ಉಡುಪಿ : ಯಾವುದೇ ಕಲಾಪ್ರಕಾರಗಳು ಉಳಿದು ಬೆಳೆಯಬೇಕಾದರೆ ಯುವಜನತೆ ಅದರಲ್ಲಿ ತೊಡಗಿಸಿ ಕೊಳ್ಳುವುದು ಅತೀ ಮುಖ್ಯ. ಈ ನಿಟ್ಟಿನಲ್ಲಿ ರಂಗ ಭೂಮಿ ಉಡುಪಿ ನಾಟಕಗಳತ್ತ ವಿದ್ಯಾರ್ಥಿಗಳನ್ನು, ಯುವಕರನ್ನು ಸೆಳೆಯುವ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ ಎಂದು ಮಣಿಪಾಲ ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್ ಬಲ್ಲಾಳ್ ಹೇಳಿದರು.
ಅವರು ಗುರುವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಂಗಭೂಮಿ ಉಡುಪಿ ವತಿಯಿಂದ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ಅಂಬಾತನಯ ಮುದ್ರಾಡಿ ಸಂಸ್ಮರಣಾ ಪುಸ್ತಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾಹೆ ಮಣಿಪಾಲ ಇಂದು ಯಕ್ಷಗಾನ ಕೇಂದ್ರ , ರಾಷ್ಟ್ರ ಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಆರ್. ಆರ್.ಸಿ, ಕನಕ ಅಧ್ಯಯನ ಕೇಂದ್ರ ಮೂಲಕ ನಮ್ಮ ನಾಡಿನ ಸಂಸ್ಕೃತಿ, ಕಲಾ ಪ್ರಕಾರ ಗಳನ್ನು ದಾಖಲಿಸಿಕೊಂಡು ಬೆಳೆಸುವ ಕಾರ್ಯ ಮಾಡುತ್ತಿದೆ. ಎಂಜಿಎಂ ಕಾಲೇಜಿನ ರವೀಂದ್ರ ಮಂಟಪ, ಮುದ್ದಣ ಮಂಟಪ ವೇದಿಕೆಗಳನ್ನು ಈ ಕಾರ್ಯಕ್ರಮಗಳಿಗಾಗಿಯೇ ಮೀಸಲಿಟ್ಟಿದೆ. ಪ್ರಸ್ತುತ ರಂಗಭೂಮಿ ಉಡುಪಿ ಸಂಸ್ಥೆ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಉತ್ತಮ ಚಟುವಟಿಕೆಗಳನ್ನು ನಡೆಸುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದು ಪ್ರಶಂಸಿದರು.
ರಂಗಭೂಮಿ ಉಡುಪಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ರಂಗಭೂಮಿ ಉಡುಪಿ ತನ್ನ 60ನೇ ಸಂಭ್ರಮಾಚರಣೆಯ ಸಂದರ್ಭದಲ್ಲಿ ಪ್ರೌಡ ಶಾಲಾ ಮಕ್ಕಳಿಗೆ ಹಾಗೂ ಕಾಲೇಜು ಮಕ್ಕಳಿಗಾಗಿ ಹಮ್ಮಿಕೊಂಡ ರಂಗ ಶಿಕ್ಷಣ ಹಾಗೂ ರಂಗ ಭಾಷೆ ಕಾರ್ಯಕ್ರಮಗಳಿಗೆ ಅಭೂತ ಪೂರ್ವ ಬೆಂಬಲ ಸಿಕ್ಕಿದೆ. ಮುಂದೆ ಇದನ್ನು ಇನ್ನಷ್ಟು ಶಾಲೆಗಳಿಗೆ ವಿಸ್ತರಿಸುವ ಚಿಂತನೆ ನಡೆದಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ, ಪೂರ್ಣಿಮಾ ಅವರು ವಿಶ್ವ ರಂಗಭೂಮಿ ದಿನ ಮತ್ತು ಅಂಬಾತನಯ ಸಂಸ್ಮರಣಾ ನುಡಿಗಳನ್ನಾಡಿ, ಅಂಬಾತನಯ ಮುದ್ರಾಡಿ ಅವರ ಹೆಸರಲ್ಲಿ ಪುಸ್ತಕ ಪ್ರಶಸ್ತಿ ನೀಡುವ ರಂಗಭೂಮಿ ಉಡುಪಿ ಈ ಕೆಲಸ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಸಾಕು ತಂದೆ ರೂಮಿ ಎಂಬ ನಾಟಕ ಕೃತಿಗೆ, ಕೃತಿಕಾರ ಎನ್.