ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ), ಉಡುಪಿ, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆ, ಮಲಬಾರ್ ವಿಶ್ವರಂಗ ಪುರಸ್ಕಾರ- 2025 ... ಪುರಸ್ಕೃತರು : ಮಂಜುಳಾ ಜನಾರ್ದನ್
ಇತ್ತೀಚಿನ ದಶಕ ಗಳವರೆಗೂ ಸಮಾಜದಲ್ಲಿ ಸ್ತ್ರೀ... ಒಬ್ಬಳು ಕಲಾವಿದೆಯಾಗಿ ಮೂಡಿ ಬರಬೇಕಾದರೆ ತನ್ನ ಕಾಲ ಮೇಲೆ ತಾನು ನಿಲ್ಲಬೇಕಾದರೆ ಹಲವು ಸಾಧ್ಯತೆ ಬಾದ್ಯತೆಗಳನ್ನು ಗೆದ್ದು ಬರಬೇಕು, ಮುಳ್ಳು ಬೇಲಿಗಳನ್ನು ಮೀರಿ ನಿಲ್ಲಬೇಕು ಎಂಬ ಪ್ರಸಂಗ ಸತ್ಯಕ್ಕೆ ತುಂಬಾ ಹತ್ತಿರವಾದದ್ದು.
ಹೀಗೆ.. ಜೀವನದ ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಅತ್ಯಂತ ಸಂಯಮದಿಂದ ಬದುಕನ್ನುಎದುರಿಸಿ ನಿಭಾಯಿಸಿ ಕೆಸರನ್ನು ಕೊಸರಿ ಸೆಟೆದು ನಿಂತ ವಾರಿಜ ಸುಗಂಧಿ ಮಂಜುಳಾ ಜನಾರ್ಧನ್.
ಹಲವು ವರ್ಷಗಳ ಹಿಂದೆ ಜುಲೈ 10ರ ಶುಭ ದಿನದಂದು ಅಂಚೆ ಕಚೇರಿಯಲ್ಲಿ ಉದ್ಯೋಗ ಮಾಡುತ್ತಿದ್ದ ಶ್ರೀನಿವಾಸ ರಾವ್ ಮತ್ತು ಮನೆಯ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅಮ್ಮ ಗಿರಿಜಮ್ಮ ದಂಪತಿಗಳ ಏಕೈಕ ಪುತ್ರಿಯಾಗಿ ಮಂಜುಳಾ ಹುಟ್ಟಿದ್ದು ಸುರತ್ಕಲ್ ಸಮೀಪದ ಕುಳಾಯಿಯಲ್ಲಿ.
\
ಅದೇನು ನತದೃಷ್ಟವೋ ತನ್ನ 7ರ ಹರೆಯದಲ್ಲೇ ಅಪ್ಪನ ಪ್ರೀತಿಯಿಂದ ವಂಚಿತರಾದರು. ಆಗ ಆ ಸಂದಿಗ್ದ ಪರಿಸ್ಥಿತಿಯಲ್ಲಿ ತಾತ್ಕಾಲಿಕವಾಗಿಯಾದರೂ ಸಂಸಾರದ ಹೊಣೆ ಹೊತ್ತು ಆಸರೆಯಾದವರು ಮಾವ. ಆದರೆ ಕಡಿವಾಣಗಳ ಸರಪಳಿ ಮಾತ್ರ ಕಾಲಿಗೆ ಕಟ್ಟಿಬಿಟ್ಟಿದ್ದರು. "ಹೋಗದಿರು ಮಗಳೇ, ನಾನಿಟ್ಟ ಕಟ್ಟು ಪಾಡುಗಳನ್ನು ದಾಟಿ ಹೊರಗೆ " ಎಂಬ ಅವರ ವಾದ ಹಿಂಸೆ ಅನಿಸಿತ್ತು ಆ ಎಳೆಯ ಮನಸ್ಸಿಗೆ .
