Header Ads Widget

ಹೋಳಿ (ಹುತಾಶನಿ ಹುಣ್ಣಮೆ) ಹಬ್ಬದ ಹಿಂದಿನ ಶಾಸ್ತ್ರ

ಫಾಲ್ಗುಣ ಹುಣ್ಣಿಮೆಯ ದಿನದಂದು ಬರುವ ಹೋಳಿ ಹಬ್ಬವನ್ನು ದೇಶದಾದ್ಯಂತ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ದುಷ್ಟ ಪ್ರವೃತ್ತಿಗಳು ಮತ್ತು ಅಮಂಗಲ ವಿಚಾರಗಳನ್ನು ನಾಶ ಮಾಡಿ ಸತ್ ಪ್ರವೃತ್ತಿಯ ಮಾರ್ಗವನ್ನು ತೋರಿಸುವ ಉತ್ಸವವೆಂದರೆ ಹೋಳಿ. ವೃಕ್ಷರೂಪಿ ಸಮಿಧೆಗಳನು ಅಗ್ನಿಯಲ್ಲಿ ಅರ್ಪಿಸಿ ಆ ಮೂಲಕ ವಾತಾವರಣವನ್ನು ಶುದ್ಧ ಮಾಡುವ, ಉದಾತ್ತ ಭಾವನೆಯೇ ಹೋಳಿ ಆಚರಣೆಯ ಹಿಂದಿನ ಕಾರಣವಾಗಿದೆ. ಹೋಳಿ ಹಬ್ಬದ ಮಹತ್ವ, ಈ ಹಬ್ಬವನ್ನು ಆಚರಿಸುವ ಪದ್ಧತಿ ಈ ಬಗೆಗಿನ ಶಾಸ್ತ್ರೀಯ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲು ಪ್ರಯತ್ನಿಸಲಾಗಿದೆ.

ಹೋಳಿ ಹಬ್ಬದ ತಿಥಿ : ದೇಶವನ್ನು ಅವಲಂಬಿಸಿ ಫಾಲ್ಗುಣ ಹುಣ್ಣಿಮೆಯಿಂದ ಪಂಚಮಿಯವರೆಗಿನ ೫-೬ ದಿನಗಳಲ್ಲಿ ಕೆಲವು ಕಡೆಗಳಲ್ಲಿ ೨ ದಿನ ಮತ್ತು ಕೆಲವು ಕಡೆಗಳಲ್ಲಿ ಐದೂ ದಿನಗಳ ಕಾಲ ಈ ಉತ್ಸವವನ್ನು ಆಚರಿಸಲಾಗುತ್ತದೆ.

ಹೋಳಿ ಹಬ್ಬಕ್ಕಿರುವ ಸಮಾನಾರ್ಥಕ ಶಬ್ದ : ಉತ್ತರ ಭಾರತದಲ್ಲಿ ಇದಕ್ಕೆ ಹೋರಿ, ದೋಲಾಯಾತ್ರಾ, ಮತ್ತು ಗೋವಾ ಮತ್ತು ಮಹಾರಾಷ್ಟ್ರ ಈ ರಾಜ್ಯಗಳಲ್ಲಿ ಶಿಮಗಾ, ಹೋಳಿ, ಹುತಾಶನಿ ಮಹೋತ್ಸವ ಮತ್ತು ಹೋಲಿಕಾದಹನ ಮತ್ತು ದಕ್ಷಿಣದಲ್ಲಿ ಕಾಮದಹನ ಹೀಗೆ ಸಂಜ್ಞೆಗಳಿವೆ. ಬಂಗಾಲದಲ್ಲಿ ದೌಲಾಯಾತ್ರಾ ಎಂದು ಹೋಳಿಯ ಹಬ್ಬವನ್ನು ಆಚರಿಸಲಾಗುತ್ತದೆ. ಇದಕ್ಕೆ `ವಸಂತೋತ್ಸವ' ಅಥವಾ ‘ವಸಂತಗಮನೋತ್ಸವ’ ಎಂದರೆ ವಸಂತ ಋತುವಿನ ಆಗಮನಕ್ಕಾಗಿ ಆಚರಿಸಲಾಗುವ ಉತ್ಸವ ಎಂಬ ಹೆಸರಿನಿಂದಲೂ ಕರೆಯಬಹುದು.

