ಬೆಳ್ಳಂಬೆಳಗ್ಗೆ ಉಷಾರಾಣಿಯ ತೆಕ್ಕೆಗಳಿಂದ ಇಳಿದು ಇರುಳು ನಿಶಾದೇವಿಯ ಮಡಿಲು ಸೇರುವ ತನಕ ಸ್ತ್ರೀ ಪುರುಷರೆಲ್ಲರೂ ದೇವಿ ದೇವತೆಗಳ ಆರಾಧಕರು, ಶಕ್ತಿ ಸ್ವರೂಪಿಣಿಯ ಆಜ್ಞಾನುಧಾರಿಗಳು, ಪ್ರಕೃತಿ ಮಾತೆಯ ಅಧೀನರು. ಮನುಜ ಕುಲ ಮಾತ್ರವಲ್ಲದೆ ಸಕಲ ಜೀವ ಸಂಕುಲಗಳು ತಾಯಿ ಪಾರ್ವತಿ, ದೇವಿ ಲಕ್ಷ್ಮೀ, ಮಾತೆ ಸರಸ್ವತಿಯಿಂದ ಪಾಲಿಸಲ್ಪಡುವವರು, ಪೋಷಿಸಲ್ಪಡುವವರು .
ನಿಸರ್ಗ ದೇವತೆಯಿಂದಲೇ ಜೀವಿಯ ನಿತ್ಯ ಜೀವನ ಚಕ್ರದ ಆರಂಭ . ಅರುಣ ರಥವೇರಿ ಬರುವ ಉಷಾರಾಣಿ ಸರ್ವಜೀವ ಜಂತುಗಳ ಜಡತೆಯನ್ನು ಹೋಗಲಾಡಿಸಿ ಜೀವ ಚೈತನ್ಯ ತುಂಬಿ, ಬೆಳಗಿನ ದಿನಚರಿಗೆ ನಾಂದಿ ಹಾಡುವಳು. ಆಕೆಯ ವಾತ್ಸಲ್ಯಮಯ ತೋಳುಗಳಿಂದ ಎದ್ದು ಬಂದ ಒಬ್ಬ ಸಾತ್ವಿಕ ಮನುಜ ತನ್ನ ಕರಗಳಲ್ಲಿ ಲಕ್ಷ್ಮಿ,ಸರಸ್ವತಿ,ಗೌರಿ ಎಂಬ ತ್ರಿಶಕ್ತಿಗಳನ್ನು ಅನುಸಂಧಾನಗೈದು ಆ ಮೂಲಕ ಶಕ್ತಿ ರೂಪಿ ಸ್ತ್ರೀ ದೇವತೆಗಳನ್ನು ಆರಾಧಿಸಿ ತನ್ನ ದಿನ ಸುಸೂತ್ರ ವಾಗುವಂತೆ ಪ್ರಾರ್ಥಿಸುತ್ತಾನೆ.
ನಿದ್ದೆಯಿಂದ ಎದ್ದ ಪ್ರತಿಯೋರ್ವರೂ ತಮ್ಮ ಪಾದಗಳನ್ನು ಭೂಮಿಗೆ ಸ್ಪರ್ಶ ಮಾಡುವ ಮೊದಲು ಪ್ರಥ್ವಿ ದೇವತೆಯನ್ನು ಸ್ತುತಿಸುತ್ತಾ ಆಕೆಯ ಕ್ಷಮಾಪಣೆಯನ್ನು ಕೇಳಿಕೊಂಡು ಭೂಮಿಯ ಮೇಲೆ ಕಾಲಿಡಲು ಆಕೆಯ ಅನುಮತಿ ಪಡೆದು ಮತ್ತೆ ನಡೆದಾಡಲು ಆರಂಭಿಸುವ ಒಂದು ವಿನೂತನ ಸಂಸ್ಕೃತಿ ನಮ್ಮದು. ನಿತ್ಯ ಸ್ನಾನ ಮಾಡುವಾಗ ಸರಸ್ವತಿ, ಗೋದಾವರಿ, ನರ್ಮದಾ,ಸಿಂಧು,ಕಾವೇರಿ ಎಂದು ನದಿರೂಪಿ ಸ್ತ್ರೀ ಶಕ್ತಿಗಳನ್ನು ನೆನಪಿಸಿಕೊಂಡರೆ ಮುತ್ತೈದೆ ಹೆಣ್ಣು ದೇವರಿಗೆ ದೀಪ ವಿಡುವಾಗ ದೀಪಜ್ಯೋತಿಯಲ್ಲಿರುವ ರಾಜರಾಜೇಶ್ವರಿ ದೇವಿಯನ್ನು ಪೂಜಿಸುವ ಸತ್ ಸಂಪ್ರದಾಯ ನಮ್ಮದು.
