ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಂಟ ಮನೆತನದ ಪ್ರತಿಷ್ಠಿತ ಕುಟುಂಬವೊಂದು ತೀರಾ ಅಸಹಾಯಕ ಪರಿಸ್ಥಿತಿಯಲ್ಲಿದ್ದು, ಸಮಾಜದ ದಾನಿಗಳ ನೆರವನ್ನು ಯಾಚಿಸುತ್ತಿದೆ.
ತಂದೆಯ ನಿರ್ಲಕ್ಷ್ಯ, ಮಾನಸಿಕ ಅಸ್ವಸ್ಥೆಯಾಗಿರುವ ತಾಯಿ ಹಾಗೂ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ತಂಗಿ ಒಂದೆಡೆಯಾದರೆ, ಇವರೀರ್ವರ ಸೇವೆಗೆ ಕೆಲಸ ಬಿಟ್ಟು ನಿಂತಿರುವ ಅಕ್ಕ ಯಾವುದೇ ಆದಾಯವಿಲ್ಲದೆ ಅಕ್ಷರಶ: ಕಂಗಾಲಾಗಿದ್ದಾಳೆ.
ಇದು ಸಿನೆಮಾ ಕಥೆಯಂತೆ ಕಂಡರೂ, ದ.ಕ. ಜಿಲ್ಲೆಯ ಪುತ್ತೂರಿನ ಮಡಾವು ಊರಿನ ನೊಂದ ಕುಟುಂಬದ ದುರಂತ ಕಥೆಯಿದು. ಈ ಕುಟುಂಬಕ್ಕೆ ಸ್ಪಂದಿಸಿದ ಸಮಾಜ ಸೇವಕ ವಿಶು ಶೆಟ್ಟಿ ಅವರು ಕಳೆದ ಎರಡು ವರ್ಷಗಳ ಹಿಂದೆ ಕುಟುಂಬದ ನೋವಿಗೆ ಸ್ಪಂದಿಸಿ ಸಹಾಯ ಹಸ್ತ ಚಾಚಿದ್ದಾರೆ. ಈ ಕುಟುಂಬ ದುರಂತದ ಅಂಚಿಗೆ ತಲುಪದಂತೆ ಸಮಾಜದ ದಾನಿಗಳ ತುರ್ತು ನೆರವಿನ ಅಗತ್ಯವಿದೆ.
ಏನಿದು ಸಮಸ್ಯೆ? : ಈ ಕುಟುಂಬದಲ್ಲಿ ಅಕ್ಕ ಗೀತಾ ರೈ (29) ಹಾಗೂ ತಂಗಿ ನೀತಾ ರೈ(27) ಇಬ್ಬರೂ ಬಿಎಸ್‌ಸಿ ಪದವೀಧರರಾಗಿದ್ದಾರೆ. ತಂಗಿ ನೀತಾ ರೈ ಅನಾರೋಗ್ಯದಿಂದ ಕಳೆದ 7 ವರ್ಷಗಳಿಂದ ನಿಂತು ನಡೆಯಲಾಗದೆ ಹಾಸಿಗೆ ಹಿಡಿದರೆ, ತಾಯಿ ಕೂಡಾ ಮಾನಸಿಕ ಅಸ್ವಸ್ಥತೆಗೆ ಒಳಗಾಗಿರುವ ಕುಟುಂಬವನ್ನು ಇನ್ನಷ್ಟು ಸಂಕಷ್ಟಕ್ಕೀಡು ಮಾಡಿದೆ. ಹುಟ್ಟಿಸಿದ ಅಪ್ಪ ಎಂದೋ ತನ್ನ ಜವಾಬ್ದಾರಿಯನ್ನು ಮರೆತು ಬಿಟ್ಟಿದ್ದಾರೆ !
