Header Ads Widget

ಉಡುಪಿ ಜಿಲ್ಲಾ ಯುವಬ್ರಾಹ್ಮಣ ಪರಿಷತ್ ವತಿಯಿಂದ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ವಿತರಣೆ

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ ವತಿಯಿಂದ ಮಣಿಪಾಲ್ ಆರೋಗ್ಯ ಕಾರ್ಡ್ ವಿತರಣೆ ಸಮಾರಂಭವು ಇತ್ತೀಚೆಗೆ ಗುಂಡಿಬೈಲಿನ ಬ್ರಾಹ್ಮಿ ಸಭಾಭವನದಲ್ಲಿ ನಡೆಯಿತು. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಸರ್ಜರಿ ವಿಭಾಗದ ಯೂನಿಟ್ ಮುಖ್ಯಸ್ಥರಾದ ಡಾ. ಬದರೀಶ್ ಎಲ್., ಪರಿಷತ್ತಿನ ಮಾಜಿ ಅಧ್ಯಕ್ಷ ಹಾಗೂ ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ರಾಗಿದ್ದ ಶ್ರೀ ರಂಜನ್ ಕಲ್ಕೂರ್ ಮತ್ತು ಮಾಹೆ ಮಣಿಪಾಲದ ಲೆಕ್ಕಪತ್ರ ಹಾಗೂ ಹಣಕಾಸು ವಿಭಾಗದ ನಿರ್ದೇಶಕರಾಗಿರುವ ಶ್ರೀಮತಿ ಸರಸ್ವತಿ ಕೆ. ಯವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಆರೋಗ್ಯ ಕಾರ್ಡಿನ ಸಂಚಾಲಕರಾದ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಚೈತನ್ಯ ಎಂ.ಜಿ. ಅವರು ಆರೋಗ್ಯ ಸುರಕ್ಷಾ ಕಾರ್ಡಿನ ಪ್ರಯೋಜನ ಹಾಗೂ ಉದ್ದೇಶದ ಬಗ್ಗೆ ಸಭೆಗೆ ತಿಳಿಸಿದರು. ಸಾಂಕೇತಿಕವಾಗಿ ಕೆಲವು ಕಾರ್ಡುಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಮುಖ್ಯ ಅತಿಥಿಗಳಾದ ಡಾ. ಬದರೀಶ್ ಎಲ್. ಮಾತನಾಡುತ್ತ ಇತ್ತೀಚಿನ ದಿನಗಳಲ್ಲಿ ಸ್ತ್ರೀಯರು ಎದುರಿಸುತ್ತಿರುವ ದೈಹಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಮತ್ತು ಪರಿಹಾರದ ಬಗ್ಗೆ ಹಾಗೂ ಮಹಿಳೆಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ತಿಳಿ ಹೇಳಿದರು. ಈ ಸಂದರ್ಭದಲ್ಲಿ ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ, ನೊಂದವರಿಗೆ, ಅಸಹಾಯಕರಿಗೆ ಯಾವುದೇ ಪಲಾಪೇಕ್ಷೆ ಇಲ್ಲದೆ ತಮ್ಮ ಕೈಯಲ್ಲಾಗುವ ಸಹಾಯವನ್ನು ಮಾಡುತ್ತಿರುವ ಸಮಾಜಸೇವಕರಾದ ನಿತ್ಯಾನಂದ ಒಳಕಾಡು ರವರಿಗೆ ಮತ್ತು ತಮ್ಮ ಸಂಜೀವಿನಿ ಆಂಬುಲೆನ್ಸ್ ಮೂಲಕ ಎಲ್ಲಾ ಸಮಯದಲ್ಲಿಯೂ ತುರ್ತುಸೇವೆ ಒದಗಿಸುತ್ತಿರುವ ಶ್ರೀ ಪ್ರಕಾಶ್ ಪೂಜಾರಿಯವರಿಗೆ ಆರ್ಥಿಕ ಸಹಾಯದೊಂದಿಗೆ ಪರಿಷತ್ತಿನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಶ್ರೀ ನಿತ್ಯಾನಂದ ಒಳಕಾಡು ಅವರು ಮಾತನಾಡುತ್ತಾ ಈ ಸಮಾಜದಲ್ಲಿ ಹುಟ್ಟಿದ ಮೇಲೆ ಸಮಾಜದ ಋಣ ತೀರಿಸುವುದು ಪ್ರತಿಯೊಬ್ಬನ ಆಧ್ಯ ಕರ್ತವ್ಯವಾಗಿದೆ. ಅದರಂತೆ ತಾನು ಜಾತಿ ಮತ ಭೇದವಿಲ್ಲದೆ ನಿಸ್ವಾರ್ಥ ಸಮಾಜ ಸೇವೆಯ ಮೂಲಕ ಸಮಾಜದ ಋಣವನ್ನು ತೀರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇನೆ ಮತ್ತು ಈ ಕೆಲಸದಲ್ಲಿ ಆತ್ಮ ತೃಪ್ತಿಯನ್ನು ಹೊಂದಿದ್ದೇನೆ. ಈ ನಿಟ್ಟಿನಲ್ಲಿ ಯುವ ಬ್ರಾಹ್ಮಣ ಪರಿಷತ್ ಕೂಡ ಕೈಜೋಡಿಸಿರುವುದು ಅತ್ಯಂತ ಪ್ರಶಂಸನೀಯ ಎಂದು ಅಭಿಪ್ರಾಯಪಟ್ಟರು. ಪರಿಷತ್ತಿಗೆ ಮೂರು ಜನ ಹೊಸ ಸದಸ್ಯರನ್ನು ಸೇರ್ಪಡೆ ಗೊಳಿಸಲಾಯಿತು. ವಿಷ್ಣುಪ್ರಸಾದ್ ಪಾಡಿಗಾರ್, ರವೀಂದ್ರ ತಂತ್ರಿ ಸನ್ಮಾನ ಪತ್ರ ವಾಚಿಸಿದರು. ದುರ್ಗಾಪ್ರಸಾದ್, ರಾಧಿಕಾ ಚಂದ್ರಕಾಂತ್, ರೂಪಶ್ರೀ ಭಟ್, ಸುನೀತಾ ಚೈತನ್ಯ, ದಿವ್ಯ ಪಾಡಿಗಾರ್, ಆಶಾ ರಘುಪತಿ ರಾವ್, ಮಾಲತಿ ತಂತ್ರಿ, ಶಶಿಪ್ರಭಾ ಕಾರಂತ್ ಸಹಕರಿಸಿದರು. ಪರಿಷತ್ತಿನ ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ, ಕರ್ನಾಟಕ ಬ್ಯಾಂಕ್ ಎ.ಜಿ.ಎಂ. ವಾದಿರಾಜ ಭಟ್ ಉಪಸ್ಥಿತರಿದ್ದರು. ಪರಿಷತ್ತಿನ ಅಧ್ಯಕ್ಷರಾದ ಚಂದ್ರಕಾಂತ್ ಕೆ. ಎನ್. ಪ್ರಸ್ತಾವಿಸಿ ಸ್ವಾಗತಿಸಿದರು. ಅಮಿತಾ ಕ್ರಮದಾರಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ ವಂದಿಸಿದರು.