Header Ads Widget

ತುಳುನಾಡಿನ ಪರ ಕಾರ್ಯ ನಿರ್ವಹಿಸುತ್ತಿರುವ ಒಂದು ವಿಶಿಷ್ಟ ಸಂಸ್ಥೆ ಆಟ {AATA}


ಕಡಲಾಚೆಯ ಅತಿ ದೂರದ ಅಮೆರಿಕದಲ್ಲಿ ತುಳು ಭಾಷೆ ಹಾಗೂ ತುಳುವ ಸಂಸ್ಕೃತಿಯನ್ನು ಪಸರಿಸಿ, ಉಳಿಸಿ ಬೆಳೆಸುವತ್ತಾ ಗಮನಾರ್ಹ ಕೆಲಸ ಕಾರ್ಯಗಳನ್ನು AATA ಅಖಿಲ ಅಮೇರಿಕಾ ತುಳು ಅಂಗಣ ಅಥವಾ ಇಂಗ್ಲೀಷ್ ನಲ್ಲಿ ಆಲ್ ಅಮೆರಿಕಾ ತುಳು ಅಸೋಸಿಯೇಷನ್ ಎನ್ನುವ ಯಾವುದೇ ಲಾಭೋದ್ದೇಶಗಳಿಲ್ಲದ ಘಟಕವೊಂದು ಮಾಡುತ್ತಿರುವುದು ಇಂದು ಜನಮಣ್ಣನೆಗಳಿಸುತ್ತಾ ವಿಶ್ವ ವಿಖ್ಯಾತಗೊಳ್ಳುತ್ತಿರುವುದು ಪ್ರಶಂಸನೀಯ , ಅದಕ್ಕೆ ಪೂರಕವೆಂಬಂತೆ ಇತ್ತೀಚೆಗಷ್ಟೇ ಕಳೆದ ತಾರೀಕು 23/3/202 ಆದಿತ್ಯವಾರ ಅಂತರ್ಜಾಲದ ಜೂಮ್ ಅಂಗಣದಲ್ಲಿ ನಡೆದ ಇವರ ವಿಜಯೋತ್ಸವ ಸಮಾರಂಭವೊಂದು ಸಾಕ್ಷಿಯಾಯಿತು.


ಪ್ರತಿವರ್ಷದಂತೆ ಸತತ ಮೂರನೇ ಭಾರಿಗೆ ಈ ವರ್ಷವೂ ಆಟ ಸಂಸ್ಥೆಯು ತುಳುಲಿಪಿ ಕಲಿಕೆಯ ಕಾರ್ಯಾಗಾರವನ್ನು ಆಯೋಜಿಸಿದ್ದು ಜನವರಿ 19ನೇ ತಾರೀಖಿಗೆ ನೆರೆದಿರುವ ಗಣ್ಯರ ಹಾಗೂ ಶಿಕ್ಷಣಾರ್ಥಿಗಳ ಸಮಕ್ಷಮ ಈ ಕೂಟವು ದೀಪ ಪ್ರಜ್ವಲನೆಯೊಂದಿಗೆ  ಉದ್ದೀಪನಗೊಂಡು, ಭಾರತವೂ ಸೇರಿದಂತೆ,ಉಗಾಂಡ,ಸಿಂಗಾಪುರ್,ನೈಜೀರಿಯಾ,ಆಸ್ಟ್ರೇಲಿಯಾ,ಅಮೇರಿಕಾ, ಕೆನಡಾ ಮತ್ತು ಗಲ್ಫ್ ರಾಷ್ಟ್ರಗಳನ್ನೊಳಗೊಂಡು ಸರಿಸುಮಾರು ಹನ್ನೊಂದು ದೇಶದ 50ಕ್ಕೂ ಹೆಚ್ಚಿನ ಸಂಖ್ಯೆಯ ಉತ್ಸುಕ ವಿದ್ಯಾರ್ಥಿಗಳು ತುಳುಲಿಪಿ ಕಲಿಕೆಗಾಗಿ ನೊಂದಾವಣೆ ನಿರೀಕ್ಷಿಸಿ ಮನವಿ ಸಲ್ಲಿಸಿ ಆಟದ 2025ರ ತುಳುಲಿಪಿ ಕಲಿಕಾ  ತಂಡದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.



