ರೋಗನಿರೋಧಕತೆ ಮತ್ತು ಸಮುದಾಯದ ಆರೋಗ್ಯದ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿ, ರೋಟರಿ ಮಣಿಪಾಲ ಹಿಲ್ಸ್‌ನ ನೇತೃತ್ವದಲ್ಲಿ ಮನ್ನಾಪಳ್ಳದ 20 ಎಕರೆ ಪ್ರದೇಶದಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ರೊಟೇರಿಯನ್ಸ್ ಎಗೇನ್ಸ್ಟ್ ಮಲೇರಿಯಾ (RAM) ಗ್ಲೋಬಲ್ ಸಂಸ್ಥೆ ಬೆಂಬಲ ನೀಡಿದೆ. ಮಣಿಪಾಲವನ್ನು ಮಲೇರಿಯಾ ಮತ್ತು ಡೆಂಗ್ಯೂ ಮುಕ್ತವಾಗಿಸುವ ಗುರಿಯನ್ನು ಈ ಅಭಿಯಾನ ಹೊಂದಿದ್ದು .HUDCO ಕಾಲೋನಿ ನಿವಾಸಿಗಳು, ಎಂಐಟಿ ಎನ್ಎಸ್ಎಸ್ ಘಟಕಗಳು ಮತ್ತು ಉಡುಪಿ ನಗರ ಸಭೆಯ ಸದಸ್ಯರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ರೋಟರಿ ಮಣಿಪಾಲ ಹಿಲ್ಸ್‌ನ ಅಧ್ಯಕ್ಷರು ಈ ಪ್ರಯತ್ನವನ್ನು ಮುನ್ನಡೆಸುತ್ತಾ, ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡುವ ಮತ್ತು ಒಣ ಎಲೆಗಳಿಂದ ಉಂಟಾಗುವ ಬೆಂಕಿ ಹರಡುವ ಅಪಾಯವನ್ನು ತಡೆಗಟ್ಟುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಬೇಸಿಗೆಯಲ್ಲಿ ಒಣ ಎಲೆಗಳಿಂದ ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದ್ದು, ಇದು ಅಪಾಯಕಾರಿಯಾಗಿದೆ ಎಂದರು. ಉಡುಪಿ ನಗರ ಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ ಮತ್ತು ಕೌನ್ಸಿಲರ್ ಕಲ್ಪನಾ ಸುಧಾಮಾ ಅವರು ಉಪಸ್ಥಿತರಿದ್ದು, ಈ ಉಪಕ್ರಮವನ್ನು ಶ್ಲಾಘಿಸಿದರು.
ವೃದ್ಧರು ಮತ್ತು ಮಕ್ಕಳು ಹೆಚ್ಚಾಗಿ ಈ ಪ್ರದೇಶವನ್ನು ಬಳಸುವುದರಿಂದ, ಈ ಅಭಿಯಾನವು ಸಮುದಾಯಕ್ಕೆ ಸ್ವಚ್ಛ, ಸುರಕ್ಷಿತ ಮತ್ತು ಸಾಮರಸ್ಯದ ವಾತಾವರಣವನ್ನು ಸೃಷ್ಟಿಸುವ ನಿರಂತರ ಗುರಿಯನ್ನ ಹೊಂದಿದ್ದು ಈ ಬೃಹತ್ ಅಭಿಯಾನವನ್ನು ಪ್ರತಿ ತಿಂಗಳ ಎರಡನೇ ಭಾನುವಾರದಂದು ಮಾನ್ಸೂನ್ ಮಳೆಯಾಗುವವರೆಗೆ ನಡೆಸಲಾಗುವುದು. ಸೊಳ್ಳೆಗಳಿಂದ ಹರಡುವ ರೋಗಗಳನ್ನು ತಡೆಗಟ್ಟಲು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಮನವಿ ಮಾಡಲಾಗಿದೆ.
ಸಮುದಾಯದ 9 ವಾರ್ಡ್‌ಗಳು ಮತ್ತು 7 ಉಪ ಕೇಂದ್ರಗಳಿಗೆ ಸೊಳ್ಳೆ ಪರದೆಗಳನ್ನ ಒದಗಿಸಲು, ಸಂತಾನೋತ್ಪತ್ತಿ ತಾಣಗಳನ್ನು ಗುರುತಿಸಿ ನಾಶಪಡಿಸಲು ಹಾಗೂ ಶಾಲಾ ಮಕ್ಕಳು ಮತ್ತು ಸಮುದಾಯದ ಸುರಕ್ಷತೆಗಾಗಿ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವ ಬಗ್ಗೆ ಶಿಕ್ಷಣ ನೀಡುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ.
ಈ ಅಭಿಯಾನವನ್ನು ದೊಡ್ಡ ಮಟ್ಟದಲ್ಲಿ ಮುನ್ನಡೆಸಲು ಅಧ್ಯಕ್ಷರು ರೋಟರಿಯನ್‌ಗಳು, ಸ್ಥಳೀಯ ಸಮುದಾಯದ ಮುಖಂಡರು, ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರೊಂದಿಗೆ ಸೇರಿ ಕಾರ್ಯನಿರ್ವಹಿಸುತಿದ್ದು . ಇದರ ಮೂಲಕ ರೋಗ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.