ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು ಘಟಕ, ಐಕ್ಯುಎಸಿ ಹಾಗೂ ಕನ್ನಡ ವಿಭಾಗ ಎಂಜಿಎಂ ಕಾಲೇಜು ಉಡುಪಿ ಇದರ ಆಶ್ರಯದಲ್ಲಿ ದಿ. ಡಾ ಉಪ್ಪಂಗಳ ರಾಮ ಭಟ್ ನೆನಪು, ಪುಸ್ತಕ ವಿತರಣೆ ಹಾಗೂ ಪ್ರಸಿದ್ಧ ಕವಿ ಡುಂಡಿರಾಜ್ ಅವರೊಂದಿಗೆ ಮಾತುಕತೆ ಕಾರ್ಯಕ್ರಮ ಮಾರ್ಚ್ 22 ರಂದು ಶನಿವಾರ ಎಂಜಿಎಂ ಕಾಲೇಜಿನ ಎ ವಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಖ್ಯಾತ ಚುಟುಕು ಕವಿ ಸಾಹಿತಿ ಎಚ್ ಡುಂಡಿರಾಜ್, ಶಿಕ್ಷಣ ನಮಗೆ ಬದುಕಲು ದಾರಿ ತೋರಿಸಿದರೆ ಸಾಹಿತ್ಯ ಮತ್ತು ಕಲೆ ನಮ್ಮ ವ್ಯಕ್ತಿತ್ವ ವಿಕಸನಕ್ಕೆ ದಾರಿ ತೋರಿಸಿದೆ. ಕವನಗಳು ಹುಟ್ಟುವುದು ಆಕಸ್ಮಿಕವಾದರೂ ಕೂಡ, ಕವಿಯ ಭಾವನೆಗಳು ಅದರಲ್ಲಿ ಅಡಕವಾಗಿರುತ್ತವೆ. ಕವಿಗೆ ಸರಿಯಾದ ಕಾವ್ಯ ಪ್ರಜ್ಞೆಯಿದ್ದಾಗ ಮಾತ್ರ ಉತ್ತಮ ಕವನಗಳು ಸಾಹಿತ್ಯ ಬರಲು ಸಾಧ್ಯ ಎಂದರು. ವಿದ್ಯಾರ್ಥಿಗಳು ಓದುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಕವನಗಳನ್ನು ಬರೆಯುವ ಹವ್ಯಾಸ ಈಗಿನಿಂದಲೇ ರೂಡಿಸಿಕೊಂಡಾಗ ಮುಂದಿನ ದಿನಗಳಲ್ಲಿ ಉತ್ತಮ ಸಾಹಿತಿಯಾಗಿ ಗುರುತಿಸಿಕೊಳ್ಳಬಹುದು ಎಂದರು.
ಚುಟುಕುಗಳು ಸಣ್ಣ ಸಣ್ಣ ಪದವಾಗಿದ್ದರೂ ಕೂಡ ಅನೇಕ ರೀತಿಯ ಗಂಭೀರವಾದ ವಿಚಾರಗಳು ಹಾಸ್ಯದ ವಿಡಂಬನೆ ಯೊಂದಿಗೆ ಕೂಡಿರುವುದರಿಂದ ಹೆಚ್ಚಿನವರು ಅದನ್ನು ಇಷ್ಟ ಪಡುತ್ತಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ವಹಿಸಿ ಈ ರೀತಿ ಕಾರ್ಯಕ್ರಮಗಳು ನಮ್ಮ ಕಾಲೇಜಿನಲ್ಲಿ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಪ್ರಜ್ಞೆ ಹೆಚ್ಚಾಗಲು ಪೂರಕ ಎಂದರು. ಶಂಕರಿ ರಾಮ ಭಟ್ ಪುಸ್ತಕಗಳನ್ನು ವಿತರಿಸಿ ಶುಭ ಹಾರೈಸಿದರು ವೇದಿಕೆಯಲ್ಲಿ ಉಪ ಪ್ರಾಂಶುಪಾಲ ಡಾ. ವಿಶ್ವನಾಥ್ ಪೈ, ಐ ಕ್ಯೂ ಎಸಿ ಸಂಯೋಜಿಕೆ ಶೈಲಜ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಪುತ್ತಿ ವಸಂತ್ ಕುಮಾರ್, ಕಸಾಪ ಉಡುಪಿ ತಾಲೂಕು ಗೌರವ ಕಾರ್ಯದರ್ಶಿ ಜನಾದ೯ನ್ ಕೊಡವೂರು, ಮುಂತಾದವರಿದ್ದರು.
ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ ಸ್ವಾಗತಿಸಿ ಪ್ರಸ್ತಾವನೆಗೈದರು. ಸಾಮಾಜಿಕ ಜಾಲತಾಣ ವಿಭಾಗದ ಸಿದ್ಧಬಸಯ್ಯಸ್ವಾಮಿ ಚಿಕ್ಕಮಠ ವಂದಿಸಿದರು. ತಾಲೂಕು ಸಂ.ಕಾಯ೯ದಶಿ೯ ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿದರು. ಈ ಸಂದರ್ಭ ಡಾ. ಉಪ್ಪಂಗಳ ರಾಮ್ ಭಟ್ ಅವರ ಕೃತಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.