ವಿಧಾನ ಸಭೆಯಲ್ಲಿ ಬಿಜೆಪಿ ಶಾಸಕರ ಅತೀವ ವಿರೋಧದ ನಡುವೆಯೂ ಧರ್ಮಾಧಾರಿತವಾಗಿ ಸಾರ್ವಜನಿಕ ಗುತ್ತಿಗೆಯಲ್ಲಿ ಮುಸ್ಲಿಮರಿಗೆ 4% ಮೀಸಲಾತಿಯನ್ನು ನೀಡುವ ಬಿಲ್ ಪಾಸ್ ಮಾಡಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ನಡೆಯನ್ನು ಪ್ರಶ್ನಿಸಿದ ಪತ್ರಕರ್ತರಿಗೆ ಅಗತ್ಯ ಬಿದ್ದರೆ ಸಂವಿಧಾನ ಬದಲಾಗುತ್ತದೆ ಎಂಬಂತೆ ಉತ್ತರಿಸಿರುವ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನಡೆಯನ್ನು ಉಡುಪಿ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಸಂವಿಧಾನವನ್ನು ಸದಾ ಕೈಯಲ್ಲಿ ಹಿಡಿದುಕೊಂಡು ತಿರುಗಾಡುತ್ತಿರುವ ರಾಹುಲ್ ಗಾಂಧಿ ಸಹಿತ ಕಾಂಗ್ರೆಸ್ ನಾಯಕರು ಡಿ.ಕೆ. ಶಿವಕುಮಾರ್ ಅವರ ದೇಶ ವಿರೋಧಿ, ಅಂಬೇಡ್ಕರ್ ವಿರೋಧಿ ಹೇಳಿಕೆಯನ್ನು ಬೆಂಬಲಿಸುತ್ತಾರೋ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಪ್ರಶ್ನಿಸಿದ್ದಾರೆ.
ಸಂವಿಧಾನವನ್ನು ಗುತ್ತಿಗೆ ಪಡೆದಂತೆ, ಎಲ್ಲಾ ವೇದಿಕೆಗಳಲ್ಲಿ ನಾವು ಸಂವಿಧಾನ ರಕ್ಷಕರು ಎಂದು ಬೊಬ್ಬೆ ಹೊಡೆಯುವ ಕಾಂಗ್ರೆಸಿಗರ ಪರಿಸ್ಥಿತಿ ಇದೀಗ ಇಂಗು ತಿಂದ ಮಂಗನಂತಾಗಿದೆ. ದೇಶದ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಿರುವ ಅಪಖ್ಯಾತಿಯನ್ನು ಹೊಂದಿರುವ ಕಾಂಗ್ರೆಸ್ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಸಂವಿಧಾನದ ಕಗ್ಗೊಲೆಗೈದಿರುವುದು ಕರಾಳ ಇತಿಹಾಸವಾಗಿದೆ.
ಡಾ! ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ದುರ್ಬಳಕೆ ಮಾಡಿಕೊಂಡು ಸುಧೀರ್ಘ ಅವಧಿಗೆ ದುರಾಡಳಿತ ನಡೆಸಿ ದೇಶವನ್ನು ವಿನಾಶದ ಅಂಚಿಗೆ ತಳ್ಳಿರುವ ಕಾಂಗ್ರೆಸ್ ಇದೀಗ ಜೈ ಸಂವಿಧಾನ ಎನ್ನುವ ಪ್ರಹಸನದ ಮೂಲಕ ರಾಜ್ಯದ ಜನತೆಗೆ ಮಂಕುಬೂದಿ ಎರಚಲು ಸನ್ನದ್ಧವಾಗಿರುವುದು ಅತ್ಯಂತ ನಾಚಿಕೆಗೇಡಿನ ವಿಚಾರವಾಗಿದೆ.
ಸಂವಿಧಾನದ ಹೆಸರನ್ನೇ ಗುರಾಣಿಯನ್ನಾಗಿಸಿಕೊಂಡು ಬ್ರಹ್ಮಾoಡ ಭ್ರಷ್ಟಾಚಾರದೊಂದಿಗೆ ದೇಶವಾಸಿಗಳಿಗೆ ದ್ರೋಹ ಬಗೆದಿರುವ ಕಾಂಗ್ರೆಸ್ ಇದೀಗ ಸಂವಿಧಾನ ಬದಲಿಸುವ ಹೇಳಿಕೆಯಿಂದ ಸ್ವಯಂ ಸಂವಿಧಾನ ಭಕ್ಷಕರು ಎಂಬುದನ್ನು ರುಜುವಾತುಪಡಿಸಿಕೊಂಡು ಜನತೆಯ ಮುಂದೆ ಬೆತ್ತಲಾಗಿದೆ.
ಮಾತೆತ್ತಿದರೆ ಸಂವಿಧಾನ ಎನ್ನುವ ಕಾಂಗ್ರೆಸ್, ಸಂವಿಧಾನ ಶಿಲ್ಪಿ ಡಾ! ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಎರಡೆರಡು ಬಾರಿ ಸೋಲಿಸುವ ಮೂಲಕ ಅವಮಾನಗೈದು ಅವರ ನಿಧನದ ಸಂದರ್ಭದಲ್ಲಿಯೂ ಅಂತ್ಯ ಸಂಸ್ಕಾರಕ್ಕೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸದೆ ಘೋರ ಅಪಚಾರ ಎಸಗಿದೆ.
ರಾಜ್ಯದ ಉಪ ಮುಖ್ಯಮಂತ್ರಿ ಅವರ ಹೇಳಿಕೆಯಿಂದ ಕಾಂಗ್ರೆಸ್ ಮುಸ್ಲಿಂ ಓಲೈಕೆ ರಾಜಕಾರಣದ ಪರಮಾವಧಿಯನ್ನು ದಾಟಿರುವುದು ಜಗಜ್ಜಾಹೀರಾಗಿದೆ. ಸಂವಿಧಾನದ ರಕ್ಷಕರು ತಾವೇ ಎಂದು ಪೋಸ್ ನೀಡುತ್ತಿದ್ದ ಕಾಂಗ್ರೆಸಿಗರ ಮುಖವಾಡ ಕಳಚಿದೆ. ದೇಶದೆಲ್ಲೆಡೆ ಕಾಂಗ್ರೆಸ್ ಮಾನ ಹರಾಜಾಗಿದೆ.
ಬಿಜೆಪಿ ಸದಾ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಸಫಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಡಾ! ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವಿತಾವಧಿಯ ಐದು ಪ್ರಮುಖ ಸ್ಥಳಗಳನ್ನು ಪಂಚ ತೀರ್ಥಗಳ ಹೆಸರಿನಲ್ಲಿ ಅಭಿವೃದ್ಧಿಪಡಿಸಿ ಅವರಿಗೆ ಗೌರವ ಸಲ್ಲಿಸಿದೆ. ಕಾಂಗ್ರೆಸ್ಸಿನ ದ್ವಂದ್ವ ನೀತಿ, ಒಂದೇ ಕೋಮಿನ ಓಲೈಕೆ ರಾಜಕಾರಣವನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ಮುಂದಿನ ದಿನಗಳಲ್ಲಿ ನಯವಂಚಕ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.