Header Ads Widget

​~​ಪ್ರಕಾಶ್ ಕೊಡವೂರು​ ಮಡಿಲಿಗೆ ~ ಮಲಬಾರ್ ವಿಶ್ವ ರಂಗ ಪುರಸ್ಕಾರ- 2025​


ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ), ಉಡುಪಿ, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆ,  ಮಲಬಾರ್ ವಿಶ್ವ ರಂಗ ಪುರಸ್ಕಾರ- 2025 ...  ಪುರಸ್ಕೃತರು : ಪ್ರಕಾಶ್ ಕೊಡವೂರು


ಉಡುಪಿಯ ಸಮೀಪದ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಶಂಕರನಾರಾಯಣ ದೇವರು ನೆಲೆ ನಿಂತ ಪವಿತ್ರ ಭೂಮಿ ಕೊಡವೂರು.  ಆ ಪುಟ್ಟ ಊರಿನ ಮಧ್ಯಮ ವರ್ಗದ ಕುಟುಂಬವೊಂದರ ಸುಶೀಲಾ ಮತ್ತು ಗೋಪಾಲ ದಂಪತಿಗಳ ಮೂರನೆಯ ಕರುಳ ಕುಡಿಯಾಗಿ ಜನಿಸಿದ ತುಂಬಿದ ಕೊಡ ಪ್ರಕಾಶ್ ಕೊಡವೂರು.


ಎಲೆ ಮರೆಯ ಕಾಯಿಯಂತೆ ಇದ್ದುಕೊಂಡು ಎಲ್ಲರನ್ನೂ ಎದುರು ಬಿಟ್ಟು ತಾನವರ ಹಿಂದೆ ನಿಂತು ರಂಗದಲ್ಲಿ ರಂಗುರಂಗಿನ ರಂಗವಲ್ಲಿ ಬರೆದ ಸಾಂಸ್ಕೃತಿಕ ರಾಯಬಾರಿ ...ಪ್ರಕಾಶ್ ಕೊಡವೂರು.


ಕೊಡವೂರಿನ ಮಣ್ಣಿನಲ್ಲಿ ಹುದುಗಿ ಕೊಂಡಿದ್ದ ಹತ್ತಾರು ಮುತ್ತು ರತ್ನಗಳನ್ನು ಹುಡುಹುಡುಕಿ ತೆಗೆತೆಗೆದು ರಂಗದಲ್ಲಿ ಮಿಂಚಿಸಿ ಅವರ ಕೀರ್ತಿಯನ್ನು ಜಗದುದ್ದಗಲಕ್ಕೂ ಹಬ್ಬಿಸಿದ ಸಂಘ ಜೀವಿ. ಆ ಸಣ್ಣ ಊರಿನ ಜನತೆಗೆ ನಾಟಕ ಯಕ್ಷಗಾನ ಇತ್ಯಾದಿ ಕಲೆಗಳ ರುಚಿ ಉಣ್ಣಿಸಿದ ಅಸಾಮಾನ್ಯ ಚಿಂತನೆಯ ಎಲ್ಲರ ನಡುವೆ ಇರುವ ಎಲ್ಲರ ನಡುವೆ ಬೆರೆವ ಓರ್ವ ಸಾಮಾನ್ಯ ವ್ಯಕ್ತಿ ಪ್ರಕಾಶ್ ಕೊಡವೂರು.