ಆಸೆಗಳೇನೋ ಹೆಮ್ಮೆರದಷ್ಟಿದ್ದರೂ ಬುಡಕ್ಕೆ ಗೊಬ್ಬರ ಹಾಕುವವರಾರೂ ಇರಲಿಲ್ಲ. ಬಾಲ್ಯದ ಶಾಲಾ ದಿನಗಳಲ್ಲೇನೋ ಮಾಡಿದ ನೃತ್ಯಗಳನ್ನು ಬಿಟ್ಟರೆ ಮತ್ತಾವುದೇ ಮನದೊಳ ಬಯಕೆಯ ರಂಗಕ್ರಿಯೆಗಳಿಗೆ ಹೊರಗೆ ಆಸ್ಪದವಿರಲಿಲ್ಲ. ಮನೆಯ ಮರ್ಯಾದೆ ಪ್ರಶ್ನೆ ಯೋ, ಮದುವೆಗೆ ಗಂಡು ಹುಡುಕುವ ಚಿಂತೆಯೋ ಕಾಲೇಜು ಮೆಟ್ಟಲು ಹತ್ತಲೂ ಒಪ್ಪಿಗೆ ಇರಲಿಲ್ಲ. ಆದರೆ ಆತ್ಮೀಯರ ಮತ್ತು ಉಪನ್ಯಾಸಕರ ಸಹಕಾರದ ಫಲವೋ ಏನೋ ವಿದ್ಯಾರ್ಥಿವೇತನದ ದೆಸೆಯಿಂದ ಕಾಲೇಜು ಜೀವನ ಮುಂದೆ ಸಾಗಿತ್ತು ಸುರತ್ಕಲ್ ನ ಗೋವಿಂದ ದಾಸ್ ಕಾಲೇಜಿನಲ್ಲಿ.
ಒಮ್ಮೆ ಮಾವ ಇರಲು ಬಿಟ್ಟ ಮನೆಯು ಸ್ವಲ್ಪವೇ ದಿನದಲ್ಲಿ ಆ ಮನೆ ಇವರಿಗರಿವಿಲ್ಲದಂತೆಯೇ ಸಂಬಂಧಿಕ ರೊಬ್ಬರಿಗೇ ಸೇಲ್ ಆಗಿತ್ತು.
ಅದೇ ಸಮಯದಲ್ಲಿ ಗೆಳತಿ ಒಬ್ಬಳಿಗೆ ದೊರಕಿತ್ತು... ಯಕ್ಷಗಾನ ಪುಣ್ಯಕೋಟಿಯಲ್ಲಿ ಅಭಿನಯಿಸುವ ಅವಕಾಶ. ಅವಳ ನೆರವಿಗೆಂದು ಹೋದ ಮಂಜುಳಾ ರವರ ನೃತ್ಯದ ನಾಜೂಕು ಗೆಳತಿಯಲ್ಲಿರದಿದ್ದದ್ದು ಅರಿತ ಗುರು ಶಿವರಾಮ್ ಪಣಂಬೂರುರವರು ಪಾತ್ರಕ್ಕೆ ಪಾತ್ರಧಾರಿಯನ್ನೇ ಬದಲಾಯಿಸಿ ಮಂಜುಳಾ ರವರ ತಲೆಗೆ ಆ ಪುಣ್ಯಕೋಟಿಯ ಮುಖವಾಡವನ್ನು ಕಟ್ಟಿದರು . ಕಾಲೇಜು ಮುಂದುವರೆಸಿದ್ದು ಮತ್ತು ಯಕ್ಷಗಾನದಲ್ಲಿ ಪಾತ್ರ ಮಾಡಿದ್ದು ಮಾವನ ಕೆಂಗಣ್ಣಿಗೆ ಗುರಿಯಾದದ್ದಂತೂ ನಿಜ. ಆದರೆ ಬದುಕಿನಲ್ಲಿ ಬೆಳೆಯಬೇಕಾದರೆ ಇದೆಲ್ಲ ಎದುರಿಸಲೇ ಬೇಕು ತಾನೇ!
