Header Ads Widget

ಮಲಬಾರ್ ವಿಶ್ವ ರಂಗ ಪುರಸ್ಕಾರ- 2025 | ಪುರಸ್ಕೃತರು ಗಣೇಶ್ ಕಾರಂತ್ ಬೈಂದೂರು


 ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ), ಉಡುಪಿ, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆ.  ಮಲಬಾರ್ ವಿಶ್ವ ರಂಗ ಪುರಸ್ಕಾರ- 2025 | ಪುರಸ್ಕೃತರು ಗಣೇಶ್ ಕಾರಂತ್ ಬೈಂದೂರು 


ಹೋಟೆಲ್ ಉದ್ಯಮದಲ್ಲಿ ಇದ್ದುಕೊಂಡು ತನ್ನ 66ರ ಹರೆಯದಲ್ಲೂ ಹದಿನಾರರ ಯುವಕನಂತೆ ತೆಳ್ಳಗೆ ಬೆಳ್ಳಗಿನ ದೇಹ ಪ್ರಕೃತಿಯನ್ನು ಹೊಂದಿರುವ ವ್ಯಕ್ತಿ ಸಾಧನೆಗಳ ಸಾಕಾರ ಮೂರ್ತಿ ಎಂದರೆ ಮೂಗಿನ ಮೇಲೆ ಬೆರಳು ಹೊರಳುತ್ತದೆ ಅಲ್ಲವೇ! ಕಾರಂತ ಎಂಬ ಉಪನಾಮ ಹೊಂದಿದವರು ಹೆಚ್ಚಾಗಿ ಹೀಗೆ ಯೋ ಏನೋ... ಒಂದಲ್ಲ ಒಂದು ಕ್ಷೇತ್ರದಲ್ಲಿ ಇವರು ಮುಂಚೂಣಿಯಲ್ಲಿ ಇರುವವರು...ಹೀಗೆ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡ ರಂಗನಟ ನಿರ್ದೇಶಕ ನಮ್ಮ ಗಣೇಶ್ ಕಾರಂತ್.


ಅಂದು 1958ರ ಸೆಪ್ಟೆಂಬರ್ ತಿಂಗಳಲ್ಲಿ ಸೇನೇಶ್ವರ ದೇವರ ದಿವ್ಯ ಸನ್ನಿಧಿಯಲ್ಲಿ ಬೈಂದೂರು ಎಂಬ ಪುಟ್ಟ ಹಳ್ಳಿಯ ಸ್ವರ್ಣ ನೆಲೆಯಲ್ಲಿ ಸುಸಂಸ್ಕೃತ ಮನೆತನವೊಂದರ ಸಣ್ಣ ಗೂಡೊಂದರಲ್ಲಿ ಶಿವರಾಮ  ಕಾರಂತ - ಸಾವಿತ್ರಿ ದಂಪತಿಗಳ ಕರುಳ ಕುಡಿಯಾಗಿ ಚಿಗುರೊಡೆದು ಅರಳಿದ ಕಲಾ ಕುಸುಮ ಗಣೇಶ ಕಾರಂತ.


ಹಸಿರು ಆಸೆಯ ಕನಸಲ್ಲಿ ಕಳೆದಿತ್ತು... ಕೆಸರ ಮೇಲಣ ಪಯಣ... ಇವರ ಬಾಲ್ಯ ಯವ್ವನದ ಜೀವನ.  ಸರೋವರದ ಆಳವನ್ನು ಲೆಕ್ಕಿಸದೆ ಕೆಸರನ್ನು ಕೊಡವಿಕೊಂಡು ನೀರ ಮೇಲೆದ್ದು ನಿಂತು ನಗು ಚೆಲ್ಲು ತ್ತಾ- ಎಲ್ಲರ ಗಮನ ಸೆಳೆಯುತ್ತಾ ಸೊಗಸ ಸೂಸುವ ಕಮಲದಂತೆ... ಛಲವಿತ್ತು ಇವರ ಮನದಲ್ಲಿ - ಸಾವಿರ ತುಡಿತಗಳಿತ್ತು. ಬಾಳ ನಡೆಗೆ ತಂದೆ ತಾಯಿಯರ ಬೇಲಿ ಇರಲಿಲ್ಲ.  ಹಾಗಾಗಿ ಹಠ ಸಾಧನೆ ಜೀವನದ ಶೃತಿಯಾಯ್ತು. ಬದುಕಿಗೊಂದು ಆಧಾರ ವಿರಲೆಂದು ಶಿಕ್ಷಕ ವೃತ್ತಿಯನ್ನು ಬಯಸಿ ಪಿಯುಸಿ ಯ ನಂತರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಿಂದ ಡಿಗ್ರಿ ಪಡೆದದ್ದಾಗಿತ್ತು...ಆದರೆ ವಿಧಿ ಪುಸ್ತಕದಲ್ಲಿ ಬರೆದಿಟ್ಟದ್ದು ಬೇರೆಯೇ ಇತ್ತು...  ಶಿಕ್ಷಕ ವೃತ್ತಿ ಬೇಕೆನಿಸಿದಾಗ ದೊರಕಲಿಲ್ಲ ಕೊನೆಗೆ ದೊರಕಿದಾಗ ಬೇಕೆನಿಸಲಿಲ್ಲ. 