ಮನೆಗೆ ಹತ್ತಿರವಿದ್ದ ಕೊಡವೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ ಊರಿಂದ ಒಂದಷ್ಟು ದೂರದಲ್ಲಿದ್ದ ಕಡಲ ತೀರ ಮಲ್ಪೆಯ ಫಿಶರೀಶ್ ಶಾಲೆಯಲ್ಲಿ ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ ಮುಂದುವರಿಸಿದ್ದಾಗಿತ್ತು. ಅದಾಗ ಮನೆಯ ಪರಿಸ್ಥಿತಿಯ ಮುಂದೆ ಓದುವ ತವಕ ಗೌಣವಾಯ್ತು. ಮನೆಯಲ್ಲೇನೂ ಹಿರಿಯರು ಮಾಡಿಟ್ಟ ಸುಖದ ಸುಪ್ಪತ್ತಿಗೆ ಇರಲಿಲ್ಲ. ಹಾಗಾಗಿ ಜೀವನ ಪಯಣಕ್ಕೆ ದುಡಿಮೆ ಅನಿವಾರ್ಯವಾಗಿತ್ತು. 


ಆದರೆ ಜೀವನ ನಿರ್ವಹಣೆಗೆ ಹರಸಾಹಸ ಪಡಬೇಕಾಯಿತು. ಅದಕ್ಕಾಗಿ ಮಾಡದ ಕೆಲಸಗಳಿರಲಿಲ್ಲ ತಿರುಗದ ಸ್ಥಳಗಳಿರಲಿಲ್ಲ. ಆದರೂ ಸರಿಯಾದ ಉದ್ಯೋಗ ಕೈ ಗೂಡದೆ ಪರವೂರ ಕಡೆಗೆ ಮುಖ ಮಾಡಬೇಕಾಯಿತು. ಸಂಬಂಧಿಕರೊಬ್ಬರ ಸಹಾಯದಿಂದ ಪುಣೆಯ ಮಹೇಂದ್ರ ಸಿಂಥೆಡ್ ಪ್ರೊಡಕ್ಷನ್ ಕಂಪನಿಯಲ್ಲಿ ಸಣ್ಣ ಉದ್ಯೋಗವೊಂದು ಕೈಗೂಡಿತು. ಅಲ್ಲಿ 9 ವರ್ಷಗಳ ಸೇವೆಯ ನಂತರ ಊರು ಮತ್ತೆ ಕೂಗಿ ಹಿಂದೆ ಕರೆಯಿತು.


 ಹೀಗೆ ಊರಿಗೆ ಬಂದವರು ಕಾಯಕವೇ ಕೈಲಾಸ ದುಡಿದರಷ್ಟೇ ತುತ್ತು ಅನ್ನ ಎಂಬ ಬದುಕಿನ ಸತ್ಯ ಸಿದ್ದಾಂತವನ್ನು ಮನದಲ್ಲಿಟ್ಟು ಕೊಂಡು ಸ್ವಂತ ಉದ್ದಿಮೆಗೆ ಕೈ ಹಾಕಿದರು. ಶಿಥಿಲಾವಸ್ತೆಯಲ್ಲಿ ಕುಂಟುತ್ತಿದ್ದ ಮುದ್ರಣಾಲಯವೊಂದಕ್ಕೆ ಶಂಕರನಾರಾಯಣ ಪ್ರಿಂಟರ್ಸ್ ಕೊಡವೂರು ಎಂಬ ಹೆಸರಿನಿಂದ ಆ ಕ್ರಿಯಾ ಕ್ಷೇತ್ರದಲ್ಲಿ ಒಂದಷ್ಟು ಅನುಭವವಿದ್ದ ತಂಗಿಯರ ಜೊತೆ ಸೇರಿ ಮುದ್ರಣಾಲ ಯಕ್ಕೆ ಹೊಸ ಮೆರುಗನ್ನು ನೀಡಿದರು. ಹೀಗೆ ಬೆಳೆದ ಈ ಸ್ವಂತ ಕಾಯಕ ಜೀವನಕ್ಕೆ ಒಂದಷ್ಟರ ಮಟ್ಟಿಗೆ ಆಧಾರವಾಯಿತು. 