ತಿಂಗಳೊಳಗೆ ಕಡಿಮೆ ಬಾಡಿಗೆ ಮನೆಯೊಂದನ್ನು ಅರಸುತ್ತಾ ಬಿಕರ್ನಕಟ್ಟೆ,ಮೇರಿಹಿಲ್ ನಂತರ ಕೊಪ್ಪಲ ಕಾಡಿನಲ್ಲಿ ಠಿಕಾಣಿ ಹೂಡಬೇಕಾಯಿತು. ಜೀವನ ನಿರ್ವಹಣೆಗೆ ಕಾಸೇ ಒಂದು ದೊಡ್ಡ ತ್ರಾಸ್ ಆಗಿತ್ತು ಆ ಸಂದರ್ಭದಲ್ಲಿ. ಬಾಲ್ಯದಲ್ಲಿ ಬಾತ್ರೂಮ್ ನಲ್ಲಿ ಹಾಡಿದ ಹಾಡುಗಳು ಕೆಲವೊಮ್ಮೆ ಆರ್ಕೆಸ್ಟ್ರಾದಲ್ಲಿ ವೇದಿಕೆಯನ್ನು ಒದಗಿಸಿಕೊಟ್ಟದ್ದುಂಟು.
ಕಾಲೇಜು ಬಿ ಕಾಂ ಮುಗಿಯುತ್ತಿದ್ದಂತೆಯೇ ಆಕಾಶವಾಣಿಯ ಆ್ಯಡ್ ಮುಖಾಂತರ ಕ್ಯಾಶುವಲ್ ಎನೌನ್ಸರ್..... ಎಂಬ ಸಣ್ಣ ಸಂಬಳದ ತಾತ್ಕಾಲಿಕ ಹುದ್ದೆಯು ಜೀವನವನ್ನು ಒಂದಷ್ಟು ಹಗುರವಾಗಿಸಿತ್ತು.
ಈ ಮಧ್ಯೆ ಪುಣ್ಯಕೋಟಿ ಯಕ್ಷಗಾನದ ನಂತರ ಮಾಧವ ಶೆಟ್ಟಿ ಬಾಳ ರವರ ನೇತೃತ್ವದಲ್ಲಿ ಒಂದಷ್ಟು ಮಹಿಳೆಯರನ್ನು ಸೇರಿಸಿಕೊಂಡು ಶ್ರೀ ಮಹಿಳಾ ಯಕ್ಷಗಾನ ಸಂಘ ಬಾಳ ಕಾಟಿಪಳ್ಳ ದಲ್ಲಿ ಶಿವರಾಮ್ ಪಣಂಬೂರು ರವರ ನಿರ್ದೇಶನದಲ್ಲಿ ಮುಂದೆ ಸಾಗಿ ವೀರ ಅಭಿಮನ್ಯು ಇದರಲ್ಲಿ ಸುಭದ್ರೆ ಸುಧನ್ವಾರ್ಜುನದಲ್ಲಿ ಪ್ರಭಾವತಿ, ಬ್ರಮ್ಮ ಬೈದರ್ಕಳದಲ್ಲಿ ಕೋಟಿಯಾಗಿ ಮಹಿಷಮರ್ದಿನಿಯಲ್ಲಿ ದೇವಿ, ಭೀಷ್ಮ ವಿಜಯದಲ್ಲಿ ಅಂಬೆಯಾಗಿ ಹೀಗೆ ಅಭಿನಯಿಸಲು ಅವಕಾಶ ಒದಗಿ ಬಂದು ಯಕ್ಷ ಕಲೆ ಜೀವನಕ್ಕೊಂದಷ್ಟರ ಮಟ್ಟಿಗೆ ಅಂಟಿಕೊಂಡಿತು. ಮುಂದೆ ಡೀಡ್ಸ್ ಎಂಬ ಸಮಾಜ ಸೇವಾ ಸಂಸ್ಥೆಗೆ ಸೇರಿದರು.