ಹೋಳಿ ಹಬ್ಬದ ಇತಿಹಾಸ : (ಅ.) ಹಿಂದೆ ಢುಂಢಾ ಅಥವಾ ಢೌಂಢಾ ಎಂಬ ಹೆಸರಿನ ರಾಕ್ಷಸಿ ಊರಿನಲ್ಲಿ ನುಗ್ಗಿ ಚಿಕ್ಕ ಮಕ್ಕಳನ್ನು ಪೀಡಿಸುತ್ತಿದ್ದಳು. ಅವಳು ರೋಗಗಳನ್ನು ಸೃಷ್ಟಿಸುತ್ತಿದ್ದಳು. ಅವಳನ್ನು ಊರ ಹೊರಗೆ ಹಾಕಲು ಜನರು ಬಹಳ ಪ್ರಯತ್ನಿಸಿದರು; ಆದರೆ ಅವಳು ಹೋಗುತ್ತಿರಲಿಲ್ಲ. ಕೊನೆಗೆ ಜನರು ಅವಾಚ್ಯ ಮಾತುಗಳಿಂದ ಬೈಯುತ್ತಾ ಶಾಪ ಕೊಟ್ಟರಲ್ಲದೇ ಎಲ್ಲೆಡೆ ಬೆಂಕಿಯನ್ನು ಹಚ್ಚಿ ಅವಳನ್ನು ಹೆದರಿಸಿದರು ಮತ್ತು ಓಡಿಸಿದರು. ಆದ್ದರಿಂದ ಅವಳು ಊರಿನಿಂದ ಹೊರಗೆ ಓಡಿಹೋದಳು.’ ಹೀಗೆ ಭವಿಷ್ಯೋತ್ತರಪುರಾಣದಲ್ಲಿ ಹೇಳಲಾಗಿದೆ.

ಆ. ಒಂದು ಸಲ ಭಗವಾನ ಶಂಕರನು ತಪಸ್ಸಿನಲ್ಲಿ ಮಗ್ನನಾಗಿದ್ದನು. ಅವನು ಸಮಾಧಿ ಸ್ಥಿತಿಯಲ್ಲಿರುವಾಗ ಮದನನು ಅವನ ಅಂತರಂಗದಲ್ಲಿ ಪ್ರವೇಶಿಸಿದನು. ಆಗ ನನ್ನನ್ನು ಯಾರು ಚಂಚಲ ಮಾಡುತ್ತಿದ್ದಾರೆ ಎಂದು ಹೇಳಿ ಶಂಕರನು ಕಣ್ಣುಗಳನ್ನು ತೆರೆದನು ಮತ್ತು ಮದನನ್ನು ನೋಡಿದ ತಕ್ಷಣವೇ ಸುಟ್ಟು ಹಾಕಿದನು. ದಕ್ಷಿಣದ ಜನರು ಕಾಮದೇವನ ದಹನದ ನಿಮಿತ್ತ ಈ ಉತ್ಸವವನ್ನು ಆಚರಿಸುತ್ತಾರೆ. ಈ ದಿನ ಮದನನ ಪ್ರತಿಕೃತಿಯನ್ನು ಮಾಡಿ ಅದನ್ನು ಸುಡುತ್ತಾರೆ. ಈ ಮದನನನ್ನು ಗೆಲ್ಲುವ ಸಾಮರ್ಥ್ಯ ಹೋಳಿಯಲ್ಲಿದೆ; ಆದುದರಿಂದ ಹೋಳಿಯ ಉತ್ಸವವಿದೆ.

ಇ. ಫಾಲ್ಗುಣ ಹುಣ್ಣಿಮೆಯ ದಿನದಂದು ನಡೆದ ಭೂಮಿಯಲ್ಲಿನ ಮೊದಲ ಮಹಾಯಜ್ಞದ ಸ್ಮೃತಿಯೆಂದು ಪ್ರತಿವರ್ಷ ಫಾಲ್ಗುಣ ಹುಣ್ಣಿಮೆಯಂದು ಭಾರತದಾದ್ಯಂತ ‘ಹೋಳಿ’ ಈ ಹೆಸರಿನಿಂದ ಯಜ್ಞಗಳು ಆಗತೊಡಗಿದವು.