ದೀಪ ಜ್ಯೋತಿ ಬೆಳಗಿಸಿದ ಸ್ತ್ರೀ, ಹೊಸ್ತಿಲು ಮಾತೆಗೆ ನಮಸ್ಕರಿಸುತ್ತಾ ವೇದ ಮಾತೆ ನಿನಗಿದೋ ನಮಸ್ಕಾರ ಎಂದು ಹೊಸ್ತಿಲು ಬರೆದು ಲಕ್ಷ್ಮಿ ದೇವಿಯನ್ನು ಸ್ತುತಿಸುವ ಪರಿಪಾಠ ನಮ್ಮಲ್ಲಿದೆ. ನಂತರ ಅಂಗಳದಲ್ಲಿ ನೆಲೆನಿಂತ ತುಳಸಿ ದೇವಿಗೆ ನೀರೆರೆದು, ನಮಸ್ಕರಿಸಿ, ದೀಪವಿಟ್ಟು ನಮಗೆ ನಿತ್ಯ ಕಲ್ಯಾಣವನ್ನುಂಟು ಮಾಡು, ಸಂತಸವನ್ನು ನೀಡು ಎಂದು ಆಕೆಯನ್ನು ಪ್ರಾರ್ಥಿಸುತ್ತ ಸಕಲ ತೀರ್ಥಕ್ಷೇತ್ರಗಳ ಮಹತ್ವವುಳ್ಳ, ಸರ್ವದೇವತೆಗಳ ವಾಸವುಳ್ಳ,ಸರ್ವ ವೇದಗಳನ್ನು ಹೊತ್ತಿರುವ ತಾಯಿ ತುಳಸಿದೇವಿ ಸಕಲ ಸೌಭಾಗ್ಯಗಳನ್ನು ನೀಡೆಮಗೆ ಎಂದು ಸ್ತುತಿಸುತ್ತೇವೆ.
ದೇವತಾ ಪೂಜೆಗೆ ಅರ್ಪಿಸುವ ತುಳಸಿ ದಳಗಳು, ಪಾರಿಜಾತ, ಮಂದಾರ, ಮಲ್ಲಿಗೆ, ಗುಲಾಬಿ,ಸೇವಂತಿಗೆ ಕನಕಾಂಬರ, ಜಾಜಿ, ಸಂಪಿಗೆ, ನಂದಿಬೆಟ್ಟಲು, ಸೌಗಂಧಿಕಾ ಪುಷ್ಪ ಇವೆಲ್ಲವೂ ಸ್ತ್ರೀ ಸಂವೇದನೆಯ ಕುಸುಮಗಳು. ಇವೆಲ್ಲ ಪುಷ್ಪಗಳನ್ನು ದೇವರಿಗೆ ಅರ್ಪಿಸುತ್ತಾ ಹೂಗಳ ಅರ್ಚನೆಯಿಂದ ಸಂತುಷ್ಟನಾದ ಭಗವಂತನನ್ನು ದೀಪ ಬತ್ತಿಗಳಿಂದ ಅಲಂಕೃತ ಆರತಿ ಎತ್ತಿ ಆರಾಧಿಸಿ ಅವನ ಅನುಗ್ರಹವನ್ನು ಯಾಚಿಸುತ್ತೇವೆ. ನಾವು ತಿನ್ನುವ ಆಹಾರದಲ್ಲಿ ಸಾಕ್ಷಾತ್ ತಾಯಿ ಅನ್ನಪೂರ್ಣೇಶ್ವರಿಯನ್ನು ಕಾಣುವ ನಾವು ತುತ್ತು ಬಾಯಿಗಿಡುವ ಮೊದಲು ಆಕೆಯನ್ನು ಪ್ರಾರ್ಥಿಸುತ್ತಾ ಆಕೆಯ ಅನುಗ್ರಹದಿಂದ ನಾವು ತಿನ್ನುವ ಆಹಾರ ಅಮೃತವಾಗಲೆಂದು ಬೇಡುತ್ತೇವೆ.