ಕಾರಣ ಆ ಸಮಯದಲ್ಲಿ ಬಾಳಿಗೊಂದು ಆಸರೆಯಾದದ್ದು ಅಪ್ಪ ನೆಟ್ಟಗಿಡ, ಅಂದರೆ ತಂದೆ ನಡೆಸಿ ಕೊಂಡು ಬಂದಿದ್ದ ಹೋಟೆಲ್ ಉದ್ಯಮ. ಅದು ರಾಜಯೋಗ ಕೊಡದಿದ್ದರೂ ಹೊಟ್ಟೆ ಬಟ್ಟೆಗೇನೂ ಬರ ತರದೆ ಜೀವನಕ್ಕೊಂದು ಆಧಾರ ವಾಯಿತು. 


ಬಾಲ್ಯದಿಂದಲೂ ಶ್ರುತಿ ಲಯ ತಾಳ ಸಂಗೀತ ಭಜನೆ ನಾಟ್ಯ ಯಕ್ಷಗಾನ ಕಲಾ ಮೇಳಗಳ ಸದ್ದು ಕಾರಂತ ರ ಕರ್ಣ ಪಟಲಗಳಲ್ಲಿ ಹುದುಗಿ ಕೂತಿತ್ತು.  ಎಳವೆಯಲ್ಲಿ ದೇವಳದ ಪರಿಸರದಲ್ಲಿ ನಿತ್ಯ ಭಜನೆ ಸಂಗೀತ ಯಕ್ಷಗಾನ ಹೀಗೆ ಏನಾದರೊಂದು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಲೇ ಇತ್ತು. ಅಲ್ಲದೆ... ಅಲ್ಲೇ ಇದ್ದ ರಾಮಚಂದ್ರ ಆಶ್ರಮದ ಚೆಲು ಚಟುವಟಿಕೆಗಳು ಮನಸ್ಸಿನ ಮೇಲೆ ಗಾಡ ಪ್ರಭಾವ ಬೀರುತ್ತಿ ದ್ದವು . ಇದರ ಫಲ ಶ್ರುತಿ ಎಂದರೆ ಭಕ್ತದ್ರುವ ನಾಟಕದ ಮೂಲಕ ರಂಗ ಪ್ರವೇಶ.  


ಅಲ್ಲಿಂದ ರಂಗಾಸಕ್ತಿಯ ತುಡಿತ ಕೆರಳಿ ದ್ವಿಗುಣವಾಯ್ತು. ಆ ಭಾವತರಂಗಗಳ  ತುಡಿತ ಹೊಡೆತಗಳಿಂದ ಅವರ 20ರ ಹರೆಯದಲ್ಲಿ ಅಂದರೆ ವರುಷ1978 ರಲ್ಲಿ " ತರುಣ ಕಲಾವೃಂದ " ವೆಂಬ ಸಾಂಸ್ಕೃತಿಕ ರಂಗ ಜನ್ಮ ತಳೆಯಿತು. ಅದರ ಚೊಚ್ಚಲ ಕಲಾ ಕುಸುಮವೇ " ರೊಟ್ಟಿ ಋಣ " ಎಂಬ ನಾಟಕ. ನಾಟಕದ ವಾರಿಜಕ್ಕ ಪಾತ್ರದಾರಿ ಗಂಡೋ-ಹೆಣ್ಣೋ ಎಂಬಷ್ಟು ತೀರ್ಪುಗಾರರ ತಲೆ ಕೆಡಿಸಿದ ಗಣೇಶ ಕಾರಂತರ ಅಭಿನಯ ದೊಂದಿಗೆ ನಾಟಕ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾಗಿ ಜೊತೆಗೆ ಹಲವು ಇತರೆ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತ್ತು. 



