Header Ads Widget

ವಕ್ಫ್‌ ಕಾಯ್ದೆ ವಿರುದ್ಧ ಪ್ರತಿಭಟನೆ– ಪ್ರತಿಭಟನಾಕಾರರಿಗೆ ಪೊಲೀಸ್‌ ಕಾರಿನಲ್ಲೇ ಡ್ರಾಪ್‌ ಕೊಟ್ಟ ಎಸಿಪಿ ನಜ್ಮಾ ಫಾರೂಕಿ!

ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಮಂಗಳೂರಿನ ಅಡ್ಯಾರ್‌ನಲ್ಲಿ ಶುಕ್ರವಾರ ಬೃಹತ್‌ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರಿಗೆ ಪೊಲೀಸ್‌ ಅಧಿಕಾರಿಯ ಕಾರಿನಲ್ಲೇ ಡ್ರಾಪ್‌ ಕೊಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ವಕ್ಫ್‌ ಕಾಯ್ದೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ 73ರ ಸಮೀಪದ ಅಡ್ಯಾರ್ ಶಾ ಮೈದಾನದಲ್ಲಿ ಬೃಹತ್‌ ಪ್ರತಿಭಟನಾ ಸಭೆ ನಡೆದಿತ್ತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಕಿಲೋಮೀಟರ್‌ಗಟ್ಟಲೇ ಸ್ತಬ್ಧವಾಗಿತ್ತು. ಹೆದ್ದಾರಿ ಬಂದ್ ಮಾಡಬಾರದು ಎಂಬ ಹೈಕೋರ್ಟ್ ಸೂಚನೆ ಇದ್ದರೂ, ಪ್ರತಿಭಟನಾಕಾರರ ಗುಂಪು ಉದ್ದೇಶಪೂರ್ವಕವಾಗಿ ಹೆದ್ದಾರಿಯನ್ನು ಅಲ್ಲಲ್ಲಿ ಬಂದ್ ಮಾಡಿತ್ತು. 

ಮತ್ತೊಂದೆಡೆ ವಾಹನಗಳು ಕಿಲೋಮೀಟರ್ ಗಟ್ಟಲೆ ರಸ್ತೆಯಲ್ಲಿ ನಿಂತಿದ್ದವು, ಪೊಲೀಸರು ಹರಸಾಹಸ ಪಟ್ಟು ವಾಹನಗಳನ್ನು ಮುಂದಕ್ಕೆ ಕಳುಹಿಸುತ್ತಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನೆ ಮುಗಿದ ಬಳಿಕ ಕೆಲ ಪ್ರತಿಭಟನಾಕಾರರಿಗೆ ಮಂಗಳೂರು ಟ್ರಾಫಿಕ್ ಎಸಿಪಿ ನಜ್ಮಾ ಫಾರೂಕಿ ಅವರು ಬಳಸುವ ಕಾರಿನಲ್ಲಿ ಸೈರನ್‌, ಎಮರ್ಜೆನ್ಸಿ ಲೈಟ್‌ ಹಾಕಿಕೊಂಡು ಡ್ರಾಪ್‌ ನೀಡಲಾಗಿದೆ.

ಟ್ರಾಫಿಕ್ ನಿಯಂತ್ರಣ ಮಾಡಬೇಕಿದ್ದವರಿಂದಲೇ ರೂಲ್ಸ್ ಬ್ರೇಕ್ ಆಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.