ಕುಟುಂಬಕ್ಕೆ ಆಸರೆಯಾದ ವಿಶು ಶೆಟ್ಟಿ: ವಿಧಿಯಾಟಕ್ಕೆ ಕಂಗಾಲಾದ ಅಕ್ಕ ಗೀತಾ ರೈ, ಸಮಾಜ ಸೇವಕ ವಿಶು ಶೆಟ್ಟಿ ಅವರಿಗೆ ತನ್ನ ಕುಟುಂಬದ ದುರಂತ ಕಥೆಯನ್ನು ತಿಳಿಸಿ ನೆರವು ಯಾಚಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ವಿಶು ಶೆಟ್ಟಿ ಕಳೆದ 2 ವರ್ಷಗಳ ಹಿಂದೆ ಅವರ ಸ್ಥಳಕ್ಕೆ ತೆರಳಿ, ತಾಯಿಯನ್ನು ಮಂಜೇಶ್ವರದ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿ, ತಂಗಿ ನೀತಾ ರೈ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಇದೀಗ ತಂಗಿ ನೀತಾ ರೈ ಅವರ ಆರೋಗ್ಯ ಸ್ಥಿತಿ ಮತ್ತೆ ಹದಗೆಟ್ಟಿದ್ದು, ವಿಶು ಶೆಟ್ಟಿ ಅವರ ನೆರವಿನಿಂದ ಬಾಳಿಗಾ ಆಸ್ಪತ್ರೆ ಹಾಗೂ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಅಕ್ಕ ಗೀತಾ ರೈ ಕಾಲೇಜು ದಿನಗಳಿಂದ ಕೆಲಸ ಮಾಡುತ್ತಿದ್ದು ತದನಂತರ ಖಾಸಗಿ ಕಂಪನಿಯಲ್ಲಿ ಸುಮಾರು 7 ವರ್ಷಗಳ ಕಾಲ ಕೆಲಸ ಮಾಡಿ ಆ ಸಂಪಾದನೆಯ ಲಕ್ಷಾಂತರ ಹಣವನ್ನು ಕೂಡಾ ಸಹೋದರಿಯ ಚಿಕಿತ್ಸೆಗೆ ಖರ್ಚು ಮಾಡಿದ್ದು ಇದೀಗ ಉಳಿತಾಯ ಏನೂ ಇಲ್ಲದಂತಾಗಿದೆ. ಆದರೆ ತಾಯಿ ಮತ್ತು ತಂಗಿಯ ಅನಾರೋಗ್ಯ ಕಾರಣದಿಂದಾಗಿ ಕೆಲಸ ಬಿಟ್ಟು ಸೇವೆಗೆ ನಿಂತಿದ್ದಾರೆ. ಚಿಕಿತ್ಸೆ ಹಾಗೂ ಉದರ ಪೋಷಣೆಗೆ ಬಿಡಿಕಾಸು ಇಲ್ಲದೆ ಕಂಗಾಲಾಗಿದ್ದಾರೆ. ಸಮಾಜದ ದಾನಿಗಳ ನೆರವು ಯಾಚಿಸುತ್ತಿದ್ದಾರೆ.
ಈ ಕುಟುಂಬಕ್ಕೆ ಸಹಾಯ ಮಾಡಲಿಚ್ಚಿಸುವ ಮಂದಿ ಗೀತಾ ರೈ, ಕೆನರಾ ಬ್ಯಾಂಕ್ ಪುತ್ತೂರು ಶಾಖೆ, ಸೇವಿಂಗ್ಸ್ ಅಕೌಂಟ್ ನಂ. 02082210006898, ಐಎಫ್‌ಎಸ್‌ಸಿ ಕೋಡ್ CNRB0010134 ಅಥವಾ ಗೀತಾ ರೈ ಅವರ ಮೊಬೈಲ್ ನಂಬರ್ 9886713260 ಗೆ ಗೂಗಲ್ ಪೇ ಫೋನ್ ಫೆ ಮಾಡಬಹುದು.