ನಿತ್ಯ ವಿಧಿಗಳೆಲ್ಲ ಮುಗಿದು ಬೆಳಿಗ್ಗೆ ಮನೆಯಿಂದ ಹೊರಡುವ ಪುರುಷ ಹಾಗೂ ಮಹಿಳೆಯರೆಲ್ಲರೂ ಧೈರ್ಯವನ್ನು ನೀಡುವ ತಾಯಿ ಪಾರ್ವತಿ ದೇವಿ,ವಿದ್ಯೆ ನೀಡುವ ಸರಸ್ವತಿ ದೇವಿ , ಸಂಪತ್ತನ್ನು ನೀಡುವ ಲಕ್ಷ್ಮೀದೇವಿಯೊಂದಿಗೆ ಸಕಲ ಕಾರ್ಯಗಳಲ್ಲೂ ಜಯ ತರುವ ವಿಜಯಲಕ್ಷ್ಮಿಯ ನ್ನು ಧ್ಯಾನಿಸುತ್ತಾ ದಿನಪೂರ್ತಿ ಮಂಗಳಮಯವಾಗಲೆಂದು ಹಾರೈಸುತ್ತೇವೆ
ಮನೆತನದ ವಂಶೋದ್ಧಾರಕ್ಕಾಗಿ ಸಂತಾನ ಲಕ್ಷ್ಮಿಯ ಆರಾಧನೆ, ಮನೆಯಲ್ಲಿ ಧನ ಕನಕ ತುಂಬಿರಲು ಸಂಪತ್ ಲಕ್ಷ್ಮಿ ಯ ಆರಾಧನೆ, ಸಮೃದ್ಧ ದವಸ ಧಾನ್ಯಗಳಿಗಾಗಿ ಧಾನ್ಯಲಕ್ಷ್ಮಿ ಆರಾಧನೆ, ಹೀಗೆ ಜೀವನದ ಪ್ರತಿ ಘಳಿಗೆಯಲ್ಲೂ, ಬದುಕಿನ ಪ್ರತಿ ಹಂತದಲ್ಲೂ ಸ್ತ್ರೀರೂಪಿ ಶಕ್ತಿ ದೇವಿಗಳ ಉಪಾಸನೆ ನಮ್ಮ ಸಂಸ್ಕೃತಿಯ ವೈಶಿಷ್ಟ್ಯ. ಜೀವ ಚೈತನ್ಯ ತುಂಬಿರಲು ಪ್ರಕೃತಿ ಮಾತೆಯ ಆರಾಧನೆ ,
ಜೀವ ಜಲ ಸಂಪನ್ನವಾಗಿರಲು ಜಲದೇವತೆಯ ಪೂಜೆ, ಜೀವನಾಡಿಗಳಲ್ಲಿ ಜ್ಞಾನ ತುಂಬಿರಲು ಅಕ್ಷರಮಾತೆ ಸರಸ್ವತಿಯ ಧ್ಯಾನ, ಅನಾರೋಗ್ಯವಾದಾಗ ಇಲ್ಲವೇ ವಿಚಿತ್ರ ರೋಗಗಳು ಭಾದಿಸಿದಾಗ ತಾಯಿ ಭಗವತಿ ಮಾರಿಯಮ್ಮನ ರಕ್ಷಣೆಗೆ ಮೊರೆ, ಆರೋಗ್ಯ ಪೂರ್ಣ ಜೀವನಕ್ಕಾಗಿ ಕ್ಷೀರ ರಧಾರೆ ನೀಡಿ ಸಲಹುವ ಗೋಮಾತೆಯ ಪಾಲನೆ, ಇವೆಲ್ಲವೂ ನಮ್ಮೆಲ್ಲರ ಹೊಣೆ.
ಜನನೀ ಜನ್ಮ ಭೂಮಿಶ್ಚ ಸ್ವರ್ಗದಪಿ ಗರೀ ಯಸಿ ಎಂಬ ಮಾತಿನಂತೆ ನಮ್ಮನ್ನು ಹೊತ್ತ ಭಾರತ ಮಾತೆ, ನಮ್ಮನ್ನು ಕಾಯುವ ಕರುನಾಡ ತಾಯಿ ಭುವನೇಶ್ವರಿ ದೇವಿ, ನಮ್ಮನ್ನು ಹೊತ್ತು ಸಲಹಿದ ಹೆತ್ತ ಅಮ್ಮನೆಂಬ ದೇವತೆ, ನಮ್ಮನ್ನು ಸದಾ ಪೊರೆಯುವ ಪ್ರಕೃತಿ ಮಾತೆ, ನಮ್ಮೆಲ್ಲ ಅನಾಚಾರಗಳನ್ನು ಅವಗುಣಗಳನ್ನು ಸಹಿಸುವ ಭೂಮಿ ತಾಯಿ ಇವರೆಲ್ಲರೂ ಸ್ವರ್ಗಕ್ಕಿಂತಲೂ ಶ್ರೇಷ್ಠ ಎಂದು ನಂಬುವ ಸನಾತನ ಧರ್ಮ ನಮ್ಮದು.
