಳಾದ ನಾನು ಮರೆಯಲುಂಟೇ? ಮರೆತು ಕೃತಘ್ನಳಾಗಲುಂಟೇ ?​ ವೃತ್ತಿ ಜೀವನದಲ್ಲಿ ಭಾಷಾ ಅಧ್ಯಾಪಕಿಯಾಗಿರುವ ನಾನು, ನನ್ನ ಜೀವನದಲ್ಲಿ ಅದೆಷ್ಟೋ ಅಗ್ನಿ ಪರೀಕ್ಷೆ ಗಳನ್ನು ಸವಾಲಾಗಿ ಸ್ವೀಕರಿಸಿ ಕುಗ್ಗದೆ ಸಾಗಿದೆ.ಆದರೇ ಈ ನೋವು ಸಹಿಸಲಾಗದ್ದು ನನ್ನಿಂದ.​ ಹುಟ್ಟಿದ ಮನುಷ್ಯ ಸಾವಿನ ಮನೆಗೆ ಹೋಗುವುದು ಅವನ ನಿಯಮವಾದರೂ, ಯಮಕಿಂಕರ ಬಾಗಿಲಲ್ಲಿ ಬಂದು ನುಡಿಸುವ ಮರಣಮೃದಂಗ ಕೇಳಿ ನಿತ್ಯ ನರಳಿಸುತ್ತಿರುವ ಭಯ ಹೇಳತೀರದು.​ ನನಗೆ ಇದು ನಿತ್ಯ ಮರಣ.

ಬಾಳಿತ್ತ ಭಗವಂತನ ಪರೀಕ್ಷೆಯಲ್ಲಿ  ಉತ್ತೀರ್ಣವೋ ಅಥವಾ ಅನುತ್ತೀರ್ಣವೋ ಗೊತ್ತಿಲ್ಲ.​ ಆ ಸೂತ್ರಧಾರಿ ಆಡಿಸಿದಂತೆ ಈ ಬೇಗೆಯಲ್ಲಿ ಬೇಯುತ್ತಿರುವಾಗ ಆಪತ್ಭಾಂದವನಾಗಿ ನಮ್ಮ ಜೊತೆ ಸಹಾಯಕ್ಕೆ ನಿಂತ ಕರಿಯಣ್ಣ ಜೊತೆಗೆ​ ಡಾಕ್ಟರ್.​  ಸುಬ್ಬಣ್ಣ ಶೆಟ್ಟಿ ,​ ಹಿತೈಷಿ ಬಂಧು ದತ್ತಾತ್ರೇಯ ಹೆಗಡೆ ಕಳುಹಿಸಿದನೇನೋ! ನಾನರಿಯೆ.​ ಅವರು ಈ ವೈದ್ಯರನ್ನು ತಕ್ಷಣ ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಕೊಡಿಸಲು ಸಹಾಯಕ್ಕೆ ನಿಂತರು.​ ಇದರಲ್ಲಿ ನಾ ಯಾರನ್ನೂ  ಮೆಚ್ಚಿಸಲು ವರ್ಣಿಸುತ್ತಿಲ್ಲ.

ನಾ ಅನುಭವಿಸಿದ ನಮ್ಮ ಜಿಲ್ಲಾ ಆಸ್ಪತ್ರೆಯ ವಾಸ್ತವ ಸಂಗತಿಯನ್ನು ಇಲ್ಲಿ ಹೇಳುತ್ತಿದ್ದೇನೆ ಅಷ್ಟೇ​. ಇದರಲ್ಲಿ ಅತಿಶಯೋಕ್ತಿಯೇನಿಲ್ಲ.​ ಇನ್ನು ನಗುಮೊಗದಿಂದಲೇ ರೋಗಿಯನ್ನು ಪ್ರೀತಿಯಿಂದ ನೋಡಿ ಕೊಳ್ಳುವ ನಿವೃತ್ತಿಯಂಚಲ್ಲಿರುವ​ ಎಳೇ ​ ಮುದುಕಿ ಅರುಣಾ ಸಿಸ್ಟರ್ ಮತ್ತು ಶಾರದಾ ಸಿಸ್ಟರ್ ಹಾಗೂ ಸಂಧ್ಯಾ ಸಿಸ್ಟರ್ ಅವರ ಸೇವೆ ನಿಜಕ್ಕೂ ಶ್ಲಾಘನೀಯ.​ ದೈಹಿಕವಾಗಿ, ಮಾನಸಿಕವಾಗಿ ನೊಂದು ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಗಳಿಗೆ​ ಬೆರಳೆಣಿಕೆಯಷ್ಟು​ ಅಂತಹ ನರ್ಸ್ ಎಲ್ಲಾ ಆಸ್ಪತ್ರೆಗಳಲ್ಲೂ ಇದ್ದರೆ ಶೀಘ್ರ ಗುಣಮುಖರಾಗಿ ಮರಳಿ ಅವರ ಗೂಡು ಸೇರಿಕೊಳ್ಳುತ್ತಾರೆ.

ಸ್ವಚ್ಚತೆ ಮತ್ತು ಸೇವೆಯ ವಿಷಯದಲ್ಲಿ ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲ ಉಡುಪಿ ಜಿಲ್ಲಾ ಆಸ್ಪತ್ರೆ. ಆಸ್ಪತ್ರೆಯಲ್ಲಿ ಇರುವ ವ್ಯವಸ್ಥೆಯಲ್ಲಿ ರೋಗಿಗಳಿಗೆ ನೀಡಿದ,​ ನೀಡುತ್ತಿರುವ ಅತ್ಯುತ್ತಮ  ವೈದ್ಯ ಕೀಯ ಸೇವೆಯನ್ನು ನಾನು ಎಂದಿಗೂ ಮರೆಯಲಾರೆ. ಇದಕ್ಕಾಗಿ ನಾನು ಸದಾ ನತಮಸ್ತಕಳು​. 

✍️​ ಸುಜಾತ ಶೆಟ್ಟಿ, ಹೆಬ್ರಿ.