ಹೋಳಿಯ ಮಹತ್ವ : (ಅ.) ವಿಕಾರಗಳನ್ನು ಸುಟ್ಟು ಹಾಕಿ ಜೀವನದಲ್ಲಿ ಆನಂದವನ್ನು ಹರಡಲು ಕಲಿಸುವ ಹಬ್ಬ : ‘ ಹೋಳಿ’ ಇದು ವಿಕಾರಗಳನ್ನು ಸುಟ್ಟು ಹಾಕುವ ಫಾಲ್ಗುಣ ಮಾಡದ ಹಬ್ಬವಾಗಿದೆ. ‘ ವಿಕಾರಗಳನ್ನು ಸುಟ್ಟು ಹಾಕಿ ಹೊಸ ಉತ್ಸಾಹದಿಂದ ಸತ್ತ್ವಗುಣಗಳ ಕಡೆಗೆ ಹೋಗಲು ನಾವು ಸಿದ್ಧರಿದ್ದೇವೆ ’, ಎನ್ನುವುದರ ಇದು ಸಂಕೇತವೇ ಆಗಿದೆ. ಅಳಿದುಳಿದ ಸೂಕ್ಷ್ಮ- ಅಹಂಕಾರವೂ ಹೋಳಿಯಲ್ಲಿನ ಬೆಂಕಿಯಲ್ಲಿ ಇಲ್ಲದಂತಾಗುತ್ತದೆ. ಅದು ಶುದ್ಧ ಮತ್ತು ಸಾತ್ತ್ವಿಕವಾಗುತ್ತದೆ. ನಂತರ ರಂಗಪಂಚಮಿಯು ಆನಂದವನ್ನು ಹರಡುತ್ತಾ ಬರುತ್ತದೆ. ಕುಣಿಯುತ್ತಾ-ಹಾಡುತ್ತಾ ಒಟ್ಟಾಗಿ ಜೀವನದ ಆನಂದವನ್ನು ಪಡೆಯಬೇಕು. ಶ್ರೀಕೃಷ್ಣ-ರಾಧೆಯರು ರಂಗಪಂಚಮಿಯ ಮೂಲಕ ‘ಆನಂದವನ್ನು ಹರಡಿ ಎಂದು ಹೇಳಿದರು.’ ಹೀಗೆ ಪ.ಪೂ. ಪರಶರಾಮ ಪಾಂಡೆ ಮಹಾರಾಜರು ಹೇಳಿದ್ದಾರೆ.

ಆ. ಹೋಳಿ ಹಬ್ಬವು ನಮ್ಮ ದೋಷಗಳು, ದುಶ್ಚಟಗಳು ಮತ್ತು ಕೆಟ್ಟ ಅಭ್ಯಾಸಗಳನ್ನು ತೊಡೆದು ಹಾಕಲು ಒಂದು ಅವಕಾಶವಾಗಿದೆ.

ಇ. ಹೋಳಿ ಸದ್ಗುಣಗಳನ್ನು ಅಂಗೀಕರಿಸುವ ಅವಕಾಶವಾಗಿದೆ.


ಆಯುರ್ವೇದಕ್ಕನುಸಾರ ಹೋಳಿಯ ಲಾಭ - ಚಳಿಗಾಲದಲ್ಲಿ ದೇಹದಲ್ಲಿ ಸಂಗ್ರಹಗೊಂಡ ಕಫ ದೋಷವು ಹೋಳಿಯ ಕಾಲದಲ್ಲಿ ಸೂರ್ಯನ ಉಷ್ಣತೆಯಿಂದ ಕರಗುತ್ತದೆ ಮತ್ತು ಅದರಿಂದ ರೋಗಗಳು ಉತ್ಪನ್ನವಾಗುತ್ತವೆ. ಹೋಳಿಯ ಔಷಧಿಯುಕ್ತ ಹೊಗೆಯಿಂದಾಗಿ ಕಫವು ಕಡಿಮೆಯಾಗಲು ಸಹಾಯವಾಗುತ್ತದೆ. ಸೂರ್ಯನ ಉಷ್ಣತೆಯಿಂದ ಪಿತ್ತವು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಹಾಡುಗಳನ್ನು ಹಾಡುವುದು, ನಗುವುದು ಇತ್ಯಾದಿಗಳಿಂದ ಮನಸ್ಸು ಸಂತೋಷಗೊಳ್ಳುತ್ತದೆ ಮತ್ತು ಪಿತ್ತವು ಶಾಂತವಾಗುತ್ತದೆ. ಹೋಳಿಯ ಸಮಯದಲ್ಲಿ ಹೇಳಲಾಗುವ ರಕ್ಷೋಘ್ನ ಮಂತ್ರಗಳಿಂದ ಕೆಟ್ಟ ಶಕ್ತಿಗಳ ತೊಂದರೆಯೂ ಕಡಿಮೆಯಾಗುತ್ತದೆ.’ ಎಂದು ಓರ್ವ ವೈದ್ಯರು ಹೇಳಿದ್ದಾರೆ.