ತನ್ನ ವೃತ್ತಿಯೊಂದಿಗೆ ಸಮಯವನ್ನು ಹೊಂದಿಸುತ್ತಾ ಕಾರಂತರು ಅಲ್ಲಿಂದ ಸಮಾಜಮುಖಿಯಾಗಿ ಬೆಳೆಯ ತೊಡಗಿದರು. ಮುಂದೆ ಇವರ ಕಲಾಸಕ್ತಿ ಹಲವಾರು ರಂಗ ಪ್ರಯೋಗಗಳಿಗೆ ನಾಂದಿ ಹಾಡಿತು. ಈ ನಡುವೆ "ತರುಣ ಕಲಾವೃಂದ " ಬೆಳೆದು ಹೆಮ್ಮರವಾಗಿ ಕಲಾವಿದ, ಕಲಾಸಕ್ತರಿಗೆ ನೆರಳನ್ನು ನೀಡುವ "ಲಾವಣ್ಯ ಬೈಂದೂರು " ಎಂಬ ನವ ನಾಮಾಂಕಿತ ದಿಂದ ರೂಪ ತಳೆಯಿತು. ಕಾರಂತರು ನಟನೆಯೊಂದಿಗೆ ಅನುಭವೀ ನಿರ್ದೇಶಕನಾಗಿಯೂ ಮೂಡಿಬಂದರು. 


ಲಚ್ಚಿ ,ಉದ್ಭವ, ಮರಣ ಮೃದಂಗ, ಪೊಲೀಸ್, ದೃಷ್ಟಿ, ಗಾಂಧಿಗೆ ಸಾವಿಲ್ಲ,  ಮುದ್ದಣ್ಣನ ಪ್ರಮೋಷನ್ ಪ್ರಸಂಗ ಹೀಗೆ ಲೆಕ್ಕವಿಲ್ಲದಷ್ಟು ಉತ್ತಮ ಗುಣಮಟ್ಟದ ಸಾಮಾಜಿಕ ಐತಿಹಾಸಿಕ ಪೌರಾಣಿಕ ನಾಟಕಗಳು ಇವರ ರಂಗ ಕ್ರಿಯೆಗೆ ಸಾಕ್ಷಿಯಾಗಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಮಡಿಲಿಗೇರಿಸಿ ಕೊಂಡವು. ಜೊತೆಗೆ ಪ್ರತೀವರ್ಷ ಬೇಸಿಗೆ ರಂಗ ಶಿಬಿರ ಹಾಗೂ ನಾಟಕ ಕಟ್ಟುವ ಮೂಲಕ ನಾಟಕ ಕಲೆ ವ್ಯಕ್ತಿತ್ವ ವಿಕಸನದ ಮಾಧ್ಯಮ... ಆತ್ಮವಿಶ್ವಾಸದ ಸಂವಹನ... ಮತ್ತು ನಾಯಕತ್ವದ ಸೋಪಾನ ಎಂಬುದನ್ನು ವಿದ್ಯಾರ್ಥಿಗಳಲ್ಲಿ, ಯುವಕರಲ್ಲಿ ಮತ್ತು ವಯಸ್ಕರಿಗೂ ಮನದಟ್ಟು ಮಾಡಿಸಿ ಉತ್ತಮ ರಂಗ ಶಿಕ್ಷಕ ನೆನಿಸಿ ಕೊಂಡರು.


 ಮಕ್ಕಳ ರಂಗಭೂಮಿಗಾಗಿ ಬಹಳಷ್ಟು ಶ್ರಮಿಸಿದ ಇವರು ಶಿವಭೂತಿ, ಆಲಿಬಾಬ, ಜೂಮ್ ಝೂಮ್ ಆನೆ ಮತ್ತು ಪುಟ್ಟಿ, ನಿದ್ರಾ ನಗರಿ ಹೀಗೆ ಹಲವು ನಾಟಕಗಳನ್ನು ನಿರ್ದೇಶಿಸಿ ಮಕ್ಕಳ ಮನೆಗೆದ್ದರು. ಒಟ್ಟಾರೆ ನೂರಕ್ಕೂ ಮಿಕ್ಕಿದ ನಾಟಕ ನಿರ್ದೇಶನ 70 ಕ್ಕೂ ಹೆಚ್ಚು ಮುಖ್ಯ ಭೂಮಿಕೆಯ ನಟನೆಯ ನಾಟಕಗಳು ಇವರ ಕಲಾ ಪ್ರೌಢಿಮೆಗೆ ಸಾಕ್ಷಿಯಾದವು. 



ಕೂರಾಡಿ ಸೀತಾರಾಮ ಶೆಟ್ಟಿ, ಸತ್ಯನಾ ಕೊಡೇರಿ, ಹನುಮಂತ ಆಚಾರ್, ರಾಜೇಂದ್ರ ಕಾರಂತ ರಂತಹ ಹಲವಾರು ನಾಟಕ ರಂಗದ ಖ್ಯಾತ ತಾರೆಯ ರೊಡನೆ ಒಡನಾಟ ಬೆಳೆಸಿಕೊಂಡು ರಂಗ ಪ್ರಕ್ರಿಯೆಯ ಬೆಳವಣಿಗೆಗೆ ಬಹಳಷ್ಟು ಶ್ರಮಿಸಿದರು. ರಂಗದ ಜೊತೆಗೆ ಶಾರದೋತ್ಸವ ಗಣೇಶೋತ್ಸವ ಸಮಿತಿ, ಸ್ವಚ್ಛ ಪರಿಸರ ಅಭಿಯಾನ, ಮಳೆ ಕೊಯ್ಲಿನ ಪ್ರಾತ್ಯಕ್ಷಿಕೆ ಹೀಗೆ ಹಲವಾರು ಸಮಿತಿ ಸಂಘ ಸಂಸ್ಥೆಗಳಲ್ಲಿ ಕೂಡ ತನ್ನನ್ನು ತೊಡಗಿಸಿಕೊಂಡಿದ್ದರು.


