Header Ads Widget

ಗೋವಾದಲ್ಲಿ ಮೇಳೈಸಿದ ಯಕ್ಷ ಶರಧಿ

ಉಡುಪಿ : ಯಕ್ಷಗಾನ ಕಲೆ ಕಲಿಯಲು, ಅಭ್ಯಾಸಿಸಲು ಯಾವುದೇ ಪ್ರಾದೇಶಿಕ ಸರಹದ್ದಿನ ಭಯವಿಲ್ಲ. ಈ ನಿಟ್ಟಿನಲ್ಲಿ ಗೋವಾದ ಕನ್ನಡ ಸಮಾಜ ಯಕ್ಷಗಾನ ಪ್ರೇಮವನ್ನು ಮೆರೆದಿರುವುದು ಅಭಿನಂದನೀಯ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಭಾನುವಾರ ಗೋವಾ ಪಣಜಿಯ ಕನ್ನಡ ಸಮಾಜದ ಆಶ್ರಯದಲ್ಲಿ ಮೆನೆಜಸ್ ಭ್ರಗಾಂಜ ಸಭಾಂಗಣದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕçತಿ ಇಲಾಖೆಯ ಜಂಟಿ ಸಹಕಾರದಲ್ಲಿ ಹಮ್ಮಿಕೊಂಡ 'ಯಕ್ಷ ಶರಧಿ' ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಡಿದರು.

ಇಂದು ಯಕ್ಷಗಾನ ಸೀಮೋಲ್ಲಂಘನೆ ನಡೆಸಿದೆ. ಬೆಂಗಳೂರು, ಮುಂಬಾಯಿ, ದೆಹಲಿ ಅಲ್ಲದೆ ಅಮೇರಿಕಾದಲ್ಲಿಯೂ ತನ್ನ ಕಂಪನ್ನು ಬೀರುತ್ತಿದೆ. ಅಪಾರ ಯಕ್ಷಗಾನ ಪ್ರೇಮಿಗಳನ್ನು ಹುಟ್ಟುಹಾಕಿದೆ. ಅಕಾಡೆಮಿ ಇಂತಹ ಯಕ್ಷಗಾನ ಕಾರ್ಯಕ್ರಮಗಳಿಗೆ ನಿರಂತರ ಪ್ರೋತಾಹ ನೀಡಲಿದೆ. ಯಕ್ಷಗಾನ ಅಕಾಡೆಮಿ ಅಧ್ಯಕ್ಷನಾಗಿ ಸಾಧ್ಯವಾದಷ್ಟು ಪ್ರವಾಸ ಮಾಡಿ, ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಮಾಡುತ್ತಿದ್ದೇನೆ. ಯಕ್ಷಗಾನ ಕಲೆ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು. ದೇಶ ವಿದೇಶದಿಂದಲೂ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಗಬೇಕು. ಈ ನಿಟ್ಟಿನಲ್ಲಿ ಗೋವಾ ಕನ್ನಡ ಸಮಾಜದ ಕಲಾಸೇವೆ ಅನುಕರಣೀಯ. ಕಲೆಯ ಈ ಪ್ರೀತಿಗೆ ತಲೆಬಾಗಿ ಅಕಾಡೆಮಿಯ ರಿಜಿಸ್ಟ್ರಾರ್ ಸೇರಿದಂತೆ, ಸದಸ್ಯರು ಕೂಡಾ ಭಾಗವಹಿಸಿದ್ದಾರೆ ಎಂದು ಅವರು ಹೇಳಿದರು.

ಅಕಾಡೆಮಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದು ಅಕಾಡೆಮಿಗೆ ಬಲತುಂಬಿದೆ. ಸರಕಾರ ನೀಡುವ ಅನುದಾನ ಯಕ್ಷಗಾನ ಕಲೆ, ಕಲಾವಿದರಿಗೆ ಸಲ್ಲಬೇಕು ಎನ್ನುವುದು ನಮ್ಮ ಬಯಕೆಯಾಗಿದೆ. ಅಲ್ಲದೆ ಮಕ್ಕಳಿಗೆ ಯಕ್ಷಗಾನವನ್ನು ಕಲಿಸಬೇಕು ಎನ್ನುವ ಮಹಾತ್ವಾಕಾಂಕ್ಷೆಯನ್ನು ಅಕಾಡೆಮಿ ಹೊಂದಿದೆ. ಈ ನಿಟ್ಟಿನಲ್ಲಿ ಯಕ್ಷಗಾನವನ್ನು ಮಕ್ಕಳಿಗೆ ಕಲಿಸುವ ಸಂಘಸoಸ್ಥೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಗೋವಾ ಬಂಟ್ಸ್ ಸಂಘ ಮತ್ತು ಮಡಗಾಂವ್ ವಿಮಾ ಸರ್ವೇಯರ್ ಸಂಸ್ಥೆಯ ಕಾರ್ಯದರ್ಶಿ ಸುನೀಲ್ ಶೆಟ್ಟಿ, ಪತ್ರಕರ್ತ ಹಾಗೂ ಭಾಗವತ ಎ.ಜಿ.ಶಿವಾನಂದ ಭಟ್, ಗೋವಾ ವಿಶ್ವವಿದ್ಯಾಲಯದ ಸಮಾಜ ಶಾಸ್ತ್ರದ ಹಿರಿಯ ಪ್ರಾಧ್ಯಾಪಕ ಡಾ.ಗಣೇಶ್ ಸೋಮಯಾಜಿ ಸಂದರ್ಭೋಚಿತವಾಗಿ ಮಾತನಾಡಿ, ಯಕ್ಷಗಾನ ಕಲೆಯ ಮಹತ್ವವನ್ನು ಸಾರಿದರು.

ಕಾರ್ಯಕ್ರಮದಲ್ಲಿ ಅರ್ಥಧಾರಿ ಅಜಿತ್ ಕಾರಂತ ಬೆಂಗಳೂರು ಇವರು ಯಕ್ಷಸಾಹಿತ್ಯ ಸಾಂಗತ್ಯ ಎಂಬ ವಿಷಯದ ಬಗ್ಗೆ ಮಾತನಾಡಿದರು. ಹೊನ್ನವಳ್ಳಿಯ ಶ್ರೀ ವೆಂಕಟೇಶ್ವರ ಯಕ್ಷಗಾನ ಕಲಾ ಸಂಘದ ವತಿಯಿಂದ ಶರಸೇತು ಬಂಧನ ತಾಳಮದ್ದಲೆ ಹಾಗೂ ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷಗಾನ ಮಂಡಳಿ ಹಳುವಳ್ಳಿ ಕಳಸ ಇವರಿಂದ ಸುಧನ್ವಾರ್ಜುನ ಯಕ್ಷಗಾನ ಪ್ರದರ್ಶನ ನಡೆಯಿತು.

ಈ ಸಂದರ್ಭದಲ್ಲಿ ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾ ರ್ ನಮ್ರತಾ ಎನ್., ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣ್ ಕುಮಾರ್, ಕಾರ್ಯದರ್ಶಿ ಶ್ರೀಕಾಂತ್ ಲೋಣಿ, ಯಕ್ಷಗಾನ ಅಕಾಡೆಮಿ ಸದಸ್ಯ ಸಂಚಾಲಕ ಕೊಪ್ಪಲ ಮೋಹನ ಕದ್ರಿ, ಸದಸ್ಯರುಗಳಾದ ಜಿ.ಎಸ್.ಉಲ್ಲಾಳ್, ಗುರುರಾಜ ಭಟ್, ರಾಜೇಶ್, ರಾಘವ., ಪುಟ್ಟಸ್ವಾಮಿ, ದಯಾನಂದ ಬೆಳ್ಳಾಲ, ಪ್ರಥ್ವಿ ರಾಜೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.