Header Ads Widget

ಸರ್ವಜ್ಞ ಪೀಠಕ್ಜೆ ಸುವರ್ಣ ಕವಚ ಅರ್ಪಣೆ

ಸೌರ ಯುಗಾದಿಯ ಪರ್ವ ದಿನದಂದು, ಪರ್ಯಾಯ ಮಠಾಧೀಶರಾದ ಪರಮ ಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಜಗದ್ಗುರುಗಳಾದ ವಿಶ್ವವಂದ್ಯರಾದ ಸ್ವರೂಪೋದ್ಧಾರಕರಾದ, ಸರ್ವಜ್ಞಾಚಾರ್ಯ ರಾದ ಶ್ರೀಮದಾನಂದ ತೀರ್ಥ ಶ್ರೀಪಾದರು ಕುಳಿತಿರುವ ದಿವ್ಯ ಸಾನ್ನಿಧ್ಯವಿರುವ ಸರ್ವಜ್ಞ ಪೀಠಕ್ಕೆ ಸುವರ್ಣ ಕವಚವನ್ನು ತೊಡಿಸಿ ಶ್ರೀಕೃಷ್ಣನಿಗೆ, ತಮ್ಮ ಪ್ರಿಯಗುರುಗಳಾದ ಅದಮಾರು  ಮಠಾಧೀಶರಾದ ಪರಮ ಪೂಜ್ಯ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ಮೂಲಕ ಅರ್ಪಣೆ ಮಾಡುವುದರ ಮೂಲಕ ತಮ್ಮ ಸನ್ಯಾಸಾಶ್ರಮದ ಐವತ್ತನೆಯ ವರ್ಷದ ಆಚರಣೆಯನ್ನು (ಸುವರ್ಣ ಮಹೋತ್ಸವವನ್ನು ಸಾರ್ಥಕ ಗೊಳಿಸಿಕೊಂಡರು.

ಈ ಸಂದರ್ಭದಲ್ಲಿ ಶ್ರೀಪಾದರ ಅಪೇಕ್ಷೆಯಂತೆ ಈ ಕಾರ್ಯಕ್ರಮದಲ್ಲಿ ಭಂಡಾರಕೇರಿ ಮಠಾಧೀಶರಾದ ಶ್ರೀ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು ಭಾಗವಹಿಸಿ ಆಶೀರ್ವಚನವಿತ್ತರು.

ಸರ್ವಜ್ಞ ಪೀಠದಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣರೊಂದಿಗೆ ಆಚಾರ್ಯರ ರೂಪವೆಂದೆ ಜ್ಞಾನಿಗಳು ಪರಿಗಣಿಸಿದ ಸರ್ವಮೂಲ ಗ್ರಂಥಗಳನ್ನು ಇರಿಸಲಾಗಿದ್ದು ಅವೇ ಮುಖ್ಯಾರ್ಥದಲ್ಲಿ ಸು-ವರ್ಣ ಗಳಿಸಿದ್ದು ಈ ಮೂಲಕ ಸರ್ವಜ್ಞ ಸುವರ್ಣ ಸಿಂಹಾಸರಿಂದ ವೈಷ್ಣವ ಭಕ್ತಿಸಿದ್ದಾಂತ ಪ್ರಚಾರ ಆಗುವಂತೆ ಕೃಷ್ಣ ದೇವರು ಅನುಗಹಿಸಲಿ ಎಂದು ಪರ್ಯಾಯ ಪತ್ತಿಗೆ ಶ್ರೀಗಳು ಭಾವುಕರಾಗಿ ನುಡಿದರು.

ಕಿರಿಯ ಶ್ರೀಪಾದರಾದ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದ ಈ ಅಪೂರ್ವ ಕ್ಷಣದಲ್ಲಿ ಅನೇಕ ಮಂದಿ ಭಕ್ತರು ಹಾಗೂ ವಿದ್ವಾಂಸರು ಪಾಲ್ಗೊಂಡು ಧನ್ಯರಾದರು.

ವಿಶ್ವ ಎಂದರೆ ಭಗವಂತ ಹಾಗೂ ಪ್ರಾಣದೇವರು. ಅವರು ಇಲ್ಲಿ ಚೆನ್ನಾಗಿ ವಾಸ ಮಾಡುತ್ತಾರೆ. ಇದು ವಿಶ್ವವಸು ಪೀಠ. ಅನಂತ ಆಸನ ಪರಶುರಾಮದೇವರು ರಜತಪೀಠದಲ್ಲಿದ್ದಾರೆ. ಜ್ಞಾನ ಕಾರ್ಯದ ಮೂಲಕ ವಿಶೇಷವಾಗಿ ಸೇವೆ ಮಾಡಿರುವ ಶ್ರೀ ಆನಂದ ತೀರ್ಥರ ಪೀಠಕ್ಕೆ ಸುಗುಣೇಂದ್ರ ತೀರ್ಥರ ಮೂಲಕ ಸುವರ್ಣ ಪೀಠವನ್ನು ಅರ್ಪಣೆ ಮಾಡಿಸಿದ್ದಾರೆ - ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು, ಭಂಡಾರ ಕೇರಿ ಮಠ, ಉಡುಪಿ.