ಯಕ್ಷಗಾನ ದ ವೇದಿಕೆಯಿಂದ ಪರಿಚಯವಾದ ನವನೀತ ಶೆಟ್ಟಿಯವರು... ಆ ಸಮಯದಲ್ಲಿ ಬಹಳ ಖ್ಯಾತಿಯನ್ನು ಪಡೆದಿದ್ದ ದೇವದಾಸ ಕಾಪಿಕಾಡ್ ರ ನಾಟಕದ ಪಾತ್ರಧಾರಿ ಒಬ್ಬರ ಅನುಪಸ್ಥಿತಿಯ ಸಂದರ್ಭದಲ್ಲಿ ಮಂಜುಳಾ ರವರನ್ನು ಪರಿಚಯಿಸಿದಾಗ ನಾಟಕ ಕಲೆಯ ಗಂಧಗಾಳಿ ಗೊತ್ತಿಲ್ಲವೆಂದರೂ ಪರವಾಗಿಲ್ಲ ನಾವು ತರಬೇತಿ ನೀಡುತ್ತೇವೆ ಎಂದು ಹೇಳಿ ನೀಡಿದ "ಈರ್ ದೂರ " ಎಂಬ ನಾಟಕದ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರಿಂದ ಅವರ ಬಲೆ ಚಾಪರ್ಕ ತಂಡದ ಮುಂದಿನ ನಾಟಕ ಪುದರ್ ದೀತಿಜಿ ನಾಟಕ ಇವರ ಜೀವನದಲ್ಲಿ ಮಹತ್ತರವಾದ ಬದಲಾವಣೆ ತಂದಿತು.
ಸುಮಾರು ಐದೂವರೆ ವರ್ಷದ ಸತತ ಕಾರ್ಯಕ್ರಮಗಳು ಒಂದಷ್ಟು ಕೈಗಟ್ಟಿ ಮಾಡಿದವು. ಬಾಡಿಗೆ ಮನೆ ಗೆ ಅಲೆದು ಅಲೆದು ಸಾಕಾಗಿದ್ದರಿಂದ ಸ್ವಂತ ಮನೆಯನ್ನು ಪದವಿನಂಗಡಿಯಲ್ಲಿ ಕಟ್ಟುವಲ್ಲಿಯವರೆಗೆ ಸಂಪಾದನೆ ಸಹಕಾರಿಯಾಯ್ತು. ಜೀವನದ ಸಾರ್ಥಕತೆಯ ಭಾವ ಮುಖದಲ್ಲಿ ಮೂಡಿತ್ತು. ಬಲೆ ಚಾಪರ್ಕ ರವರ ನಾಟಕದ ಮೂಲಕ ದುಬೈಗೆ ಹೋಗುವ ಅವಕಾಶ ಸಿಕ್ಕಿದಾಗ ಅಲ್ಲಿ ನಮ್ಮೂರಿನ ಮಿಲಿಯಾಧಿಪತಿ ಡಾಕ್ಟರ್ ಬಿ ಆರ್ ಶೆಟ್ರವರಲ್ಲಿ ಹೀಗೆಯೇ ಒಂದು ಉದ್ಯೋಗಕ್ಕೆ ವಿನಂತಿಸಿ ಕೊಂಡಾಗ ಅವರ ಪ್ರತಿಕ್ರಿಯೆ ಧನಾತ್ಮಕವಾಗಿ ಮೂಡಿಬಂದು ಒಂದು ತಿಂಗಳಲ್ಲಿ ಎನ್ಎಂಸಿ ಸಂಸ್ಥೆಯ ಅಕೌಂಟ್ಸ್ ಡಿಪಾರ್ಟ್ಮೆಂಟ್ನಲ್ಲಿ ಕೆಲಸಕ್ಕೆ ಹಾಜರಾಗಲು ವೀಸಾ ಬಂದಾಗ ಆದ ಸಂತೋಷ ಅಷ್ಟಿಷ್ಟಲ್ಲ.
