Header Ads Widget

ಪುಸ್ತಕ ನಮ್ಮ ಬದುಕಿನ ಭಾಗವಾಗಲಿ ವಿಶ್ವ ಪುಸ್ತಕ ದಿನ ಪ್ರತಿ ದಿನ ಆಚರಿಸುವಂತಾಗಲಿ

ಪುಸ್ತಕಗಳು ಜ್ಞಾನ ದೀವಿಗೆಯಿದ್ದಂತೆ. ಅದನ್ನು ನಾವು ಹೆಚ್ಚು ಹೆಚ್ಚು ಓದಿದಷ್ಟು ನಮ್ಮ ಜ್ಞಾನ ವಿಸ್ತಾರಗೊಳ್ಳುತ್ತದೆ ಮತ್ತು ಅರಿವಿನ ವ್ಯಾಪ್ತಿ ಹೆಚ್ಚುತ್ತದೆ.


 ಪುಸ್ತಕ ನಮ್ಮ ಆತ್ಮೀಯ ಸ್ನೇಹಿತರಾಗಬೇಕು :-

 ಪುಸ್ತಕದಿಂದ ಸಿಗುವ ಜ್ಞಾನಕ್ಕೆ ಯಾವುದೂ ಸಮಾನವಲ್ಲ. ಈಗ ಎಷ್ಟೇ ಆಧುನಿಕ ತಂತ್ರಜ್ಞಾನಗಳು ಬಂದಿದ್ದರೂ ಪುಸ್ತಕಗಳಿಗೆ ಇರುವ ಮಹತ್ವವೇನು ಕಡಿಮೆಯಾಗಿಲ್ಲ.

ಓದುವವರ ಸಂಖ್ಯೆ ಕಡಿಮೆಯಾಗಿರಬಹುದು ಆದರೆ ಪುಸ್ತಕಗಳಿಗೆ ಈ ಮೊದಲಿನಂತೆಯೇ ಬೇಡಿಕೆಗಳಿವೆ. ಉತ್ತಮ ಲೇಖಕರ ಪುಸ್ತಕಗಳು ಬಂದರೆ ಜನರು ಈಗಲೂ ಕೊಂಡು ಓದುತ್ತಾರೆ. ಅಲ್ಲದೆ ಒಂದು ಕಾಲಘಟ್ಟದ ಮಾಹಿತಿಗಳು ಮುಂದಿನ ಪೀಳಿಗೆಗೆ ಸಿಗುವಲ್ಲಿಯೂ ಈ ಪುಸ್ತಕಗಳ ಪಾತ್ರ ಮಹತ್ವದ್ದು. ಈ ಮೂಲಕ ನಾವು ಹಲವಾರು ವರ್ಷಗಳ ಕಾಲದ ವಿಷಯಗಳನ್ನು ಈಗಲೂ ತಿಳಿಯಲು ಸಾಧ್ಯವಾಗಿದೆ. ವಿಶ್ವದ ಬಹುತೇಕ ಜನರು ವಿವಿಧ ರೀತಿಯ ಪುಸ್ತಕಗಳನ್ನು ಓದಲು ಇಷ್ಟಪಡುತ್ತಾರೆ.


ಅದು ಲೇಖನವಾಗಿರಬಹುದು, ಕಥೆ, ಕಾದಂಬರಿ, ಕವನ, ಆತ್ಮಚರಿತ್ರೆಯಾಗಿರಬಹುದು, ನಿಯತಕಾಲಿಕೆಯಾಗಿರಬಹುದು ಇವೆಲ್ಲವನ್ನೂ ಪುಸ್ತಕ ರೂಪದಲ್ಲಿ ಓದಿದರೇನೆ ಚೆಂದ. ಆದ್ದರಿಂದಲೇ ಪುಸ್ತಕಕ್ಕೂ ಒಂದು ವಿಶೇಷ ದಿನವನ್ನು ನಿಗದಿಪಡಿಸಲಾಗಿದೆ. 

