Header Ads Widget

ಉಡುಪಿ ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಪ್ರಿ ವೆಡ್ಡಿಂಗ್‌ ಫೋಟೋ- ವಿಡಿಯೋಗೆ ನಿಷೇಧ!

ಉಡುಪಿ ಶ್ರೀಕೃಷ್ಣ ಮಠದ ಮುಂಭಾಗದಲ್ಲಿ ಮತ್ತು ರಥಬೀದಿಯಲ್ಲಿ ಪ್ರಿ ವೆಡ್ಡಿಂಗ್‌ ಫೋಟೋ- ವಿಡಿಯೋ ಚಿತ್ರೀಕರಣ ಮಾಡುವುದನ್ನು ನಿಷೇಧಿಸಲಾಗಿದೆ. ಪರ್ಯಾಯ ಪುತ್ತಿಗೆ ಮಠದಿಂದ ಈ ಬಗ್ಗೆ ಸೂಚನೆ ನೀಡಲಾಗಿದೆ.

ಗುರುವಾರ (ಏ.10) ಈ ಬಗ್ಗೆ ಪ್ರಕಟಣೆ ನೀಡಿರುವ ಮಠದ ವಿದ್ವಾನ್‌ ಗೋಪಾಲ ಆಚಾರ್ಯ ಅವರು, ಯಾವುದೇ ದೇವಸ್ಥಾನದ ರಥಬೀದಿಗೆ ಪಾವಿತ್ರ್ಯತೆ,‌ ಅದರದೇ ಆದ ನಿಯಮ ಇರುತ್ತದೆ. ಭಕ್ತರು ಅದನ್ನು ಶೃದ್ಧೆಯ ತಾಣವಾಗಿ ಗೌರವಿಸುತ್ತಾರೆ. ಅಲ್ಲಿ ಉತ್ಸವ ನಡೆಯುತ್ತದೆ. ಹೀಗಾಗಿ ಅದು ಪವಿತ್ರ. ಅಲ್ಲಿ ತಮ್ಮ ಸ್ವಾರ್ಥಕ್ಕಾಗಿ ವಿಡಿಯೋ ಮಾಡುವುದು, ಅಶಾಸ್ತ್ರೀಯ ರೀತಿಯ ವಿಡಿಯೋ ಮಾಡುವ ಮೂಲಕ ಪವಿತ್ರ ಜಾಗಕ್ಕೆ ಅವಮಾನ ಮಾಡುವ ಕೆಲಸವಾಗುತ್ತಿದೆ. ಅದನ್ನು ಪ್ರತಿಭಟಿಸಬೇಕಾಗಿದೆ ಎಂದಿದ್ದಾರೆ.

ಉಡುಪಿ ಕೃಷ್ಣ ಮಠದ ರಥಬೀದಿಯಲ್ಲಿ ಅಷ್ಟ ಮಠದ ಯತಿಗಳು ಸಂಚಾರ ಮಾಡುತ್ತಾರೆ, ಉತ್ಸವ ನಡೆಯುತ್ತದೆ, ಭಜನೆ ನಡೆಯುತ್ತದೆ. ಅದೇ ಜಾಗದಲ್ಲಿ ಪ್ರೀತಿಯ ಸಲ್ಲಾಪದ ವಿಡಿಯೋ ಮಾಡುವ ನೀಚ ಕೃತ್ಯಕ್ಕೆ ಕೆಲವರು ಇಳಿದಿದ್ದಾರೆ. ಯಾತ್ರಿಕರಿಗೆ, ಪೀಠಾಧಿಪತಿಗಳಿಗೆ ಮುಜುಗರವಾಗುವ ಹಾಗೆ, ಜನ ತಲೆ ತಗ್ಗಿಸಿ ನಡೆಯುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಪರ್ಯಾಯ ಪೀಠಾಧಿಪತಿ ಶ್ರೀ ಸುಗುಣೇಂದ್ರ ತೀರ್ಥರು ಇದನ್ನು ಖಂಡಿಸಿದ್ದಾರೆ. ಪರಿಣಾಮ ಇನ್ನು ಮುಂದೆ ಶ್ರೀಕೃಷ್ಣ ಮಠದ ಮುಂದೆ, ರಥದ ಮುಂದೆ, ರಥಬೀದಿಯಲ್ಲಿ ವಿಡಿಯೋ ಚಿತ್ರೀಕರಣ ಮಾಡಬಾರದು ಎಂದು ತಿಳಿಸಿದ್ದಾರೆ.