ಸಿ. ಮಹೇಶ್ ಅವರಿಗೆ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಕೊಡಮಾಡುವ ಅಂಬಾತನಯ ಮುದ್ರಾಡಿ ಸಂಸ್ಮರಣಾ ಪುಸ್ತಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎಚ್ ಗೋಪಾಲ ಭಟ್ಟ (ಕು .ಗೋ.) ಅವರಿಗೆ ವಿಶ್ವ ರಂಗಭೂಮಿ ಸನ್ಮಾನ ನಡೆಯಿತು. ಪ್ರಶಸ್ತಿ ಪುರಸ್ಕೃತ ಕೃತಿಯ ಬಗ್ಗೆ ಡಾ. ವಿಷ್ಣುಮೂರ್ತಿ ಪ್ರಭು ಮಾತನಾಡಿದರು.
ಕಾರ್ಯಕ್ರಮದಲ್ಲಿ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟಿ ಗಿರಿಜಾ ಶಿವರಾಮ ಶೆಟ್ಟಿ , ಪುಸ್ತಕ ಪ್ರಶಸ್ತಿ ಸಮಿತಿ ಸದಸ್ಯ ಡಾ. ಕೆ. ಎಂ. ರಾಘವ ನಂಬಿಯಾರ್, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ. ವಿನ್ಸೆಂಟ್ ಆಳ್ವ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮಿ ನಾರಾಯಣ ಕಾರಂತ, ರಂಗಭೂಮಿ ಉಡುಪಿ ಉಪಾಧ್ಯಕ್ಷರುಗಳಾದ ಭಾಸ್ಕರ ರಾವ್ ಕಿದಿಯೂರು ಮತ್ತು ಎನ್. ಆರ್. ಬಲ್ಲಾಳ್, ಅಂಬಾತನಯ ಅವರ ಸಹೋದರ ವಿಜಯಕುಮಾರ್ ಮುದ್ರಾಡಿ ಉಪಸ್ಥಿತರಿದ್ದರು. ಡಾ. ಮಾಧವಿ ಭಂಡಾರಿ ರಂಗ ಭೂಮಿ ಸಂದೇಶ ವಾಚಿಸಿದರು. ಪೂರ್ಣಿಮಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ರಂಗಭೂಮಿ ಉಡುಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ವಂದಿಸಿದರು.
ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಶಾರದಾ ರೆಸಿಡೆನ್ಷಿಯಲ್ ಶಾಲೆಯ ವಿದ್ಯಾರ್ಥಿಗಳಿಂದ ರಂಗಭೂಮಿ ರಂಗ ಶಿಕ್ಷಣ ಅಭಿಯಾನದ ನಾಟಕ ಝಮ್ ಝಮ್ ಆನೆ ಮತ್ತು ಪುಟ್ಟಿ ನಾಟಕ ಪ್ರದರ್ಶನಗೊಂಡಿತು. ಸಭಾ ಕಾರ್ಯಕ್ರಮದ ಬಳಿಕ ಪ್ರಜ್ಞಾನಂ ಟ್ರಸ್ಟ್ ಉಡುಪಿ ಪ್ರಸ್ತುತಿಯಲ್ಲಿ ವಿದುಷಿ ಸಂಸ್ಕೃತಿ ಪ್ರಭಾಕರ್ ಇವರಿಂದ ನಾಟಕ ಹೆಜ್ಜೆಗೊಲಿದ ಬೆಳಕು ಪ್ರದರ್ಶನಗೊಂಡಿತು.