ಆಟ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳ ಕೂಡುವಿಕೆಯೊಂದಿಗೆ ತಾರೀಕು 23/03/2025 ರ ಆದಿತ್ಯವಾರ ನಡೆದ ವಿಜಯೋತ್ಸವ -ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ವಿಶೇಷ ಆಹ್ವಾನಿತ ಗೌರವ ಅತಿಥಿಯಾಗಿ ಆಗಮಿಸಿದ್ದ ತುಳುಲಿಪಿ  ಅಧ್ಯಯನಕಾರ,ಲೇಖಕ,ಪ್ರೊಫೆಸರ್ ಡಾ.ರಾಧಾಕೃಷ್ಣ ಬೆಳ್ಳೂರ್ ರವರು ಮಾತನಾಡಿ ತುಳುಲಿಪಿ ನಡೆದುಬಂದ ದಾರಿ ಹಾಗೂ ಕಾಲಾಂತರದಲ್ಲಿ ಆಗಿರುವ ಬದಲಾವಣೆ,ಅನ್ಯ ಭಾಷೆಗೆ ಎರವಲು ಮತ್ತು ಬೆಳವಣಿಗೆಯತ್ತ ಬೆಳಕುಚೆಲ್ಲಿ ಸವಿಸ್ತಾರ ಮಾಹಿತಿ ಒದಗಿಸಿಕೊಟ್ಟರು.


ಡಾ.ಬೆಳ್ಳೂರ್ ರವರ ಅನುಭವದ ಮಾತುಗಳು ಕೇವಲ ಭಾಷಣವೆನಿಸದೆ ಒಂದು ಸುಧೀರ್ಘ ಉಪನ್ಯಾಸವೇ ಆಗಿ ಪ್ರತಿಯೊಬ್ಬರಿಗೂ ಜ್ಞಾನ ದೀವಟಿಕೆಯಂತಿತ್ತು. ಮುಂದುವರಿದು ತುಳುನಾಡಿನ ಪರ ಆಟ ಸಂಸ್ಥೆಯ ಕಾಳಜಿ, ಕಾರ್ಯವೈಖರಿ ಹಾಗೂ ನಡೆಸುತ್ತಿರುವ ಉದಾತ್ತ ಕಾರ್ಯಗಳನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತಾ ಶುಭವನ್ನು ಹಾರೈಸಿದರು .


ಸಂಘಟನೆಯ ಉಪಾಧ್ಯಕ್ಷ ಶ್ರೀ ಶಿರಿಶ್ ಶೆಟ್ಟಿಯವರು ಮಾತನಾಡಿ ತುಳುಲಿಪಿಯನ್ನು ಇಷ್ಟೊಂದು ಸರಳವಾಗಿಸಿ ಎಲ್ಲರಿಗೂ ಕಲಿತುಕೊಳ್ಳುವ ವೇದಿಕೆಯನ್ನು ಒದಗಿಸಿಕೊಡುತ್ತಾ ತುಳುಲಿಪಿಯ ಬೆಳವಣಿಗೆಗಾಗಿ ಶ್ರಮಿಸುತ್ತಿರುವ ಹಾಗೂ ತಮ್ಮನ್ನು ಮುಡಿಪಾಗಿಸಿಟ್ಟಿರುವ ಭಾಸ್ಕರ್ ಶೇರಿಗಾರ್ ಹಾಗೂ ಶ್ರೀವಲ್ಲಿ ರೈ ಯವರ ನಾಯಕತ್ವನ್ನು ಶ್ಲಾಘಿಸಿ , ಈ ನಿಟ್ಟಿನಲ್ಲಿ ಆಟ ಸಂಸ್ಥೆಯು ಪ್ರಪಂಚದ ಅನೇಕ ಸಂಘಟನೆಗಳ ಪೈಕಿ ಮುಂಚೂಣಿಯಲ್ಲಿ ಎದ್ದು ಕಾಣುತ್ತಿದೆ ಎಂದು ಕೊಂಡಾಡಿದರು ಹಾಗೂ ತುಳುಲಿಪಿ ಕಲಿಕೆಗೆ ಯಾವುದೇ ಮಾನದಂಡ ಅಥವಾ ವಯಸ್ಸಿನ ಮಿತಿಗಳಿರುವುದಿಲ್ಲ , ನಮ್ಮ ಸಂಸ್ಕೃತಿಯನ್ನು ಕಾಪಾಡಿಕೊಳ್ಳುವುದಕ್ಕೋಸ್ಕರವಾದರೂ ನಾವು ತುಳುಲಿಪಿ ಕಲಿಯುವ ಆಸಕ್ತಿ ತೋರಿಸಬೇಕೆಂಬು ವುದನ್ನು ವ್ಯಕ್ತಪಡಿಸುತ್ತಾ ಕಲಿಯುತ್ತಿರುವ ಎಲ್ಲ ವರ್ಗದ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು .


ಹಾಗೆಯೇ ಈಗ ತುಳುಲಿಪಿ ಮತ್ತು ಭಾಷೆಯ ಪರ್ವಕಾಲ ನಡೆಯುತ್ತಿದೆ ,ಪರಿವರ್ತನೆ ಜಗದ ನಿಯಮ ಎಂಬಂತೆ ತುಳು ಭಾಷೆ ಹಾಗೂ ಲಿಪಿ ಎಲ್ಲಾ ರೂಪಾಂತರಗಳನ್ನು ಸಾಗಿ ಬಂದು ಇಂದು ಒಂದು ಹಂತಕ್ಕೆ ಬಂದು ತಲುಪಿದೆ ,ಮುಂದಕ್ಕೆ ಆಗುವುದು ಎಲ್ಲವೂ ಒಳ್ಳೆಯದೇ ಎಂದು ಮಾರ್ಮಿಕವಾಗಿ ನುಡಿದ ನಿರ್ದೇಶಕ ಮಂಡಳಿಯ ಸದಸ್ಯರಾದ ಬೋಸ್ಟನ್ ನ ಶ್ರೀ ಪ್ರಸನ್ನ ಲಕ್ಷ್ಮಣ್ ಆಟ ಸಂಘಟನೆಯ ಗುರಿ ಮತ್ತು ಧ್ಯೇಯಗಳನ್ನು ವಿವರಿಸುತ್ತಾ ಮಾಹಿತಿ ಒದಗಿಸಿ ಶುಭ ಹಾರೈಸಿದರು.


ಒಂದು ಕಾರ್ಯಾಗಾರ ಎಂದಾಗ ಪ್ರಮುಖವಾದವುಗಳಲ್ಲಿ ಶಿಕ್ಷಕ ವೃಂದ  ಮುಖ್ಯ ಸ್ಥರದಲ್ಲಿ ಬರುವಂತದ್ದು , ವಿದ್ಯಾರ್ಥಿಗಳ ಮನೆಕೆಲಸಗಳನ್ನು ,ಪ್ರಬಂಧಗಳನ್ನು ಸಮಯಕ್ಕೆ ಸರಿಯಾಗಿ ಕರಾರುವಕ್ಕಾಗಿ ತಿದ್ದಿ ತೀಡಿ ತೋರಿಸಿಕೊಟ್ಟು ಮುಂದಿನ ತರಗತಿಗೆ ಅವರನ್ನು  ಅಣಿಯಾಗಿಸುತ್ತಿದ್ದ ಶಿಕ್ಷಕರೆಂದರೆ ಶ್ರೀ ಪ್ರಭಾಕರ್ ಭಟ್, ರೇಷ್ಮಾ ಚೆಟ್ಟಿಯಾರ್ , ಜಗದೀಶ್ ಕುಮಾರ್ ಭಾಸ್ಕರ್ ಶೇರಿಗಾರ್ ಹಾಗೂ ಶ್ರೀವಲ್ಲಿ ರೈ ಮಾರ್ಟೆಲ್ ವಿದ್ಯಾರ್ಥಿಗಳು ಸರಿಯಾಗಿ ಕಲಿತು ಅರಗಿಸಿಕೊಳ್ಳುವಲ್ಲಿ ಇವರ ಪಾತ್ರ ಅಪಾರ. ಪ್ರಾಯದ ತಾರತಮ್ಯವಿಲ್ಲದೆ 8 ವಯಸ್ಸಿನ ಕಿರಿಯರಾದಿಯಾಗಿ  82 ವಯಸ್ಸಿನ ಹಿರಿಯ ನಾಗರಿಕರೊಬ್ಬರು ಈ ವರ್ಷದ ಕಾರ್ಯಾಗಾರದಲ್ಲಿ ಭಾಗವಹಿಸಿ,ಕೋರ್ಸ್ ಸಂಪೂರ್ಣಗೊಳಿಸಿ ಪ್ರಮಾಣ ಪತ್ರ ಪಡೆದುಕೊಂಡಿರುವುದನ್ನು ಶಿಕ್ಷಕ ವೃಂದ ಹಾಗೂ ಸಂಘಟನೆ ಮೇಲ್ಪಂಕ್ತಿಯಲ್ಲಿ ಪುನರುಚ್ಚರಿಸಿಕೊಂಡಿದೆ.ಹಾಗೆಯೇ ಈ ವಿಜಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಠ್ಯೇತರ ವಿಷಯಗಳಲ್ಲಿ(ಹಾಡು,ಚಿತ್ರ ವಿನ್ಯಾಸ,ಕಲೆ,ಮಾತುಗಾರಿಕೆ ಇತ್ಯಾದಿ) ತಮ್ಮ ತಮ್ಮ ಪ್ರತಿಭೆಯನ್ನು ತೋರಿಸಿ ಮನರಂಜಿಸಿ ಶಹಬ್ಬಾಸ್ ಗಿಟ್ಟಿಸಿಕೊಂಡಿರುವರು.              



