Header Ads Widget

"ನಮ್ಮ ಶಿಕ್ಷಕರೇ ನಮಗೆ ಸ್ಫೂರ್ತಿ"

ನಮಗೆ ಪಾಠ ಹೇಳಿದ ಶಿಕ್ಷಕರೇ ನಾವು ಶಿಕ್ಷಕರ ಶಿಕ್ಷಣ ವ್ಯಾಸಂಗಕ್ರಮವನ್ನು ಆಯ್ಕೆಮಾಡಿಕೊಳ್ಳಲು ಸ್ಫೂರ್ತಿ ಯಾದವರು. ಅವರ ಬೋಧನ ಸಾಮರ್ಥ್ಯ, ಕರುಣೆ, ಪ್ರೀತಿ, ವಾತ್ಸಲ್ಯ ಮತ್ತು ಮಾರ್ಗದರ್ಶನದ ಆದರ್ಶಗುಣಗಳು ನಮಗೆ ಪ್ರೇರಣೆಯಾಗಿವೆ. ಈ ಗುಣಗಳೇ ನಮ್ಮ ಬದುಕಿಗೆ ಭಾಷ್ಯ ಬರೆದಿವೆ" ಎಂದು ವಿದ್ಯಾರ್ಥಿ- ಶಿಕ್ಷಕರು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದರು. ಈಚೆಗೆ ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ "ಶಿಕ್ಷಕರಾಗಲು ನಮಗೇನು ಪ್ರೇರಣೆ?" ಎಂಬ ವಿಷಯವನ್ನು ಕುರಿತು ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಅವರು ಮಾತನಾಡುತ್ತ ಶಿಕ್ಷಕ ವೃತ್ತಿಯಲ್ಲಿ ಜೀವಂತ ವ್ಯಕ್ತಿಗಳ ಜತೆ ನಡೆಸುವ ಚೇತೋಹಾರಿ ಸಂವಹನ ,ಬೀರುವ ಪ್ರಭಾವ ಅತ್ಯಂತ ಪ್ರಮುಖವಾದುದು. ಕೈಗೆ ಒದಗುವ ವೇತನಕ್ಕೂ ಮಿಗಿಲಾದ ಸಂತೃಪ್ತಿ ಮತ್ತು ಅಪಾರವಾದ ವಿದ್ಯಾರ್ಥಿ ಮನ್ನಣೆಯ ದೆಸೆಯಿಂದಾಗಿ ಅಧ್ಯಾಪನವು ಅನನ್ಯವಾದ ವೃತ್ತಿ ಎಂದು ನುಡಿದರು. ಸ್ಪಂದನ ಮಯ್ಯ ಸ್ವಾಗತಿಸಿದರೆ ದೀಪಿಕಾ ಭಟ್ ಕೃತಜ್ಞತೆ ಸಲ್ಲಿಸಿದರು. ದಿವ್ಯ ಕಾರ್ಯಕ್ರಮ ನಿರೂಪಣೆ ಮಾಡಿದರು.