ಅಮೆರಿಕ ಸೇರಿದಂತೆ ವಿಶ್ವದ ವಿವಿಧ ದೇಶಗಳು ವರ್ಲ್ಡ್‌ ಬುಕ್‌ ಡೇ ಅಥವಾ ವಿಶ್ವ ಪುಸ್ತಕ ದಿನ ಎಂದು ಆಚರಿಸುತ್ತವೆ. ಈ ಪುಸ್ತಕದ ಸ್ವರೂಪವು ಆಧುನಿಕ ಆವಿಷ್ಕಾರಗಳಿಗೆ ತಕ್ಕಂತೆ ಬದಲಾವಣೆಯಾಗಿದೆ. ಅದರ ಗಾತ್ರ, ಆಕಾರ, ಕಾಗದಗಳ ಗುಣಮಟ್ಟ, ವಸ್ತು, ಶೈಲಿ ಇತ್ಯಾದಿಗಳಲ್ಲಿ ಗಣನೀಯ ಬದಲಾವಣೆಗಳಾಗಿವೆ. ಈಗಿನ ಪುಸ್ತಕಗಳನ್ನು ಜನಸ್ನೇಹಿಯನ್ನಾಗಿಸುವ ಪ್ರಯತ್ನಗಳು ನಡೆಯುತ್ತಿವೆ. ಪುಸ್ತಕ ದಿನವನ್ನು ಮೊದಲ ಬಾರಿಗೆ ಪರಿಚಯಿಸಿದ್ದು ಯುನೋಸ್ಕೊ. ಅದು 1995, ಏಪ್ರಿಲ್‌ 23 ರಂದು ಈ ದಿನವನ್ನು ಮೊದಲ ಬಾರಿಗೆ ಆಚರಿಸಿತು. ಎಷ್ಟೋ ಜನರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ ನಾವೆಲ್ಲರೂ ಪುಸ್ತಕದಿನವನ್ನು ನಿರಂತರವಾಗಿ ಆಚರಿಸಬೇಕು, ಕಾರಣ ಉತ್ತಮ ಪುಸ್ತಕಗಳು ನಮ್ಮ ನಿಜವಾದ ಜೀವನವಾಗಿದೆ.

ಇಂದು ಅನೇಕ ತಂತ್ರಜ್ಞಾನ ಬಂದಿದೆ ಉದಾ.. ಈ-ಬುಕ್ ಅಲ್ಲದೆ ಗ್ರಂಥಾಲಯಗಳು ಡಿಜಿಟಲ್ ಗೊಂಡಿದೆ ಆದರೂ ಪುಸ್ತಕಗಳನ್ನು ಕೈಯಲ್ಲಿಡಿದು ಓದುವಾಗ ಸಿಗುವ ಖುಷಿ ಮೊಬೈಲ್ ನಲ್ಲಿ ಓದುವಾಗ ಸಿಗಲಾರದು. ಪುಸ್ತಕಗಳನ್ನು ಓದುದರಿಂದ ಸಿಗುವ ಉಪಯೋಗಗಳು ನಮಗೆಲ್ಲಾ ತಿಳಿದಿದೆ ಆದರೂ ನಮಗೆ ಸಮಯವಿಲ್ಲ ಎಂಬ ಕಾರಣ ನೀಡುತ್ತೇವೆ. ಪುಸ್ತಕಗಳನ್ನು ಓದುವ ಮೂಲಕ ನಮ್ಮ ಬಿಡುವಿನ ವೇಳೆಯನ್ನು ಸಮಪ೯ಕವಾಗಿ ಬಳಕೆ ಮಾಡಬಹುದು ಇಲ್ಲವಾದಲ್ಲಿ ಆ ಸಮಯ ಮೊಬೈಲ್ ನಲ್ಲಿ ಕಳೆದು ಹೋಗುತ್ತದೆ.

ನಮ್ಮ ಯುವ ಜನಾಂಗಕ್ಕೆ ಓದುವ ಆಸಕ್ತಿ ಮೂಡಿಸಬೇಕಾಗಿದೆ.