ಇಷ್ಟು ದಿವಸ ರಜತ ಪೀಠಪುರ ಆಗಿತ್ತು. ಇಂದಿನಿಂದ ಸುವರ್ಣ ಪೀಠಪುರ. ಆರಂಭದಲ್ಲಿ ದಾರುಮಯ ಪೀಠ ಇದ್ದಿರಬೇಕು. ಭೋಜ ರಾಜ ರಜತಪೀಠ ಮಾಡಿದ. ಆ ಭೋಜರಾಜನೇ ಸುಗುಣೇಂದ್ರ ತೀರ್ಥರಲ್ಲಿ ಸನ್ನಿಹಿತರಾಗಿ ಈ ಕೆಲಸ ಮಾಡಿರಬೇಕು. ಇನ್ನು ಮುಂದೆ ಇಲ್ಲಿ ಪೀಠಾರೋಹಣ ಮಾಡತಕ್ಕ ಪ್ರತಿಯೊಬ್ಬರಿಗೂ ಒಂದು ದೊಡ್ಡ ಜವಾಬ್ದಾರಿಯನ್ನು ಸುಗುಣೇಂದ್ರ ತೀರ್ಥರು ಕೊಟ್ಟಿದ್ದಾರೆ ಈ ಪೀಠದಲ್ಲಿ ಯಾರು ಕೂಡ್ತಾರೋ ಅವರ ಬಾಯಿಯಿಂದ ಸುವರ್ಣಗಳೇ ಬರಬೇಕು. ~ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಅದಮಾರು ಮಠ ಉಡುಪಿ.

ಜಗತ್ತಿನಲ್ಲಿ ಅತ್ಯಂತ ಪವಿತ್ರವಾದ ಸ್ಥಳ ಸರ್ವಜ್ಞ ಪೀಠ. ಸಾಕ್ಷಾತ್ ವಾಯುದೇವರೇ ಕೂತ ಪೀಠ. ನಂತರ ವಾದಿರಾಜ ಸ್ವಾಮಿಗಳವರು ಕೂತ ಪೀಠ. ಅಷ್ಟಮಠದ ಎಲ್ಲಾ ಯತಿಗಳು ಕೂತ ಒಂದು ಸ್ಥಳ ಇದ್ದರೆ ಅದು ಈ ಸರ್ವಜ್ಞ ಪೀಠ. ಶ್ರೀ ಆಚಾರ್ಯರು ಪ್ರಣವ ಮಂತ್ರ ಜಪ ಮಾಡಿದ ಸ್ಥಳ ಇದು. ಈ ಸ್ಥಳಕ್ಕೆ ಸದೃಶವಾದ ಇನ್ನೊಂದು ಸ್ಥಳ ಇಲ್ಲ. ಜನರಿಗೆ ಇದರ ಮಹತ್ವ ತಿಳಿಯಲಿಕ್ಕಾಗಿ ಈ ಸುವರ್ಣ ಸಮರ್ಪಣೆ. ಚೈತ್ರ ಕೃಷ್ಣ ಬಿದಿಗೆ ನಮಗೆ ಆಶ್ರಮ ಆದ ದಿವಸ. ಇಂದು ಯುಗಾದಿಯೂ ಬಂದಿದೆ. ಯತಿಗಳು ಇಲ್ಲಿ ಕುಳಿತು ಪಾಠ ಪ್ರವಚನ ಸುಧಾದಿ. ಸರ್ವ ಮೂಲ ಪಾಠ ಮಾಡಿದ್ದಾರೆ.. ಮಂತ್ರ ಜಪ ಮಾಡಿದ್ದಾರೆ. ~ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಪರ್ಯಾಯ ಪೀಠಾಧೀಶ, ಪರ್ಯಾಯ ಪುತ್ತಿಗೆ ಶ್ರೀ ಕೃಷ್ಣ ಮಠ, ಉಡುಪಿ.

ಗುರುಗಳ ಸಂಕಲ್ಪದಂತೆ ಸುವರ್ಣ ಪೀಠ ಸಮರ್ಪಣೆಯಾಗಿದೆ. ಶ್ರೀ ಕೃಷ್ಣ ಇದರಿಂದ ಪ್ರೀತನಾಗಲಿ ಎಂದು ಪ್ರಾರ್ಥಿಸುತ್ತೇವೆ. ~ಶ್ರೀ ಸುಶ್ರೀ0ದ್ರ ತೀರ್ಥ ಶ್ರೀಪಾದರು, ಕಿರಿಯ ಶ್ರೀಗಳು, ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ, ಉಡುಪಿ.