ಎಲ್ಲಕ್ಕೂ ಮಿಗಿಲಾಗಿ ಜೀವ ರಕ್ಷಣಾ ಕಲೆಯಾದ "ಈಜು ಕಲೆ" ಯನ್ನು ಊರ ದೇವಳದ ಸರೋವರದಲ್ಲಿ ಶುಲ್ಕ ರಹಿತವಾಗಿ ಕಿರಿಯರಿಗೆ ಹಿರಿಯರಿಗೆಲ್ಲ ಕಲಿಸುವುದರ ಮೂಲಕ ಸಮಾಜ ಸೇವೆಯಲ್ಲೂ ಸೈ ಎನಿಸಿಕೊಂಡರು. ಇವರ ಈ ಅಗಣಿತ ಸಾಧನೆಗಳು ಸಮಾಜದ ಗಮನಕ್ಕೆ ಬರದೆ ಇದ್ದೀತೇ... ಜೇಸೀಸ್ , ರೋಟರಿ, ಕನ್ನಡ ಸಾಹಿತ್ಯ ಪರಿಷತ್ತು, ಸುರಭಿ, ರಂಗಭೂಮಿ ಉಡುಪಿ ಯಂತಹ ನಾಟಕ ಸಂಸ್ಥೆಗಳ ಮೂಲಕ ಲೆಕ್ಕವಿಲ್ಲದಷ್ಟು ಪುರಸ್ಕಾರಗಳು ಇವರನ್ನು ಹುಡುಕಿಕೊಂಡು ಬಂದವು. ಈ ಎಲ್ಲ ಪ್ರಶಸ್ತಿಗಳ ಪೈಕಿ ಕರ್ನಾಟಕ ನಾಟಕ ಅಕಾಡೆಮಿ ಕೊಡ ಮಾಡಿದ ಸುವರ್ಣ ರಂಗ ಸಾಧಕ ಪ್ರಶಸ್ತಿ 2011 ಇವರ ರಂಗ ನೈಪುಣ್ಯತೆಗೆ ಹಿಡಿದ ಕೈಗನ್ನಡಿ ಯಾಗಿತ್ತು. 


ಕೈ ಹಿಡಿದ ಪತ್ನಿ ಲಲಿತಾ ಕಾರಂತ್ ಸಂಸಾರದ ಚುಕ್ಕಾಣಿಯನ್ನು ಸಮರ್ಪಕವಾಗಿ ನಿಭಾಯಿಸುತ್ತ ಪತಿಯ ಸರ್ವತೋಮುಖ ಬೆಳವಣಿಗೆಗೆ ಕುಂದು ಬಾರದಂತೆ ಸದಾ ಹಸಿರು ನಿಶಾನೆ ತೋರಿಸುತ್ತಾ ಜೊತೆಯಾಗಿ ಹೆಜ್ಜೆ ಇಟ್ಟವರು. ಮಕ್ಕಳು ಶಶಿಧರ್ ಮತ್ತು ಶಶಾಂಕ್ ಕೂಡ ತಂದೆಯ ಆಶಯಗಳಿಗೆ ಮಣೆ ಹಾಕಿ ನಡೆದವರು. 


ಹೀಗೆ ಕಾರಂತರ ನಟನೆ ಮತ್ತು ನಿರ್ದೇಶನದ ಆಳವನ್ನು ಅರಿತು ವಿಶ್ವ ರಂಗ ದಿನಾಚರಣೆಯ ಅಂಗವಾಗಿ ಇದೇ ತಿಂಗಳು ಮಾರ್ಚ್ 26, 2025 ರಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಮತ್ತು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ , ಉಡುಪಿ ಶಾಖೆ ಈ ಬಾರಿಯ " *ಮಲಬಾರ್ ವಿಶ್ವ ರಂಗ ಪುರಸ್ಕಾರ 2025 " ನ್ನು ನೀಡಿ ಗೌರವಿಸಲಿದೆ. 


 ಲೇಖನ ~ ರಾಜೇಶ್ ಭಟ್ ಪಣಿಯಾಡಿ, ಸಂಚಾಲಕರು ಮಲಬಾರ್ ವಿಶ್ವ ರಂಗ ಪುರಸ್ಕಾರ ಸಮಿತಿ