ಹಿರಿಯ ನಾಗರಿಕರು ಹೆಚ್ಚಿನವರು ಪುಸ್ತಕ ಓದುವುದನ್ನು ನಾವು ಗಮನಿಸುತ್ತೇವೆ. ಆದರೆ ಯುವ ಜನಾಂಗ ಈ ನಿಟ್ಟಿ ನಲ್ಲಿ ಸ್ವಲ್ಪ ಹಿಂದೆ ಉಳಿದಿದೆ. ಹೀಗಾಗಿ ಶಾಲಾ ಕಾಲೇಜಿನಲ್ಲಿಯೇ ಈ ಬಗ್ಗೆ ಅರಿವು ಮೂಡಿಸಬೇಕಾಗಿದೆ.

ಮನೆಯೇ ಗ್ರಂಥಾಲಯ: - ಕಸಾಪ ಉಡುಪಿ ತಾಲೂಕು ಘಟಕ ಓದುವ ಆಟಕ್ಕೆ ಬೆಳೆಸಲು ಮತ್ತು ಪ್ರತಿಯೊಂದು ಮನೆ ಮನದಲ್ಲಿ ಗ್ರಂಥಾಲಯ ಮಾಡುವ ದೃಷ್ಟಿಯಿಂದ ಈ ಅ ಅಭಿಯಾನ ಪ್ರಾರಂಭವಾಗಿದೆ. ಈಗಾಗಲೇ 143 ಕಡೆಗಳಲ್ಲಿ ಗ್ರಂಥಾಲಯ ಸ್ಥಾಪನೆಯಾಗಿದೆ.ಕೇವಲ ಮನೆ ಮಾತ್ರವಲ್ಲದೆ, ಆಸ್ಪತ್ರೆ, ಸೆಲೂನ್ ಅಂಗಡಿ, ಐಸ್ ಕ್ರೀಮ್ ಪಾಲ೯ರ್ ಅದೇ ರೀತಿ ಡಿಸಿ ಕಚೇರಿ ಯಲ್ಲಿ ಅತ್ಯಂತ ಸುಸಜ್ಜಿತವಾಗಿ ಗ್ರಂಥಾಲಯ ಸ್ಥಾಪನೆಯಾಗಿರುವುದು ಹೆಮ್ಮೆಯ ವಿಚಾರ ಸರ್ಕಾರದ ಯಾವುದೇ ಅನುದಾನವಿಲ್ಲದೆ ಈ ಕಾರ್ಯ ಮಾಡುತ್ತಿರುವುದು ಸ್ತುತ್ಯಹ೯.

ಈ ಕಾರ್ಯವನ್ನು ಮೆಚ್ಚಿ ರಾಜ್ಯ ಸರ್ಕಾರ ಪುಸ್ತಕ ಪ್ರಾಧಿಕಾರ ಮತ್ತು ತುಳು ಸಾಹಿತ್ಯ ಅಕಾಡೆಮಿ ಮನೆಯಲ್ಲಿ ಗ್ರಂಥಾಲಯ ಕಾರ್ಯಕ್ರಮ ಪ್ರಾರಂಭ ಮಾಡಿರುವುದು ಅಭಿನಂದನೀಯ.

ಪುಸ್ತಕಗಳು ನಮ್ಮ ಜೀವನದ ಬದಲಾವಣೆಗೆ ಕಾರಣವಾಗುವಲ್ಲಿ ಸಂಶಯವಿಲ್ಲ. ಪುಸ್ತಕಗಳನ್ನು ಓದುವ ಹವ್ಯಾಸ ಪ್ರತಿಯೊಬ್ಬರು ರೂಡಿಸಿ ಕೊಳ್ಳಬೇಕು.

ನಹಿ : ಜ್ಞಾನೆನ ಸದೃಶಂ ಎಂಬಂತೆ ಜ್ಞಾನಕ್ಕಿಂತ ಶ್ರೇಷ್ಠವಾದದ್ದು ಮತ್ತೊಂದಿಲ್ಲ .ಈ ಪುಸ್ತಕಗಳು ಮಾತ್ರ ಇದನ್ನು ನೀಡಬಲ್ಲವು"


✍🏼 ರಾಘವೇಂದ್ರ ಪ್ರಭು ಕವಾ೯ಲು

ಲೇಖಕರು