" ಹೇ... ಬೇಗ ಚಿಪ್ಸ್ ತೆಗೆದುಕೊಂಡು ಬಾ... ಇನ್ನು ಕೇವಲ 5 ಬಾಲ್ ಗೆ 13 ರನ್ ಬೇಕು ಅಷ್ಟೇ, ಬೇಗ ಬಾ... ಒಳ್ಳೇ ಇಂಟರೆಸ್ಟಿಂಗ್ ಮ್ಯಾಚ್ " ಎಂದು ನಾನು ಅಣ್ಣನಿಗೆ ಬರಲು ಅವಸರಿಸುತ್ತಿದ್ದೆ. ಆ ದಿನ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಕ್ರಿಕೆಟ್ ಮ್ಯಾಚ್ ನಡೆಯುತ್ತಿತ್ತು.
ಈಗ ಅದೆಲ್ಲಾ ಬರೀ ನೆನಪಾಗಿ ಉಳಿದಿದೆ ಅಷ್ಟೇ. ನಮ್ಮ ಮನೆಯಲ್ಲಿ ಅಪ್ಪನನ್ನು ಹೊರತುಪಡಿಸಿ ಎಲ್ಲರೂ ಕ್ರಿಕೆಟ್ ಅಭಿಮಾನಿಗಳು. ನಾನು ಇಬ್ಬರು ಅಣ್ಣಂದಿರ ಜೊತೆಗೆ ಬೆಳೆದ ಕಾರಣಕ್ಕೋ ಏನೋ ಹುಡುಗರು ಹೆಚ್ಚಾಗಿ ಆಡುವ ಕ್ರಿಕೆಟ್, ಬ್ಯುಸಿನೆಸ್ ಗೇಮ್, ರಸ್ಲಿಂಗ್ ಕಾರ್ಡ್ ಗೇಮ್.. ಈ ತರಹದ ಆಟವನ್ನೇ ಬಾಲ್ಯದಲ್ಲಿ ಹೆಚ್ಚಾಗಿ ಆಡುತ್ತಿದ್ದೆ. ಆದ್ದರಿಂದ ಕ್ರಿಕೆಟ್ ನನ್ನ ನೆಚ್ಚಿನ ಹುಚ್ಚಿನ ಆಟವಾಗಿತ್ತು. ಹುಡುಗಿಯರು ಆಡುವ ಕುಂಟಾಬಿಲ್ಲೆ, ಕವಡೆ ಆಟ, ಇವೆಲ್ಲಾ ಬಲು ಅಪರೂಪ ಆದರೂ ಗೊತ್ತಿಲ್ಲಾಂತ ಏನೂ ಇಲ್ಲ.
ಒಮ್ಮೆ ನಾನು ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆ ಬರೆಯುವ ಸಂದರ್ಭ, ವಿಶ್ವಕಪ್ ಕ್ರಿಕೆಟ್ ಸಮರಕ್ಕೂ ನನ್ನ ಪರೀಕ್ಷಾ ಸಮಯಕ್ಕೂ ಹೇಳಿ ಮಾಡಿಸಿದ ಜೋಡಿ ಹಾಗೆ ಒಂದೇ ಸಮಯದಲ್ಲಿ ಇಟ್ಟಿದ್ದರು.
ಆ ದಿನ ಭಾನುವಾರ ಭಾರತ ಆಸ್ಟ್ರೇಲಿಯಾ ಮ್ಯಾಚ್ ಇತ್ತು. ನನಗೋ ಮರುದಿನ ಅಂದರೆ ಸೋಮವಾರ ಗಣಿತ ವಿಷಯದ ಪರೀಕ್ಷೆ ಇತ್ತು. ಆದರೂ ಬಿಡದೆ ನಾನು ಮತ್ತು ನನ್ನ ಗೆಳತಿ ಶೈಲಾ ಒಟ್ಟಿಗೆ ಕುಳಿತು ಮ್ಯಾಚ್ ನೋಡಿದ್ದೆವು. ನಮ್ಮನ್ನು ನೋಡಿದವರೆಲ್ಲ ನಾಳೆ ಪರೀಕ್ಷೆಯಲ್ಲಿ ವಿಶ್ವಕ್ಕೆ ಭಾರತೀಯರ ಕೊಡುಗೆ (0) ಎಂದು ಗೇಲಿ ಮಾಡಿದ್ದರು. ಕೊನೆಗೆ ಫಲಿತಾಂಶ ಬಂದಾಗ ನಾನು ಫಸ್ಟ್ ಕ್ಲಾಸಿನಲ್ಲಿ ಪಾಸ್ ಆಗಿದ್ದೆ, ಆದರೆ ಗೆಳತಿ ಶೈಲಾ ಮಾತ್ರ ಗಣಿತದಲ್ಲಿ ಫೇಲ್ ಆಗಿದ್ದಳು.
ಕ್ರಿಕೆಟ್ ಆಡುವ ಎಲ್ಲಾ ದೇಶಗಳ ಎಲ್ಲಾ ಆಟಗಾರರ ಹೆಸರುಗಳು ಬಾಯಿಪಾಠ ಆಗಿದ್ದವು. ತರಗತಿಯ ವೇಳಾಪಟ್ಟಿ ನೆನಪಿತ್ತೋ ಇಲ್ವೋ ಆದರೆ ಕ್ರಿಕೆಟ್ ಟೂರ್ನಮೆಂಟಿನ ವೇಳಾಪಟ್ಟಿ ದಿನಾಂಕ ನಾಲಿಗೆಯ ತುದಿಯಲ್ಲಿರುತ್ತಿದ್ದವು. ಅಷ್ಟರ ಮಟ್ಟಿಗೆ ಕ್ರಿಕೆಟ್ ಹುಚ್ಚು ನನ್ನನ್ನು ಆವರಿಸಿಕೊಂಡಿತ್ತು.