ನಾಟಕಗಳಿಗೆ ಯಕ್ಷಗಾನಕ್ಕೆ ಶುಭ ವಿದಾಯ ಹೇಳಿ ದುಬೈಯಲ್ಲಿ ಮೂರು ವರ್ಷ ಹಣಕಾಸು ವಿಭಾಗದ ಸೇವೆ ಸಲ್ಲಿಸಿದ ನಂತರ ಊರಲ್ಲಿ ಒಂಟಿಯಾಗಿದ್ದ ಅಮ್ಮನ ಅನಾರೋಗ್ಯ ಊರಿಗೆ ಹಿಂದಿರುಗುವಂತೆ ಮಾಡಿತು.
ಕಾಕತಾಳೀಯವೋ ಏನೋ.. ಅದೇ ಸಂದರ್ಭದಕ್ಕೆ ಮಹೇಶ್ ಹಾರ್ಡ್ವೇರ್ ನ ಉನ್ನತ ಹುದ್ದೆಯಲ್ಲಿದ್ದ ಜನಾರ್ಧನ್ ಮೆಲಂಟರು ಸಮರಸದ ಸರಸ ಮಯ ಜೀವನಕ್ಕೆ ಸಂಗಾತಿಯ ಬೇಟೆ ಯಲ್ಲಿದ್ದಾಗ ಮಂಜುಳಾ ನಿನಾದ ಕಿವಿಗೆ ಬಿತ್ತು. ಕೊನೆಗದು ಮಂಗಳ ವಾದ್ಯದೊಂದಿಗೆ ಕೊನೆಗೊಂಡಿತು.
ಐದಾರು ತಿಂಗಳ ನಂತರ ಅಕಸ್ಮಾತ್ ಉಡುಪಿಯ ಅಂಗಡಿಯೊಂದರಲ್ಲಿ ಮಂಜುಳಾ ರವರ ಅಭಿಮಾನಿಯೊಬ್ಬರು ಇತ್ತೀಚಿಗೆ ನೀವು ನಾಟಕ ಮಾಡುವುದು ಬಿಟ್ಟಿದ್ದೀರಾ ಅಂತ ಅಲ್ವಾ ...ಎನ್ನುವಾಗಲೇ ಜನಾರ್ದನರಿಗೆ ತಿಳಿದದ್ದು ತನ್ನ ಮಡದಿ ನಾಟಕದ ಒಬ್ಬ ಶ್ರೇಷ್ಠ ಕಲಾವಿದೆ ಎಂದು. ಮುಂದೆ ಮಂಗಳೂರಿನ ಶ್ರೇಷ್ಠ ಸಾಹಿತಿ ನಾಟಕಕಾರ ವಕೀಲ ಶಶಿರಾಜ್ ಕಾವೂರು ರವರ ಕಥೆ ಮತ್ತು ವಿದ್ದು ಉಚ್ಚಿಲ ರವರ ನಿರ್ದೇಶನದ ಬರ್ಬರೀಕ ನಾಟಕದ ಹಿಡಿಂಬೆ ಪಾತ್ರ ಮಾಡಲು ಅವರು ಬೇಡಿಕೆ ಇಟ್ಟಾಗ ಪತಿಯೇ ಪತ್ನಿಯನ್ನು ಪಾತ್ರ ನಿರ್ವಹಿಸಲು ಒತ್ತಾಯಿಸಿ ಒಪ್ಪಿಸಿ ಕಲೆಯನ್ನು ಮುಂದುವರಿಸಲು ಹಸಿರು ದೀಪ ತೋರಿಸಿದರು.
ಮದುವೆಯ ಮುನ್ನ ಕಾಸ್ ಒಲ್ ದೀಪರ್,ಯಾನೊರಿ ಬರೊಲಿಯಾ,ಅಕ್ಕ, ಪಾರ್ವತಿ, ಬಾಬು,ದೇವೆರ್ ದೀಲಕ್ಕ ಆಪುಂಡ್ ಮುಂತಾದ ನಾಟಕಗಳ 1,500ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದರೆ ಪುದರ್ ದೀತಿಜಿ ನಾಟಕವೊಂದೇ 365 ದಿನಗಳಲ್ಲಿ 374 ಪ್ರದರ್ಶನ ಕಂಡಿರುವುದು ಅದರ ಲೋಕ ಪ್ರಿಯತೆಗೆ ಹೆಸರಾಗಿದೆ.