ಬಾಲ್ಯದಿಂದಲೂ ಆಧ್ಯಾತ್ಮಿಕ ಸಾಂಸ್ಕೃತಿಕ ಕ್ಷೇತ್ರಗಳ ಮೇಲೆ ಅತೀವ ಒಲವು ಇದ್ದುದರಿಂದ ಊರ ದೇವಳದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮತ್ತು ಕೊಡವೂರು ಯುವಕ ಸಂಘ ಹಾಗೆಯೇ ಶಾಲೆಯ ಹಳೆ ವಿದ್ಯಾರ್ಥಿ ಸಂಘ ದಲ್ಲಿ ತನ್ನನ್ನು ತಾನು ಚುರುಕಿನ ಚಟುವಟಿಕೆಯಿಂದ ತೊಡಗಿಸಿ ಕೊಳ್ಳುತ್ತಾ ಕಲಾ ಸೇವೆಯನ್ನು ಮಾಡಲು ಪ್ರಾರಂಭಿಸಿದರು. ತನ್ನ ಆತ್ಮೀಯ ಗೆಳೆಯರೊಡನೆ ಕೂಡಿಕೊಂಡು ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಂಘಟನೆಯನ್ನು ಸಂಘಟಿಸಿ ಬಲ ವರ್ದಿಸಿದರು. 


ಅಂತೂ ಇಂತೂ ವಾರ್ಷಿಕೋತ್ಸವಕ್ಕಾದರೂ ಒಂದು ನಾಟಕ ಪ್ರತಿವರ್ಷ ಸಿದ್ದಗೊಳ್ಳುತ್ತಿತ್ತು.  ಮುಂದೆ ಅದೇ ಉತ್ಸಾಹ ಪ್ರಬುದ್ಧ ಗೆಳೆಯರ ಬಳಗ ವೊಂದನ್ನು ಸೃಷ್ಟಿ ಮಾಡಿತು. ಅದೇ ಸಮಯದಲ್ಲಿ ಕೊಡವೂರಿಗೆ ಬಾಡಿಗೆ ಮನೆ ಅರಸುತ್ತ ನಾಟಕ ರಂಗದ ಬೃಹಸ್ಪತಿಯಂತಿದ್ದ ಬಹುಮುಖ ಪ್ರತಿಭೆ ಸುಳ್ಯದ ಬಾಸುಮ ಕೊಡಗು ದಂಪತಿಗಳ ಆಗಮನವಾಯಿತು. ಅವರ ಮುತುವರ್ಜಿಯಲ್ಲಿ ಸಮಾನ ಮನಸ್ಸಿನ ಸುಮನಸರು ಸೇರಿ ಕೊಡವೂರಿನಲ್ಲಿ  ನಾಕವೊಂದನ್ನು ಸೃಷ್ಟಿ ಮಾಡಿದರು. 


ಆ ನಾಕಕ್ಕೆ ಅಧಿಪತಿಯಾಗಿ ಇಂದ್ರನಾಗಿ ಎಲ್ಲರೂ ಸೇರಿ ಪ್ರಕಾಶರನ್ನೇ ನೇಮಿಸಿದರು. ಎಂ ಎಸ್ ಭಟ್, ರಾಜಗೋಪಾಲ ಶೇಟ್, ಯೋಗೀಶ ಕೊಳಲಗಿರಿ, ಪ್ರವೀಣ ಚಂದ್ರ, ಬಾಲಕೃಷ್ಣ ಕೊಡವೂರು, ಹೀಗೆ ಹಲವು ಪ್ರಬುದ್ಧ ಕಲಾ ದಿಕ್ಪಾಲಕರ ತಂಡ ಸೇವೆಗೆ ಸಿದ್ಧವಾಯಿತು. ಅಂದು 2002ರಲ್ಲಿ ಪ್ರಾರಂಭಗೊಂಡ ಸುಮನಸ ತಂಡದ ಚುಕ್ಕಾಣಿಯನ್ನು ಹಿಡಿದ ದಕ್ಷ ನಾಯಕ ಪ್ರಕಾಶ್ ಎಲ್ಲರ ಸಹಕಾರದೊಂದಿಗೆ ತಂಡದ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗಿ ಪ್ರತಿ ವರ್ಷವೂ ಒಂದು ಎರಡು ಹೊಸ ನಾಟಕಗಳನ್ನು ಕಟ್ಟುವುದರ ಜೊತೆಗೆ ರಂಗ ಶಿಬಿರ, ಪ್ರಸಾಧನಾ ಕಮ್ಮಟ, ಮುಖವಾಡ ರಚನೆ, ನಾಟಕ ರಚನೆ, ಯಕ್ಷಗಾನ ಹೀಗೆ ವಿವಿಧ ರೀತಿಯ ಸಾಂಸ್ಕೃತಿಕ ಕಲೆಗಳಿಗೆ ಪ್ರೋತ್ಸಾಹ ಅವಕಾಶ ನೀಡುತ್ತಾ ಬಂದರು. ಖ್ಯಾತ ನಿರ್ದೇಶಕ ಗುರುರಾಜ ಮಾರ್ಪಳ್ಳಿ , ಜೋಸೆಫ್, ವಿಧು ಉಚ್ಚಿಲ, ಗಣೇಶ್ ಎಲ್ಲೂರು ದಿವಾಕರ ಕಟೀಲ್ ಮುಂತಾದವರ