ಈ ಕ್ರಿಕೆಟ್ ಬೋರ್ಡಿನವರಿಗೂ ನಮ್ಮ ಪರೀಕ್ಷಾ ಬೋರ್ಡಿನವರಿಗೂ ಏನು ಅವಿನಾಭಾವ ಸಂಬಂಧವೋ ಗೊತ್ತಿಲ್ಲ, ಬೇಕೆಂದೇ ಅತೀ ಮುಖ್ಯವಾದ ಹೆಚ್ಚು ಹೆಚ್ಚು ಆದಾಯ ತಂದುಕೊಡುವ ಐ ಪಿ ಎಲ್, ವಿಶ್ವಕಪ್, ಹೀಗೆ ದೊಡ್ಡ ದೊಡ್ಡ ಟೂರ್ನಮೆಂಟ್ ಗಳನ್ನು ವಾರ್ಷಿಕ ಪರೀಕ್ಷಾ ಸಮಯದಲ್ಲೇ ನಿಗದಿಪಡಿಸುವರು. ನಮ್ಮಂತಹ ಕ್ರಿಕೆಟ್ ಪ್ರಿಯರ ಗೋಳು ಹೇಳತೀರದು. ಆದರೂ ಕ್ರಿಕೆಟ್ ಮೇಲಿನ ಅಭಿಮಾನ ಎಳ್ಳಷ್ಟೂ ಕಡಿಮೆ ಆಗಲಿಲ್ಲ, ಆಗುವುದೂ ಇಲ್ಲ ಬಿಡಿ.
ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆ, ಅಂತಿಮ ವರ್ಷದ ಪದವಿ ಪರೀಕ್ಷಾ ಸಮಯದಲ್ಲಿಯೂ ವಿಶ್ವಕಪ್ ಕ್ರಿಕೆಟ್ ಮ್ಯಾಚ್ ನೋಡಿಕೊಂಡೆ ಪರೀಕ್ಷೆ ಬರೆಯಲು ಹೋಗಿದ್ದ ಹುಡುಗಿ ನಾನು.
ಆದರೆ ಇತ್ತೀಚೆಗೆ ಅದೇಕೋ ಗೊತ್ತಿಲ್ಲ ಕ್ರಿಕೆಟ್ ಮೇಲಿನ ಅತೀ ಹುಚ್ಚು ಪೂರ್ತಿ ಕಡಿಮೆ ಆಗಿದೆ ಅಂದರೆ ತಪ್ಪಾಗಲಾರದು. ಆಗೊಂದು ಈಗೊಂದು ಅರ್ಧಂಬರ್ಧ ಮ್ಯಾಚ್ ನೋಡುವುದು ಬಿಟ್ಟರೆ ಪೂರ್ತಿ ಮ್ಯಾಚ್ ನೋಡದೆ ಅದೆಷ್ಟೋ ವರ್ಷಗಳೇ ಕಳೆದವು.
ಮೊನ್ನೆ ಮೊನ್ನೆ ಶುರುವಾಗಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್ ನೋಡುವ ಅಂದರೆ ಈಗ ನನ್ನ ಮಕ್ಕಳಿಗೆ ಪರೀಕ್ಷಾ ಸಮಯ. ಹಾಗಾಗಿ ಚಾಂಪಿಯನ್ಸ್ ಟ್ರೋಫಿ ನೋಡುವ ಆಸೆ ಆಸೆ ಆಗಿಯೇ ಉಳಿದಿದೆ. ತಾನು ಓದದೇ ಇದ್ದರೂ ಪರವಾಗಿಲ್ಲ ನನ್ನ ಮಕ್ಕಳು ಚೆನ್ನಾಗಿ ಓದಲಿ ಎನ್ನುವ ಎಲ್ಲಾ ಪೋಷಕರ ಮನೋಭಿಲಾಷೆಗೆ ನಾನು ಹೊರತಾಗಿಲ್ಲ.
ಯಾರಿಂದಲೂ ಕಡಿಮೆ ಮಾಡಲು ಸಾಧ್ಯವಾಗದ ಕ್ರಿಕೆಟ್ ಹುಚ್ಚು ನನ್ನ ಮದುವೆಯಾದ ನಂತರ ಸಂದರ್ಭಕ್ಕೆ ಅನುಗುಣವಾಗಿ ಹಾಗೇ ತಣ್ಣಗಾಯಿತು ಅಂದರೆ ತಪ್ಪಾಗಲಾರದು. ಗಂಡ, ಮನೆ, ಮಕ್ಕಳಿಗೋಸ್ಕರ ಎಂತೆಂತಹ ತ್ಯಾಗ ಮಾಡಿದ ನಾರಿಯರಿದ್ದಾರೆ ಅಂತಹವರ ಮುಂದೆ ನನ್ನದೇನೂ ಅಲ್ಲ ಅಲ್ವಾ ಸ್ನೇಹಿತರೇ?
✍🏻 ಮಲ್ಲಿಕಾ ಶ್ರೀಶ ಬಲ್ಲಾಳ್, ಕೊಡವೂರು