Header Ads Widget

ಮುಖ್ಯಮಂತ್ರಿಗಳಿಗೆ ಮಾಧ್ಯಮ ಲೋಕದ ನೂತನ ಪುಸ್ತಕ:

ಹಿರಿಯರ ಸೇವೆ ಶ್ಲಾಘನೀಯ ಎಂದ ಸಿಎಂ

ಬೆಂಗಳೂರು:: ಅಮೃತ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಮಾಧ್ಯಮದ ಹಿರಿಯ ಪತ್ರಕರ್ತರ ಮನೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವೇ ಭೇಟಿ ನೀಡಿ ಕುಟುಂಬಸ್ಥರ ಸಮ್ಮುಖದಲ್ಲಿ ಹಿರಿಯ ರನ್ನು ಗೌರವಿಸಿರುವುದು ಅಭಿನಂದನಾರ್ಹವಾದದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದರು.

 

ಹಿರಿಯ ಪತ್ರಕರ್ತರುಗಳ ಮನೆಗೆ ಭೇಟಿ ನೀಡಿ ಕೆಯುಡಬ್ಲೂಜೆ ಗೌರವ ನೀಡಿದ್ದಲ್ಲದೆ, ಅವರ ಅನುಭವ ಮತ್ತು ಅಭಿಪ್ರಾಯಗಳನ್ನು ದಾಖಲೀಕರಣ ಮಾಡಿರುವ ವಿಷಯವನ್ನು ವಿಧಾನಸೌಧದಲ್ಲಿ  ಮುಖ್ಯ ಮಂತ್ರಿ ಗಳ ಗಮನಕ್ಕೆ ತಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು, ಈ ಬಗ್ಗೆ ಪುಸ್ತಕವನ್ನು ಹೊರತಂದಿರುವುದಾಗಿ ಅವರಿಗೆ ' ಮಾಧ್ಯಮ ಲೋಕದ ಅಮೃತ ಬೀಜ' ಪುಸ್ತಕದ ಪ್ರತಿಯನ್ನು ನೀಡಿದರು.

 

ಪುಸ್ತಕದಲ್ಲಿದ್ದ ಮೊದಲ ಹೆಸರುಗಳು ಕಲ್ಲೆ ಶಿವೋತ್ತಮರಾವ್ ಮತ್ತು ಟಿಜೆಎಸ್ ಜಾರ್ಜ್ ಅವರದು. ಇದನ್ನು ನೋಡಿದ ಸಿಎಂ, ಇವರಿಗೆಲ್ಲ ತೊಂಬತ್ತು ವರ್ಷ ದಾಟಿರಬೇಕಲ್ವಾ? ಈಗ ಹೇಗಿದ್ದಾರೆ? ಎಂದು ಕುತೂಹಲದಿಂದ ಕೇಳಿ ತಿಳಿದುಕೊಂಡರು. ಆ ಕಾಲಘಟ್ಟದ ಹಿರಿಯರುಗಳ ಅನುಭವ ದೊಡ್ಡದು. ಅದನ್ನು ದಾಖಲೆ ಮಾಡಿರುವುದು ಒಳ್ಳೆಯ ಕೆಲಸ ಎಂದು ಹೇಳಿದರು.


ತೊಂಬತ್ತು ವಸಂತ ದಾಟಿರುವ ಪಿ.ರಾಮಯ್ಯ ಅವರು ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದಾಗ, ಅವರು ಬೇಗ ಗುಣಮುಖರಾಗಲಿ ಎಂದರು.

 

ಹಿರಿಯರನ್ನು ಅವರ ಮನೆಯಲ್ಲಿಯೇ ಗೌರವಿಸಿರುವುದು ನಿಮಗೂ, ಪತ್ರಕರ್ತರ ಸಂಘಕ್ಕೂ ಗೌರವ ತರುವ ಸಂಗತಿ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮತ್ತಿತರರು ಇದ್ದರು.