ಹೋಳಿಯಲ್ಲಿ ‘ಬೊಬ್ಬೆ ಹೊಡೆಯುವುದು’ ಈ ಕೃತಿಯ ಹಿಂದಿನ ಶಾಸ್ತ್ರ - ಹಿಂದೂಗಳ ಒಂದು ಪವಿತ್ರ ಹಬ್ಬವಾಗಿರುವ ಹೋಳಿಯ ದಿನದಂದು ಹೋಳಿಯನ್ನು ಉರಿಸಿದ ನಂತರ ಬೊಬ್ಬೆ ಹೊಡೆಯುವ ಆಚರಣೆ ಎಲ್ಲೆಡೆ ನೋಡಲು ಸಿಗುತ್ತದೆ. ಇದು ವಿಕಾರವಾಗಿರದೇ ಅದರ ಹಿಂದೆ ಶಾಸ್ತ್ರವು ಅಡಗಿದೆ ; ಆದರೆ ಕೆಲವು ಕಡೆಗಳಲ್ಲಿ ಇದರ ಅತಿರೇಕವಾಗಿ ಪರಸ್ಪರರಲ್ಲಿನ ವೈರತ್ವವನ್ನು ಬಹಿರಂಗಪಡಿಸಲು ಬೊಬ್ಬೆ ಹೊಡೆಯಲಾಗುತ್ತದೆ. ಹೋಳಿಯ ದಿನ ಅವಾಚ್ಯ ಶಬ್ದಗಳನ್ನು ಉಚ್ಚರಿಸುವುದು, ಬೈಯ್ಯುವುದು ಮುಂತಾದ ಕೃತಿಗಳನ್ನು ಸಂಪ್ರದಾಯವೆಂದು ಮಾಡಲಾಗುತ್ತದೆ. ಇದಕ್ಕೆ ಧರ್ಮಶಾಸ್ತ್ರದಲ್ಲಿ ಆಧಾರವಿಲ್ಲ. ಮೂಲದಲ್ಲಿ ಸಂಸ್ಕೃತ ಭಾಷೆಯಲ್ಲಿ ಒಂದೂ ಬೈಗುಳವಿಲ್ಲ. ಹೀಗಿರುವಾಗ ‘ಬೈಗುಳ ಇದು ಹಿಂದೂಗಳ ಹಬ್ಬದ ಭಾಗವಾಗಲು ಹೇಗೆ ಸಾಧ್ಯ ? ಹೋಳಿಯ ದಿನದಂದು ಬೊಬ್ಬೆ ಹೊಡೆಯುವಾಗ ಬೈಗುಳ ಹಾಕುವುದು ಧರ್ಮಶಾಸ್ತ್ರದ ದೃಷ್ಟಿಯಿಂದ ತಪ್ಪಾಗಿದೆ. ದುಷ್ಟ ಪ್ರವೃತ್ತಿಯು ಶಾಂತವಾಗಬೇಕೆಂದು ಈ ವಿಧಿ ಇದೆ. ಫಾಲ್ಗುಣ ಹುಣ್ಣಿಮೆಯಂದು ಪೂರ್ವಾ ಫಾಲ್ಗುಣಿ ನಕ್ಷತ್ರ ಬರುತ್ತದೆ. ಆ ನಕ್ಷತ್ರದ ದೇವತೆ ‘ಭಗ’. ಆಗ ಭಗನ ಹೆಸರಿನಲ್ಲಿ ಬೊಬ್ಬೆ ಹೊಡೆಯುವುದು, ಇದೊಂದು ರೀತಿಯ ಪೂಜೆಯೇ ಆಗಿದೆ. ಅದು ಆ ದೇವತೆಯ ಗೌರವವೆಂದೇ ತಿಳಿಯಬೇಕು.

