ಉಡುಪಿ : ದಲಿತರ ಮೀಸಲು ಹಣದಿಂದ ನಿರ್ಮಾಣಗೊಂಡಿದ್ದ ಉಡುಪಿ ನಗರ ಸಭೆಯ ವ್ಯಾಪ್ತಿ ಯಲ್ಲಿರುವ ಬನ್ನಂಜೆ ಗಾಂಧಿಭವನವನ್ನು ಬೇರೆಯವರಿಗೆ ಹಸ್ತಾಂತರಿಸಿದರೆ ಉಗ್ರಹೋರಾಟ ನಡೆಸು ವುದಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಜಯನ್ ಮಲ್ಪೆ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ
ಕಳೆದ 90ವರ್ಷಗಳಿಂದ ಲಕ್ಶ್ಮೀನಾರಾಯಣ ಭಜನಾ ಮಂಡಳಿಯಾಗಿದ್ದ ಈ ಜಾಗದಲ್ಲಿ ಆಗಿನ ಪುರಸಭೆ ಅಧ್ಯಕ್ಷರಾಗಿದ್ದ ಡಾ.ವಿ.ಎಸ್.ಆಚಾರ್ಯ ಮತ್ತು ರೊನಾಲ್ಡ್ ಪ್ರವೀನ್ ಕುಮಾರ್‌ರವರು ದಲಿತರ ಸಭೆ-ಸಮಾರಂಭ, ಸಾಂಸ್ಕರಿಕ ಹಾಗೂ ದಾರ್ಮಿಕ ಕಾರ್ಯಕ್ರಮಕ್ಕೆ ಮೀಸಲು ನಿಧಿಯನ್ನು ಬಳಸಿಕೊಂಡು 1985ರಲ್ಲಿ ಗಾಂಧಿಭವನವನ್ನು ನಿರ್ಮಿಸಲಾಗಿತ್ತು.
ಈ ಗಾಂಧಿಭವನದಲ್ಲಿ ದಲಿತ ಸಂಘರ್ಷ ಸಮಿತಿ ಕಳೆದ ಸುಮಾರು 40ವರ್ಷಗಳಿಂದ ದಲಿತರ ಕುಂದು ಕೊರತೆ ಸಭೆ ನಡೆಸಿಕೊಂಡು ಬರುತ್ತಿತ್ತು. ಜೊತೆಗೆ ಲಕ್ಶ್ಮೀನಾರಾಯಣ ಭಜನಾ ಮಂಡಳಿ ಹಾಗೂ ಉಡುಪಿ ತಾಲೂಕಿನ ದಲಿತರ ಸಾಂಸ್ಕೃತಿಕ, ತರಬೇತಿ, ಮದುವೆ ಸಭೆ ಸಮಾರಂಭ ನಡೆಸಿಕೊಂಡು ಬರಲಾಗುತ್ತಿತ್ತು.
ಈ ಗಾಂಧಿಭವನದ ಕಟ್ಟಡ ಕ್ರಮೇಣ ಸರಿಯಾದ ನಿರ್ವಹಣೆಗೆ ಉಡುಪಿ ನಗರಸಭೆ ಹಣನೀಡದೆ ಇರುವುದರಿಂದ ಕಟ್ಟಡ ಶಿಥಿಲಗೊಂಡು ಪಾಳುಬಿದ್ದಿದೆ. ಇದೀಗ ದಲಿತರ ಮೀಸಲು ಹಣದಿಂದ ನಿರ್ಮಿಸಿರುವ ಮತ್ತು ಹಲವು ದಶಕಗಳಿಂದ ದಲಿತರಿಗಾಗಿ ಮೀಸಲಾಗಿರಿಸಿದ್ದ ಈ ಗಾಂಧಿಭವನವನ್ನು ಜಿಲ್ಲಾಧಿಕಾರಿ ಉಡುಪಿಯ ಸಂಜೀವನಿ ಜೀವನೋಪಾಯ ಪ್ರಚಾರ ಮತ್ತು ಮಾರ್ಕೆಟಿಂಗ್ ಸೊಸೈಟಿ, ಮಹಿಳಾ ಸ್ವಸಹಾಯ ಸಂಘಕ್ಕೆ ಹಾಗೂ ಹಿರಿಯ ನಾಗರಿಕ ಸಮಾಲೋಚನೆ ಘಟಕಕ್ಕೆ ಹಸ್ತಾಂತರಿಸಿರುವುದು ಜಿಲ್ಲೆಯ ದಲಿತ ಸಮುದಾಯಕ್ಕೆ ಮಾಡಿದ ಮಹಾ ದ್ರೋಹ ಎಂದಿರುವ ಜಯನ್ ಮಲ್ಪೆ ತಕ್ಷಣ ಈ ಆದೇಶವನ್ನು ಹಿಂದಕ್ಕೆ ಪಡೆಯದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚ ರಿಸಿದ್ದಾರೆ.