ಜೀವಿತಾವಧಿಯಲ್ಲಿ ನಾವುಗಳು ಎಲ್ಲಿ ಹೋದರೂ ಕೂಡ ಅಲ್ಲಿನ ವಾತಾವರಣಕ್ಕೆ ಅನುಗುಣವಾಗಿ ಬದುಕಬೇಕಾಗುತ್ತದೆ. ನೂರಾರು ವರ್ಷಗಳ ಇತಿಹಾಸವಿರುವ ಭಾರತ್ ಸೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಇದಕ್ಕೆ ಬೇಕಾದ ತರಬೇತಿ ಜತೆಗೆ ಮಾಹಿತಿಯನ್ನು ನೀಡುತ್ತದೆ.
ರಾಷ್ಟ್ರ ಪ್ರೇಮವಿರುವ ಯುವಜನರಿಗೆ ಅಲ್ಲಲ್ಲಿ ಶಿಬಿರಗಳನ್ನು ಆಯೋಜಿಸಿ ಆ ಮೂಲಕ ಒಳ್ಳೆಯ ವಿಚಾರಗಳನ್ನು ಹಾಗೂ ಜೀವನಾನುಭವಗಳನ್ನು ಕಲಿಸುತ್ತದೆ ಎಂದು ಭಾರತ್ ಸೌಟ್ಸ್ ಮತ್ತು ಗೈಡ್ಸ್ ಉಡುಪಿ ಜಿಲ್ಲಾ ಮುಖ್ಯ ಆಯುಕ್ತ ಇಂದ್ರಾಳಿ ಜಯಕರ್ ಶೆಟ್ಟಿ ಹೇಳಿದರು.
ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ಸಭಾಭವನದಲ್ಲಿ ಶನಿವಾರ ರಾಜ್ಯದ 21 ಜಿಲ್ಲೆಗಳಿಂದ ಆಗಮಿಸಿದ ಸುಮಾರು 250 ರೆಂಜರ್ಸ್ ಮತ್ತು ರೋವರ್ಸ್ ಗಳಿಗೆ ಆಯೋಜಿಸಿದ ರಾಜ್ಯಮಟ್ಟದ ಕಡಲತೀರ ಚಾರಣ, ಪ್ರಕೃತಿ ಅಧ್ಯಯನ ಮತ್ತು ಸ್ವಚ್ಛತಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ನಾವೆಲ್ಲರೂ ಸಾಮಾನ್ಯವಾಗಿ ಬದುಕಲು, ಸಾಧಿಸಲು ಹಾಗೂ ಜೀವಿಸಲು ಹುಟ್ಟಿದಾಗಿನಿಂದ ಅವಕಾಶ ಪಡೆದಿರುತ್ತೇವೆ.
ಆದರೆ ನಮ್ಮ ನಡುವೆ ಸಾಧನೆ ಮಾಡಿದ ಹಾಗೂ ಜೀವನದಲ್ಲಿ ಏನನ್ನೂ ಮಾಡದೇ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದವರನ್ನೂ ನೋಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಸೇವಾ ಮನೋಭಾವವನ್ನು ಬೆಳೆಸಿಕೊಂಡು ಜತೆಗೆ ಪ್ರಕೃತಿಯ ರಕ್ಷಣೆಯ ಜವಾಬ್ದಾರಿ ಹೊತ್ತು ಸಮಾಜದ ಋಣ ಸಂದಾಯ ಮಾಡುವ ಸಂಕಲ್ಪದೊoದಿಗೆ ನಮ್ಮ ಆತ್ಮಸಾಕ್ಷಿಗೆ ಸರಿಯಾಗುವಂತೆ ಮುಂದುವರಿಯೋಣ ಎಂದರು.
ಸ್ಥಳಿಯ ಸಂಸ್ಥೆ ಅಧ್ಯಕ್ಷ ನರಸಿಂಹ ದೇವಾಡಿಗ ಅಧ್ಯಕ್ಷತೆವಹಿಸಿದ್ದರು. ಶಿಬಿರಾರ್ಥಿಗಳು ತಮ್ಮ ನಾಲ್ಕು ದಿನಗಳ ಅನುಭವಗಳನ್ನು ಹಂಚಿಕೊ೦ಡರು. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಜಿಲ್ಲಾ ಸ್ಕೌಟ್ ಆಯುಕ್ತ ಜನಾರ್ದನ ಕೊಡವೂರು, ಖಜಾಂಚಿ ಹರಿಪ್ರಸಾದ ರೈ, ಮಂಜುನಾಥ ಹೆಗ್ಡೆ, ಉಪ್ಪುಂದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ ಶೆಟ್ಟಿ, ಸ್ಥಳಿಯ ಜೆಸಿಐನ ವೈ. ಮಂಗೇಶ ಶ್ಯಾನುಭಾಗ, ಅಭಿಷೇಕ್, ಪುರುಶೋತ್ತಮದಾಸ್, ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಇದ್ದರು.
ಜಿಲ್ಲಾ ಕಾರ್ಯದರ್ಶಿ ಆನಂದ ಅಡಿಗ ಸ್ವಾಗತಿಸಿ. ಶಿಬಿರದ ನಾಯಕ ಪ್ರವೀಣ್ ಗಂಗೊಳ್ಳಿ ವರದಿ ವಾಚಿ ಸಿದರು. ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಸುಮನ್ ಶೇಖರ್ ವಂದಿಸಿದರು. ಉಪನ್ಯಾಸಕ ಹರೀಶ ಕೋಟ್ಯಾನ್ ನಿರೂಪಿಸಿದರು.