------------------------------------------------------------
ಬಾಲ್ಯದಿಂದಲೇ ತಂದೆ ನಮ್ಮನ್ನು ಕೈ ಬಿಟ್ಟಿದ್ದಾರೆ. ಬಹಳ ಕಷ್ಟಪಟ್ಟು ಓದಿ ಪದವಿ ಪಡೆದಿದ್ದೇವೆ. ಕೆಲಸಕ್ಕೆ ಸೇರಿ ನಮ್ಮ ಕಾಲ ಮೇಲೆ ನಿಂತು ಕುಟುಂಬವನ್ನು ಸಂಭಾಳಿಸುವ ಪ್ರಯತ್ನದ ಹಂತದಲ್ಲಿಯೇ ತಾಯಿ ಹಾಗೂ ತಂಗಿಯ ಅನಾರೋಗ್ಯ ನನ್ನನ್ನು ಕಂಗಾಲಾಗಿಸಿದೆ. ಇವರ ಅನಾರೋಗ್ಯ ಕಾರಣದಿಂದಾಗಿ ನಾನು ಕೆಲಸಕ್ಕೆ ಸೇರಲು ಆಗುತ್ತಿಲ್ಲ. ಕಳೆದ ಎರಡು ವರ್ಷಗಳಿಂದ ಸಮಾಜ ಸೇವಕ ವಿಶು ಶೆಟ್ಟಿ ಅವರು ನಮಗೆ ಬಹಳಷ್ಟು ಆರ್ಥಿಕ ನೆರವು ನೀಡಿದಲ್ಲದೆ ಧೈರ್ಯ ತುಂಬಿದ್ದಾರೆ. ನನ್ನ ತಂಗಿ ಹಾಗೂ ತಾಯಿಯ ಚಿಕಿತ್ಸೆಗಾಗಿ ಸಮಾಜದ ಸಹೃದಯರ ನೆರವನ್ನು ಯಾಚಿಸುತ್ತಿದ್ದೇನೆ.
ಗೀತಾ ರೈ ಪುತ್ತೂರು.
---------------------------------------------------------
ಪುತ್ತೂರಿನ ಈ ಬಂಟ ಕುಟುಂಬದ ಈ ನೋವಿನ ಕಥೆಗೆ ಅಂತ್ಯ ಹಾಡಲು ಸಮಾಜದ ತುರ್ತು ಸ್ಪಂದನೆಯ ಅಗತ್ಯವಿದೆ. ತೀರಾ ಅನಾರೋಗ್ಯದಿಂದ ಬಳಲುತ್ತಿದ್ದ ಇವರಿಗೆ 15ದಿನಗಳ ಹಿಂದೆ ತುರ್ತು ಉಡುಪಿಗೆ ಕರೆಸಿಕೊಂಡು ಸ್ವರ್ಗ ಆಶ್ರಮದಲ್ಲಿ 2 ದಿನ ಆಶ್ರಯ ನೀಡಿ ತದ ನಂತರ ಚಿಕಿತ್ಸೆಗೆ ದಾಖಲಿಸಲಾಯಿತು. ಅನಾರೋಗ್ಯ ಪೀಡಿತ ತಂಗಿ ಹಾಗೂ ಮಾನಸಿಕ ಅಸ್ವಸ್ಥೆ ತಾಯಿಗೆ ಚಿಕಿತ್ಸೆ ನೀಡಲು ನಿರುದ್ಯೋಗಿ ಗೀತಾ ರೈ ಅವರಿಂದ ಸಾಧ್ಯವಿಲ್ಲ. ಆದಾಯವೇ ಇಲ್ಲದೆ ಈ ಕುಟುಂಬ ಬದುಕುವುದಾದರೂ ಹೇಗೆ ? ಮಾನವೀಯ ದೃಷ್ಟಿಯಿಂದ ಕಳೆದ 2 ವರ್ಷಗಳಿಂದ ನನ್ನಿಂದಾದಷ್ಟು ನೆರವು ನೀಡಿದ್ದೇನೆ. ಈ ಕುಟುಂಬಕ್ಕೆ ಇದೀಗ ಸಹೃದಯ ದಾನಿಗಳ ತುರ್ತು ನೆರವು ಬೇಕಾಗಿದೆ.
ವಿಶು ಶೆಟ್ಟಿ ಅಂಬಲಪಾಡಿ, ಸಮಾಜ ಸೇವಕರು.