 ಜೊತೆ ತಂಡದ ಸದಸ್ಯರಿಗೂ ನಾಟಕ ನಿರ್ದೇಶನ ಮಾಡಲು ಅವಕಾಶ ಕೊಡುತ್ತಾ ತಾನೂ ಬೆಳೆಯುತ್ತಾ ಇತರರನ್ನೂ ಬೆಳೆಸುತ್ತಾ ಸಂಸ್ಥೆಯನ್ನೂ ಬೆಳಗ ತೊಡಗಿದರು. ಅಲ್ಲದೆ ಉಡುಪಿ ರಂಗಭೂಮಿ, ತುಳುಕೂಟ, ಇತ್ಯಾದಿ ಹಿರಿಯ ಸಂಸ್ಥೆಗಳ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಲೆಕ್ಕವಿಲ್ಲದಷ್ಟು ಬಾರಿ ಪ್ರಶಸ್ತಿಗಳನ್ನು ಬಾಚಿ ಕೊಂಡವರು ಇವರು. ಬೆಂಗಳೂರು ಮುಂಬೈ ಡೆಲ್ಲಿ ಇನ್ನಿತರ ಸ್ಥಳಗಳಲ್ಲಿ ನಾಟಕ ಪ್ರದರ್ಶನಗಳನ್ನು ನೀಡುತ್ತ ಬಂದರು.  ಮದ್ದಲೆ ಮಾದ ಕೋಟಿ- ಚೆನ್ನಯ ಇತ್ಯಾದಿ ನಾಟಕಗಳ ಪ್ರಕಾಶರ ಪಾತ್ರ ಎಂದೆಂದಿಗೂ ನೆನಪಿನಲ್ಲಿಟ್ಟು ಕೊಳ್ಳುವಂತದ್ದು . 


