ಉಡುಪಿ: ಪಿಸಿಯಲ್ಲಿ ಪೂರ್ಣಚಂದ್ರ ತೇಜಸ್ವಿ ಸಾಹಿತ್ಯದ ಕುರಿತು ಉಪನ್ಯಾಸ. ಮಣ್ಣು, ನೀರು, ಗಾಳಿ, ಕಾಡು ಇದರ ಬಗ್ಗೆ ಬರೆದು ಈ ಕುರಿತು ಗಂಭೀರವಾಗಿ ಯೋಚಿಸುವಂತೆ ಮಾಡಿದ ಕನ್ನಡ ಲೇಖಕರಲ್ಲಿ ಪೂರ್ಣಚಂದ್ರ ತೇಜಸ್ವಿ ಅಗ್ರಗಣ್ಯರು ಹೀಗೆಂದು ಲೇಖಕ, ನಿವೃತ್ತ ಕನ್ನಡ ಉಪನ್ಯಾಸಕ ಡಾ. ನರೇಂದ್ರ ರೈ ಅಭಿಪ್ರಾಯಪಟ್ಟರು.
ಅವರು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ವಿಭಾಗವು ಪದವಿ ಕನ್ನಡ ಪಠ್ಯಗಳಿಗೆ ಪೂರಕವಾಗಿ ಏರ್ಪಡಿಸಿದ್ದ ‘ತೇಜಸ್ವಿ ಬರಹಗಳ ಅವಲೋಕನ’ ವಿಶೇಷ ಉಪನ್ಯಾಸದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು. ಕಥೆ, ಕಾದಂಬರಿ, ನಾಟಕ ಮೊದಲಾದವು ತಮ್ಮ ತಲೆಯಲ್ಲಿ ಬರುವ ಕೆನೆ ಪದರದ ರೂಪಗಳಷ್ಟೆ. ಬದುಕಿಗೆ ಅನ್ನ, ನೀರು, ಗಾಳಿ ಇವು ಚೆನ್ನಾಗಿರಬೇಕೆಂಬ ಚಿಂತನೆ ತೇಜಸ್ವಿಯವರದಾಗಿತ್ತು.
ಈ ಕಾರಣದಿಂದ ಅರಾಜಕ ಕಾಡನ್ನು ತೇಜಸ್ವಿ ಶೋಧಿಸಿದರು. ಭಾರತವನ್ನು ಡೆಲ್ಲಿಯಿಂದಲ್ಲ ಹಳ್ಳಿಯಿಂದ ನೋಡಬೇಕೆಂಬ ಆಲೋಚನೆ ತೇಜಸ್ವಿಯವರದಾಗಿತ್ತು. ಅವರ ಸಾಹಿತ್ಯ ಇದರ ಪ್ರತಿಬಿಂಬ ಎಂಬ ಒಳನೋಟ ನರೇಂದ್ರ ರೈ ಅವರದು. ಕನ್ನಡ ವಿಭಾಗದ ಮುಖ್ಯಸ್ಥ ಡಾ ಮಂಜುನಾಥ ಕರಬ ಸ್ವಾಗತಿಸಿ ಉಪನ್ಯಾಸಕ ಡಾ. ನಾಗರಾಜ ಜಿ. ಪಿ. ಧನ್ಯವಾದವಿತ್ತರು. ಕಾರ್ಯ ಕ್ರಮ ಸಂಯೋಜಕ ಡಾ. ಸತೀಶ್ ನಿರೂಪಿಸಿದರು. ಡಾ. ಶಿವಕುಮಾರ ಅಳಗೋಡು ಉಪಸ್ಥಿತರಿದ್ದರು.