ಮದುವೆಯ ನಂತರದ ದಿನಗಳಲ್ಲಿ ಸುಕುಮಾರ್ ಕಣ್ಣನ್ ರವರ ನಿರ್ದೇಶನದ ಅಗ್ನಿ ಮತ್ತು ಮಳೆ, ಮೋಹನ್ ಚಂದ್ರರ ನಿರ್ದೇಶನದ ಒಂದು ಲೋಕದ ಕಥೆ,ಶಶಿ ರಾಜ್ ಕಾವೂರ್ ರ ನಿರ್ದೇಶನದ ಕೇಳೆ ಸಖಿ ಚಂದ್ರಮುಖಿ, ನೆಮ್ಮದಿ ಅಪಾರ್ಟ್ಮೆಂಟ್ ಭಾಗ-1 ಭಾಗ-2,ರಾಮ್ ಶೆಟ್ಟಿ ಹಾರಾಡಿ ಅವರ ನಿರ್ದೇಶನದ ಮರಗಿಡಬಳ್ಳಿ ಕಾತ್ಯಾಯಿನಿ,ಬೆಂಗಳೂರಿನ ಸುರೇಶ್ ಆನಗಳ್ಳಿ ಯವರ ಆಗಮನ ಬಹಳ ಗಮನ ಸೆಳೆದಂತವುಗಳು. ನೆಮ್ಮದಿ ಅಪಾರ್ಟ್ಮೆಂಟ್ನ ಹೋದ್ನ, ಬಂದ್ನ, ತಂದ್ನಾ, ಶೈಲಿಯ ಮಾತಿನ ನಾಟಕ ಹಿರಿಯರಿಂದ ಹಿಡಿದು ಕಿರಿಯರವರೆಗೂ ಆಕರ್ಷಿಸಿತ್ತು..
ಇನ್ನು ತುಳುವಿನಲ್ಲಿ ಬಲಿ,ಮಾರಿ ಗಿಡಪುಲೆ,ಮಿತ್ ತಿರ್ತ್, ತಿರುಪತಿ ತಿಮ್ಮಪ್ಪ, ವೀರರಾಣಿ ಅಬ್ಬಕ್ಕ ಮುಂತಾದವುಗಳು.
ಈ ನಡುವೆ 93.5 ರೇಡಿಯೋ ಎಫ್ಎಂ ನಲ್ಲಿ ರೇಡಿಯೋ ಜಾಕಿಯಾಗಿಯೂ ನಾಕುವರೆ ವರ್ಷ ದುಡಿಯಲು ಅವಕಾಶ ಸಿಕ್ಕಿತು. ಆದರೆ ವಿದ್ಯಾಭ್ಯಾಸವನ್ನು ಮುಂದುವರಿಸುವ ಆಶಯದಿಂದ ಮೈಸೂರು ಯುನಿವರ್ಸಿಟಿಯಲ್ಲಿ ಎಮ್ ಎ ಮಾಡಿ,M.V. ಶೆಟ್ಟಿ ಕಾಲೇಜಿನಲ್ಲಿ ಬಿಎಡ್ ವ್ಯಾಸಂಗ ಮುಂದುವರಿಸಿದರು. ನಂತರ ಅಲ್ ಬದ್ರಿಯಾ ಕಾಲೇಜಲ್ಲಿ ಒಂದು ವರ್ಷ ಉಪನ್ಯಾಸಕರಾಗಿ ದುಡಿದು ನಂತರ ನಳಂದ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ಶಿಕ್ಷಕಿ ಆಗಿ ಐದು ವರ್ಷ ದುಡಿದು ನಂತರ ಪ್ರಸ್ತುತ ಕೆನರಾ ಪಿಯು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ವೃತ್ತಿ ಜೀವನ ಮುಂದುವರಿಸಿದ್ದಾರೆ.