ಇವರ ದಕ್ಷ ಅಧ್ಯಕ್ಷತನದಲ್ಲಿ ಒಂದು ದೊಡ್ಡ ಸದಸ್ಯರ ಬಳಗವೇ ಸೃಷ್ಟಿಯಾಗಿ ವರ್ಷ 2012 ರಿಂದ ಪ್ರತಿ ವರ್ಷವೂ ಒಂದು ವಾರದ ವಿವಿಧ ಭಾಷೆಗಳ ಶ್ರೇಷ್ಠ ನಾಟಕಗಳ " ರಂಗ ಹಬ್ಬ " ವನ್ನು ದೊಡ್ಡಮಟ್ಟಿನಲ್ಲಿ ಆಯೋಜಿಸುತ್ತಾ ಕಲಾ ಪೋಷಕರನ್ನು ಕಲಾಪ್ರೇಕ್ಷಕರನ್ನು ಆಕರ್ಷಿಸಿದರು. ಇದೇ ವೇದಿಕೆಯಲ್ಲಿ ಹಲವು ಹಿರಿಯ ರಂಗ ಕರ್ಮಿಗಳನ್ನು ಗೌರವಿಸುತ್ತಾ ರಜತ ವರ್ಷದ ಸಂಭ್ರಮಾಚರಣೆಯತ್ತ ಮುಖ ಮಾಡಿ ಕಾರ್ಯ ನಿರ್ವಹಿಸುತ್ತಿರುವವರು ಇವರು. ಈ ಕೈಂಕರ್ಯಕ್ಕೆ ಸಾಕ್ಷಿಯಾಗಿ ತಂಡಕ್ಕೆ ದೊರೆತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಾಶರ ಸಂಘಟನಾ ದೀಕ್ಷೆಗೆ ಫಲಿಸಿದ ದೊಡ್ಡ ಗೌರವ. 


ಇವರ ಮನೆಯೇ ಯಕ್ಷ ದೇಗುಲ. ಹೆಂಡತಿ ಮಕ್ಕಳು ಅಲ್ಲದೆ ನೆರೆಕೆರೆ ಯವರು ಕೂಡ ಯಕ್ಷಗಾನ ಕಲಾವಿದರು. ಇವರ ಈ ಗಂಡು ಕಲೆಯ ಪ್ರಥಮ ಗುರುಗಳು ಉಡುಪಿಯ ಬಹುಮುಖ ಪ್ರತಿಭೆಯಾಗಿದ್ದ ದಿ. ಯು ದುಗ್ಗಪ್ಪ.  ನಂತರ ಯಕ್ಷಗಾನ ಕೇಂದ್ರದ ಸ್ತಂಭ - ಭೀಷ್ಮ ಸಂಜೀವ ಸುವರ್ಣರು . 


ವಿದ್ಯುನ್ಮತಿ ಕಲ್ಯಾಣದ ಸುಲೋಚನ, ಅಂಬೆಯ ದುರ್ಯೋಧನ, ವೀರಮಣಿ ಕಾಳಗದ ಈಶ್ವರ, ಜಾಂಬವತಿ ಕಲ್ಯಾಣದ ಬಣ್ಣದ ವೇಷ ಅಲ್ಲದೆ ಚಿತ್ರಪಟ ರಾಮಾಯಣ ರುಕ್ಮಿಣಿ ಸ್ವಯಂವರ ಮುಂತಾದ ಇವರ ಹಲವು ಯಕ್ಷಗಾನದ ವಿವಿಧ ಪಾತ್ರಗಳು ಯಕ್ಷ ಪ್ರೇಮಿಗಳಿಗೆ ಮುದ ನೀಡಿದಂತಹವುಗಳು. 


ಬರೀ ನಾಟಕ ಯಕ್ಷಗಾನಕ್ಕಷ್ಟೇ ಇವರ ನಟನೆ ಸೀಮಿತವಾಗಿರದೆ ಚಲನಚಿತ್ರ ಹಾಗೂ ಧಾರವಾಹಿಗಳಲ್ಲೂ ಮಿಂಚಿದವರು ಪ್ರಕಾಶ್. ಬಿ ಸುರೇಶ್ ರವರ ದೇವರ ನಾಡಿನಲ್ಲಿ, ಶಿವರಾಜ್ ಕುಮಾರ್ ನಟಿಸಿದ ಜನುಮದಾತ, ಕೃಷ್ಣಪ್ಪ ಉಪ್ಪೂರು ರವರ ಮಹಾನದಿ, ಚಿರಂಜೀವಿ ಸರ್ಜಾ ಅಭಿನಯದ  ಅಮ್ಮ ಐ ಲವ್ ಯು, ಯಶೋದೆ ಧಾರಾವಾಹಿ ಹೀಗೆ ಇವರ ನಟನಾ ಚಾತುರ್ಯ ಕಿರುಪರದೆ ಮತ್ತು ಬೆಳ್ಳಿ ಪರದೆಯವರೆಗೂ ಸಾಗಿ ಎಲ್ಲರ ಮೆಚ್ಚುಗೆ ಪಡೆದಿದೆ. 


