"ಭಾರತೀಯ ಸಂಸ್ಕೃತಿ ವಿಶ್ವದ ಸಂಸ್ಕೃತಿ, ವಿಶ್ವ ಮೈತ್ರಿಯ ಸಂಸ್ಕೃತಿ. ವಿಶ್ವದ ಎಲ್ಲ ಜೀವಿಗಳನ್ನು ಉಳಿಸಿ, ಬಳಸಿ, ಬಾಳಿಸಿ, ಬೆಳಗಿಸುವ ಸಂಸ್ಕೃತಿ. ಪುಸ್ತಕ ಮತ್ತು ಮಸ್ತಕದ ಯಾತ್ರೆ ಮತ್ತೆ ಪ್ರಾರಂಭವಾಗಬೇಕು. ಪುಸ್ತಕದಿಂದ ಮಸ್ತಕ ತುಂಬಬೇಕು. ಉಪಯೋಗಕ್ಕಿಂತ ವಿನಿಯೋಗದ ಕಡೆಗೆ ಗಮನ ನೀಡಬೇಕು,ಬಳಸು, ಬಿಸಾಡು (ಯೂಸ್ & ಥ್ರೋ) ವಿಕೃತಿ ನಮ್ಮ ನೆಲದ್ದಲ್ಲ. ಉಪಯೋಗಿಸು, ಪುನರ್ ಉಪಯೋಗಿಸು ಎಂಬುದು ನಮ್ಮ ಸಂಸ್ಕೃತಿ," ಶ್ರೀಮತಿ ಸವಿತಾ. ಕೆ. ಭಟ್ಟ ಅವರ ಪ್ರವಾಸ ಕಥನ 'ಜರ್ಮನಿಯ ನೆಲದಲ್ಲಿ' ಕೃತಿಯ ಲೋಕಾರ್ಪಣೆಗೈಯುತ್ತ ನುಡಿದರು ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ.ಪಾದೇಕಲ್ಲು ವಿಷ್ಣು ಭಟ್ಟರು, "ಇಂತಹ ಪ್ರವಾಸ ಕಥನಗಳು ನಮ್ಮ ಅನುಭವದ ಪರಿಧಿಯನ್ನು ವಿಸ್ತರಿಸುತ್ತವೆ" ಎಂದರು.
ಹಿರಿಯ ಸಾಹಿತಿ ಶ್ರೀ ಗಣಪತಿ ಭಟ್ಟ ವರ್ಗಾಸರ, ಶಿರಸಿ, ಕೃತಿಯನ್ನು ಪರಿಚಯಿಸಿದರು. ಮುಖ್ಯ ಅತಿಥಿ ಶ್ರೀ. ಮಹೇಂದ್ರ ಎನ್ ಶರ್ಮಾ 'ಸವಿತಾ ಭಟ್ಟರಿಂದ ಇನ್ನಷ್ಟು ಕೃತಿಗಳು ಮೂಡಿ ಬರಲಿ' ಎಂದು ಶುಭ ಹಾರೈಸಿದರು.
ಶ್ರೀಮತಿ ಸವಿತಾ ಭಟ್ಟ, ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹವ್ಯಕಸಭಾ ಉಡುಪಿ (ರಿ) ವತಿಯಿಂದ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ದಿನಾಂಕ 08-03-2025ರಂದು ಆಯೋಜಿಸಲ್ಪಟ್ಟ ಲೋಕಾರ್ಪಣಾ ಸಮಾರಂಭದಲ್ಲಿ ಪ್ರೊ. ಕೆ. ಸದಾಶಿವ ರಾವ್ ಕಾರ್ಯಕ್ರಮ ನಿರೂಪಿಸಿ, ಶ್ರೀ ಎಸ್ ಜಿ ಭಾಗವತ್ ವಂದಿಸಿದರು.