ಬಾರೆ ಸಖಿ ಮೋಹನಾಂಗಿ ಯಕ್ಷರೂಪ ಯು ಟ್ಯೂಬ್ ಗಾಗಿ,ತನ್ನ ಜೀವನಾಧಾರಿತ ಹರೀಶ್ ತುಂಗ್ರು ನಿರ್ದೇಶನದ ಉದಾ ಹರಣೆಗೊಂದು ಗೀತಾ ಎನ್ನುವ ಕಿರುಚಿತ್ರ ಯುಟ್ಯೂಬ್ ನ್ನು ಅಲಂಕರಿಸಿದೆ.
ಮುಂದೆ ಚಲನಚಿತ್ರಗಳಾದ ಅಮ್ಮೆರ್ ಪೊಲೀಸ್, ಲವ್ ಕೋಕ್ಟೇಲ್ ಹರೀಶ ವಯಸ್ಸು 36, ಇತ್ತೀಚಿನ ಇತ್ತೀಚಿನ ಬೆಳ್ಳಿತೆರೆಯ ತುಳುಚಿತ್ರ ದಸ್ಕತ್ ಇವರ ಕಲಾಜೀವನಕ್ಕೆ ಬಹಳಷ್ಟು ಮೆರುಗು ನೀಡಿದೆ.
ಜೊತೆಗೆ ಇವರ ಸಿಕ್ಕಿದ ಪ್ರಶಸ್ತಿಗಳಲ್ಲಿ ಮುಖ್ಯವಾದವುಗಳು: ರಂಗಭೂಮಿ ರಿಜಿಸ್ಟರ್ ಉಡುಪಿ ರಾಜ್ಯಮಟ್ಟದ ನಾಟಕಗಳನ್ನು ಸತತ ಮೂರು ವರ್ಷ ಮೆಚ್ಚುಗೆ ದ್ವಿತೀಯ ಹಾಗೂ ಪ್ರಥಮ ಶ್ರೇಷ್ಠ ನಟಿ ಪ್ರಶಸ್ತಿಯನ್ನು ಗಿಟ್ಟಿಸಿ ಕೊಂಡದ್ದು. ಹಲವಾರು ಸನ್ಮಾನ ಪುರಸ್ಕಾರಗಳು ಇವರ ಸುಂದರ ಮನೆಗೆ ಒಪ್ಪ ನೀಡಿವೆ.
ಇನ್ನು ತನ್ನ ಮನೆಯ ಮೇಲ್ಅಂಗಣದಲ್ಲಿ 75 ಬಗೆಯ ಕಮಲಗಳ ಕೃಷಿ ಮಾಡಿ ಕಮಲದಂತೆ ಬದುಕಿದ ತನ್ನ ಮನೆ ಇಂಚರದ ಸುತ್ತ ತರುಲತೆ ಪುಷ್ಪ ವನ ಪಚ್ಚೆಸಿರಿ ಪರಿಸರ, ಶಿಕ್ಷಕ ವೃತ್ತಿ ಮತ್ತು ಜೀವನ ಸೌಂದರ್ಯವನ್ನು ಹೆಚ್ಚಿಸಿದ ನಟನಾ ಕಲೆಯೊಂದಿಗೆ ಪತಿಯೊಂದಿಗೆಸುಂದರ ನೆಮ್ಮದಿಯ ಜೀವನ ಸಾಗಿಸುತ್ತಿರುವ ಸರಸಿಜ ನಿಲಯೆ ಮಂಜುಳಾ ಜನಾರ್ಧನ್ ರವರಿಗೆ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಮತ್ತು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆ ಜಂಟಿಯಾಗಿ ವಿಶ್ವ ರಂಗ ದಿನಾಚರಣೆಯ ಅಂಗವಾಗಿ ಮಾರ್ಚ್ 26 ರಂದು " ಮಲಬಾರ್ ವಿಶ್ವ ರಂಗ ಪುರಸ್ಕಾರ- 2025 " ನ್ನು ಕೊಟ್ಟು ಗೌರವಿಸಲಿದೆ.
ಲೇಖನ....🖋️ರಾಜೇಶ್ ಭಟ್ ಪಣಿಯಾಡಿ.