ಇನ್ನು ಇವರು ಕಾಲಿಟ್ಟ ಸಂಸ್ಥೆಗಳಲ್ಲಿ ಕಟ್ಟಡಗಳು ಉದ್ಭವಿಸುತ್ತವೆ, ದೇವಳಗಳಲ್ಲಿ ಹೆಚ್ಚಾಗಿ ಬ್ರಹ್ಮ ಕಲಶಗಳು ನಡೆಯುತ್ತವಂತೆ.  ಕೊಡವೂರು ಯುವಕ ಸಂಘದ ಇವರ ಅಧ್ಯಕ್ಷಾವಧಿಯಲ್ಲಿ ಸ್ವಂತ ಕಟ್ಟಡವೊಂದು ಲೋಕಾರ್ಪಣೆಯಾಯ್ತು.  ಕೊಡವೂರು ಶ್ರೀ ಬಬ್ಬು ಸ್ವಾಮಿ ದೈವಸ್ಥಾನದ ಪ್ರಧಾನ ಕಾರ್ಯದರ್ಶಿಯಾಗಿದ್ದ ಸೇವಾ ವಧಿಯಲ್ಲಿ ದೈವಸ್ಥಾನಕ್ಕೊಂದು ಜಾಗ ಮತ್ತು ಕಟ್ಟಡ ನಿರ್ಮಾಣದ ಉಸ್ತುವಾರಿಯೊಂದಿಗೆ ಶ್ರಮಿಸಿದರು. 


ಕಲ್ಮಾಡಿ ಗರೋಡಿಯ ಅಧ್ಯಕ್ಷೀಯ ಅವಧಿಯಲ್ಲಿ ದೈಯೀ ಬೈದೇದಿ ಸಭಾಗೃಹ ನಿರ್ಮಾಣ ಸ್ಥಳದೇವತೆ ಶ್ರೀ ಶಂಕರನಾರಾಯಣ ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ 2018-2021 ರ ತನಕ ಸೇವೆ ಸಲ್ಲಿಸಿದ ಇವರ ಅವಧಿಯಲ್ಲಿ ರಾಶಿ ಪೂಜಾ ಮಹೋತ್ಸವವು ನಾ ಭೂತೋ ಎಂಬಂತೆ ನಡೆದಿದೆ. ಪ್ರಸಕ್ತ 2005 - 28 ರ ಅವಧಿಯ ಶ್ರೀದೇವಳದ ಅಧ್ಯಕ್ಷರಾಗಿ ಕಾರ್ಯವಹಿಸಿ ಕೊಂಡು ಅಹರ್ನಿಶಿ ದುಡಿಯುತ್ತಿದ್ದಾರೆ. 


ವಡ ಭಾಂಡೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವದ, ಕೊಂಬಾಡಿ ಶ್ರೀನಾಗಬ್ರಹ್ಮ ಸ್ಥಾನ ಮತ್ತು ಮಾಯಂದಲ್ ಕ್ಷೇತ್ರ, ವೀರ ಮಾರುತಿ ಭಜನಾ ಸಂಘದ ಸುವರ್ಣ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಕಲ್ಮಾಡಿ ಶ್ರೀ ಬ್ರಹ್ಮ ಬೈದೇರುಗಳ ಗರೋಡಿಯ ಅಧ್ಯಕ್ಷರಾಗಿ, ಕೊಡವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ, ಉಡುಪಿ ಜಿಲ್ಲಾ ಮುದ್ರಣ ಮಾಲೀಕರ ತಂಡದ ಜಿಲ್ಲಾಧ್ಯಕ್ಷ ರಾಗಿಯೂ ಹೀಗೆ ವಿವಿಧ ಕ್ಷೇತ್ರ ಸಂಘ ಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸಿ ಆ ಸಂಘಟನೆಗಳನ್ನು ಬಲಪಡಿಸಿ ಜನಾನುರಾಗಿಯಾಗಿದ್ದಾರೆ. 