ಹೋಳಿಯ ಉತ್ಸವದಲ್ಲಿನ ದುಷ್ಕೃತ್ಯಗಳನ್ನು ತಡೆಯುವುದು, ಇದು ನಮ್ಮ ಧರ್ಮಕರ್ತವ್ಯವಾಗಿದೆ ! - ಪ್ರಸ್ತುತ ಹೋಳಿಯ ನೆಪದಲ್ಲಿ ದುಷ್ಕೃತ್ಯಗಳಾಗುತ್ತವೆ, ಉದಾ. ಕಳ್ಳತನ ಮಾಡುವುದು, ಇತರರ ಮರಗಳನ್ನು ಕಡಿಯುವುದು, ಆಸ್ತಿ ಕಳ್ಳತನ, ಸರಾಯಿ ಕುಡಿದು ಗಲಾಟೆ ಮಾಡಲಾಗುತ್ತದೆ. ಹಾಗೆಯೇ ರಂಗಪಂಚಮಿಯ ನೆಪದಲ್ಲಿ ಪರಸ್ಪರರಿಗೆ ಕೊಳಕು ನೀರಿನ ಬಲೂನುಗಳನ್ನು ಎಸೆಯುವುದು, ಅಪಾಯಕಾರಿ ಬಣ್ಣಗಳನ್ನು ಮೈಗೆ ಹಚ್ಚುವುದು ಮುಂತಾದ ದುಷ್ಕೃತ್ಯಗಳು ನಡೆಯುತ್ತವೆ. ಈ ದುಷ್ಕೃತ್ಯಗಳಿಂದ ಧರ್ಮಹಾನಿಯಾಗುತ್ತದೆ. ಈ ಧರ್ಮಹಾನಿಯನ್ನು ತಡೆಯುವುದು ನಮ್ಮ ಧರ್ಮಕರ್ತವ್ಯವೇ ಆಗಿದೆ. ಇದಕ್ಕಾಗಿ ಸಮಾಜವನ್ನು ಜಾಗೃತಗೊಳಿಸಿ. ಜಾಗೃತಿ ಮೂಡಿಸಿಯೂ ದುಷ್ಕೃತ್ಯಗಳು ಕಂಡು ಬಂದರೆ ಪೊಲೀಸರಿಗೆ ದೂರು ನೀಡಿ. ಸನಾತನ ಸಂಸ್ಥೆಯು ಸಮಾನ ಮನಸ್ಕ ಸಂಘಟನೆಗಳು ಮತ್ತು ಧರ್ಮಪ್ರೇಮಿಗಳೊಂದಿಗೆ ಈ ಸಂದರ್ಭದಲ್ಲಿ ಅನೇಕ ವರ್ಷಗಳಿಂದ ಜನಜಾಗೃತಿ ಚಳುವಳಿಯನ್ನು ಹಮ್ಮಿಕೊಂಡಿದೆ. ನೀವು ಸಹ ಇದರಲ್ಲಿ ಭಾಗವಹಿಸಬಹುದು. ವರ್ಷವಿಡೀ ಮರಗಳನ್ನು ಕಡಿಯುವ ಕಾರಣ ಕಾಡುಗಳು ಬರಿದಾಗುತ್ತಿರುವಾಗ, ಆ ಕಡೆಗೆ ಕಣ್ಣುಮುಚ್ಚಿ ಕುಳಿತಿರುವ ತಥಾಕಥಿತ ಪರಿಸರವಾದಿಗಳು ಮತ್ತು ಧರ್ಮವಿರೋಧಿ ಸಂಘಟನೆಗಳು ವರ್ಷದಲ್ಲಿ ಒಂದು ಸಲ ಬರುವ ಹೋಳಿಯನ್ನು ‘ಕಸದ ಹೋಳಿ ಮಾಡಿ’, ಎಂಬಂತಹ ಆಂದೋಲವನ್ನು ನಡೆಸುತ್ತವೆ. ಈ ಧರ್ಮವಿರೋಧಿ ಮಂಡಳಿಗಳು ಸಂಪ್ರದಾಯಗಳನ್ನು ನಾಶ ಮಾಡುವುದಕ್ಕಾಗಿಯೇ ಪ್ರಯತ್ನಿಸುತ್ತವೆ, ಎಂಬುದು ಇದರಿಂದ ಕಂಡು ಬರುತ್ತದೆ. ಆದುದರಿಂದ ಹಿಂದೂಗಳ ಧಾರ್ಮಿಕ ಸಂಪ್ರದಾಯದಲ್ಲಿ ಯಾರೂ ಕೈ ಹಾಕಬಾರದು. ಹಿಂದೂಗಳೇ ಧರ್ಮವಿರೋಧಿಗಳ ಮೋಸದ ಮಾತುಗಳಿಗೆ ಬಲಿಯಾಗದೇ, ಪರಿಸರ ಸ್ನೇಹಿ, ದುಷ್ಕೃತ್ಯ ರಹಿತ; ಆದರೆ ಧರ್ಮಶಾಸ್ತ್ರಕ್ಕನುಸಾರ ಹೋಳಿಯನ್ನು ಆಚರಿಸಿ.


ಆಧಾರ : ಸನಾತನ ಸಂಸ್ಥೆಯ ಗ್ರಂಥ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ’


ಸಂಕಲನ :

ಶ್ರೀ. ವಿನೋದ ಕಾಮತ,

ರಾಜ್ಯ ವಕ್ತಾರರು, ಸನಾತನ ಸಂಸ್ಥೆ

(ಸಂಪರ್ಕ - 9342599299)