ನಮ್ಮ ಜೀವನ ಪೂರ್ತಿ ಶಕ್ತಿ ಸ್ವರೂಪಿಣಿಯರ ಋಣದಲ್ಲಿ ಇರುವವರು ನಾವು. ಹರಿಯುವ ನದಿಯಲ್ಲಿ, ಮನ ತಣಿಸುವ ಪ್ರಕೃತಿಯಲ್ಲಿ, ತಿನ್ನುವ ಅನ್ನದಲ್ಲಿ, ಎಣಿಸುವ ಹಣದಲ್ಲಿ, ಕಾಲಿಡುವ ಮಣ್ಣಿನಲ್ಲಿ, ಓದುವ ಪುಸ್ತಕದಲ್ಲಿ, ದೀಪದ ಬೆಳಕಿನಲ್ಲಿ ಮನೆಯ ಹೊಸ್ತಿಲಲ್ಲಿ, ಅರಳುವ ಹೂಗಳಲ್ಲಿ, ತುಳಸಿಯ ಗಂಧದಲ್ಲಿ ಹೀಗೆ ಸಾಮಾಜಿಕವಾಗಿ ಮಾತ್ರವಲ್ಲ ಆಧ್ಯಾತ್ಮಿಕ ನೆಲೆಯಲ್ಲಿ ಕೂಡ ನಾವು ಸ್ತ್ರೀಶಕ್ತಿಯನ್ನು ಕಂಡವರು, ಉಪಾಸನೆ ಮಾಡುವವರು.
"ದುರ್ಗಾ" "ದೇವಿ" ಯ "ಪೂಜಾ" ಸಮಯದಲ್ಲಿ "ಚಂಪಾ" " ಮಲ್ಲಿಕಾ" "ಸೌಗಂಧಿಕಾ" "ಪುಷ್ಪ" "ಕುಸುಮ"ಗಳನ್ನು ಅರ್ಪಿಸಿ "ತುಂಗಾ" "ಭದ್ರಾ " ನೀರನ್ನು ಸಮರ್ಪಿಸಿ "ದೀಪ" "ಜ್ಯೋತಿ"ಯನ್ನು ಬೆಳಗಿಸಿ "ಕಲಾ"ತ್ಮಕ ಬತ್ತಿಯಿಂದ ಹೊಸೆದ "ರಜತ" "ಆರತಿ "ಎತ್ತಿ "ಸುಮನ"ದಿಂದ "ಆರಾಧನೆ" ಗೈದು ಇತರರಿಗೆ "ಸುಮಂಗಲ"ವನ್ನು ಮಾಡುವ "ಪ್ರಜ್ಞೆ " ಹಾಗೂ "ಜಾಗೃತಿ" ಸದಾ ನಮ್ಮೆಲ್ಲರಲ್ಲಿ ಇರಲೆಂದು "ಪ್ರಾರ್ಥನೆ"ಮಾಡಿ "ಪ್ರಾಂಜಲ" ಮನದ "ಸುಚರಿತ" ಜೀವನ ನಡೆಸುವ ಶಕ್ತಿ ನೀಡೆಂದು ಬೇಡಿ "ದೀಪ" "ಜ್ಯೋತಿ" ಬೆಳಗಿಸಿ ಸ್ತ್ರೀ ರೂಪಿ ತ್ರಿ ಶಕ್ತಿಗಳಾದ ಲಕ್ಷ್ಮಿ ಸರಸ್ವತಿ ಪಾರ್ವತಿಯರನ್ನು ಸ್ತುತಿಸೋಣ.
ಮಹಿಳಾ ದಿನಾಚರಣೆಯ ಶುಭಾಶಯಗಳು 🙏ಪೂರ್ಣಿಮಾ ಜನಾರ್ದನ್ ಕೊಡವೂರು