ಇವರ ರಂಗಾನುಭವ ವೃತ್ತಿ ಹಾಗೂ ಸಂಘಟನಾ ಮನೋಭಾವಕ್ಕೆ ಪ್ರತಿಯಾಗಿ ಹಲವು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿವೆ. ಹಲವಾರು ಪ್ರಶಸ್ತಿಗಳು ಇವರ ಕೀರ್ತಿ ಮುಕುಟದ ಮಣಿಗಳಾಗಿ ಶೃಂಗಾರಗೊಂಡಿವೆ. ಅವುಗಳಲ್ಲಿ ಕೆಲವು...ಸಿ ಜಿ ಕೆ ರಂಗಪುರಸ್ಕಾರ, ಉಡುಪಿ ತಾಲೂಕು ಹಾಗೂ ಜಿಲ್ಲಾ ಮುದ್ರಣಾಲಯಗಳ ಮಾಲಿಕರ ಸಂಘದ ಪುರಸ್ಕಾರ, ಭೂಮಿಕಾ ಹಾರಾಡಿ ತಂಡದ ಪುರಸ್ಕಾರ, ವನಸುಮಾ ರಂಗ ಪುರಸ್ಕಾರ ಇತ್ಯಾದಿಗಳು. 


ಪತ್ನಿ ಸಂಧ್ಯಾ ಪ್ರಕಾಶರ ವೃತ್ತಿ ಪ್ರವೃತ್ತಿಗಳಿಗೆ ಬೆನ್ನೆಲುಬಾಗಿ ನಿಂತು ಸದಾ ಸಹಕರಿಸುತ್ತಾ ಬಂದವರು..ಆಕೆಯು ಕೂಡ ಯಕ್ಷಗಾನ ಪ್ರಿಯೆ ಹಾಗೂ ನಟಿ. ಇನ್ನು ಮುದ್ದಿನ ಮಕ್ಕಳು ವರಾಲಿ ಮತ್ತು ಮ್ರಿಣಾಲ್ ಕಲಿಕೆಯೊಂದಿಗೆ  ಯಕ್ಷಗಾನ ಹಾಗೂ ನಾಟಕ ಕ್ಷೇತ್ರದಲ್ಲಿ ಅಪ್ಪನನ್ನೇ ಮೀರಿಸುವ ಕಲಾವಿದರಾಗಿ  ಬೆಳೆಯುತ್ತಿದ್ದಾರೆ. 


ಹೀಗೆ ನಟನೆ ಮತ್ತು ಸಂಘಟನೆಯಲ್ಲಿ ಕಲಾ ಲೋಕದ ಗಮನ ಸೆಳೆಯುತ್ತಿರುವ ಪ್ರಕಾಶ್ ಕೊಡವೂರು ರವರಿಗೆ  ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಹಾಗೂ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆ ಈ ಬಾರಿ ವಿಶ್ವ ರಂಗ ದಿನಾಚರಣೆಯ ಅಂಗವಾಗಿ ಮಾರ್ಚ್ 26ರಂದು "ಮಲಬಾರ್ ವಿಶ್ವ ರಂಗ ಪುರಸ್ಕಾರ - 25"  ನ್ನು ನೀಡಿ ಗೌರವಿಸುತ್ತಿದೆ.


ಲೇಖನ...🖋️  ರಾಜೇಶ್ ಭಟ್ ಪಣಿಯಾಡಿ, ಸಂಚಾಲಕರು, ಮಲಬಾರ್ ವಿಶ್ವರಂಗ ಪುರಸ್ಕಾರ.