ಇನ್ನುಳಿದಂತೆ ಆಟ ಸಂಸ್ಥೆಯ ಕ್ಯಾಲಿಫೋರ್ನಿಯಾದ ಅಂಬಾಸಡರ್ ಡಾ.ಜಗದೀಶ್ ಕುಮಾರ್ ಕಾರ್ಯಕ್ರಮದ ನಿಯಮಾವಳಿಗಳನ್ನು ವಿವರಿಸಿದರೆ,ಕೋಶಾಧಿಕಾರಿ ಅಟ್ಲಾಂಟಾದ ಸಂತೋಷ್ ಕುಮಾರ್ ಶೆಟ್ಟಿ ಪಜಂಬಿಲ ಸ್ವಾಗತ ಭಾಷಣ ಮಾಡಿ ಅತಿಥಿಗಳ್ಳನ್ನು ಬರಮಾಡಿಕೊಂಡರು ,ಕಲ್ಪಾರ್ಥಿ ಶುಭ ಶ್ರೀ ತುಳುನಾಡು ಭಕ್ತಿಗೀತೆ ಹಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರಕಿತ್ತು.  



ಮುಂದುವರಿದು,ಪ್ರಸ್ತುತ ಅಧ್ಯಕ್ಷೆಯಾಗಿರುವ ಅಲ್ಲದೆ ಈ ವರ್ಷದ ಮುಖ್ಯ ಶಿಕ್ಷಕಿಯೂ ಆಗಿ ಜವಾಬ್ಧಾರಿ ವಹಿಸಿಕೊಂಡಿರುವ  ಶ್ರೀಮತಿ ಶ್ರೀವಲ್ಲಿ ರೈ ಮಾರ್ಟೆಲ್ ಮಾತನಾಡಿ ಸಂಸ್ಥೆಯ ಚಟುವಟಿಕೆ ಹಾಗೂ ಪ್ರಸಕ್ತ ವಿದ್ಯಾಮಾನಗಳ ಸಮಗ್ರ ವರದಿಕೊಡುವುದರೊಂದಿಗೆ ತಮ್ಮ ಹಾಗೂ ಭಾಸ್ಕರ್ ಶೇರಿಗಾರ್ ರವರ ನೇತೃತ್ವದಲ್ಲಿ 10 ವಾರ 70 ದಿನಗಳ ಸುಧೀರ್ಘ ಅವಧಿಯಲ್ಲಿ ನಡೆದಂತಹ ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ 50 ವಿದ್ಯಾರ್ಥಿಗಳಲ್ಲಿ ಸುಮಾರು 30 ವಿದ್ಯಾರ್ಥಿಗಳು ತಮ್ಮನ್ನು ಪರಿಪೂರ್ಣ ತೊಡಗಿಸಿಕೊಂಡು ,ತಮ್ಮ ಕಲಿಕೆಯ ಅಂತಿಮ ಚರಣದ ಅಂಗವಾದ ತಮ್ಮ ತಮ್ಮ ವಿಷಯಾಧಾರಿತ ಪ್ರಬಂಧವನ್ನು ಸಲ್ಲಿಸಿ ಸೈ ಎನ್ನಿಸಿಕೊಂಡು ಈ ವಿಜಯೋತ್ಸವ ಸಮಾರಂಭದಲ್ಲಿ ತಮ್ಮ ಪ್ರಮಾಣಪತ್ರ ಪಡೆದುಕೊಂಡವರನ್ನು ಪ್ರಶಂಸಿಸಿ, ಮಿಕ್ಕುಳಿದವರನ್ನೂ ಬೆನ್ನುತಟ್ಟಿ ಉತ್ತೇಜಿಸುತ್ತಾ ಪ್ರಸಕ್ತ ಕಾರ್ಯಾ ಗಾರದ ಅಂಶಗಳನ್ನು ಸಂಪೂರ್ಣಗೊಳಿಸುವರೇ ತಮ್ಮ ಪ್ರಯತ್ನ ಜಾರಿಯಲ್ಲಿಟ್ಟಿರುವಂತೆ ಮನವಿ ಮಾಡುತ್ತಾ ಹಿತನುಡಿಗಳನ್ನಾಡಿದರು. 

ಈ ವಿಜಯೋತ್ಸವ ವಿದ್ಯಾರ್ಥಿಗಳ ಪಠ್ಯೇತರ ಪ್ರತಿಭೆಯ ಅನಾವರಣಕ್ಕೂ ಒಂದು ವೇದಿಕೆಯಾಯ್ತು ಎಂದು ಹರ್ಷ ವ್ಯಕ್ತ ಪಡಿಸಿದರು. ಕೊನೆಯದಾಗಿ ಸಂಘಟನೆಯ ಸ್ಥಾಪಕ ಅಧ್ಯಕ್ಷರಲ್ಲೊಬ್ಬರಾದ ಬೋಸ್ಟನ್ ನ  ಶ್ರೀ ಭಾಸ್ಕರ್ ಶೇರಿಗಾರ್ ರವರು ಮಾತನಾಡಿ ಸಂಸ್ಥೆಯ ಮುಂದಿನ ಯೋಜನೆಯ ಕರಡು ಮಾಹಿತಿ ಕೊಟ್ಟರು.ಹಾಗೂ ಅತಿಥಿಗಳಿಗೆ,ಸಂಘಟನೆಯ ಸದಸ್ಯರಿಗೆ ,ಆಟದ  ಅಂಬಾಸಿಡರ್ ಗಳಿಗೆ ,ನೊಂದಾಯಿಸಿದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ, ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಸಮರ್ಪಿಸಿದರು. ಸೀಕೇ ಶೆಟ್ಟಿ ಮಸ್ಕತ್ ಕಾರ್ಯಕ್ರಮ ನಿರೂಪಿಸಿದರು.  

        
ಒಟ್ಟಿನಲ್ಲಿ ಹೇಳುವುದಾದರೆ ಮಾಸ್ಟರ್ಸ್ ಡಿಗ್ರಿ ಓದಿ ಅಭಿವೃದ್ಧಿಶೀಲ ದೇಶಗಳಲ್ಲಿ ತಮ್ಮ ತಮ್ಮ ಉದ್ಯೋಗ  ಕ್ಷೇತ್ರದಲ್ಲಿ ವ್ಯಸ್ಥರಾಗಿರುವ ಇವರು ಯಾವುದೇ ಲಾಭೋದ್ದೇಶವಿಲ್ಲದ ಸಂಸ್ಥೆಯನ್ನು ಕಟ್ಕೊಂಡು ನಡೆಸಿ ತುಳುನಾಡಿನ ಪರ ತೋರಿಸುತ್ತಿರುವ ಕಾಳಜಿ ಪ್ರಶಂಸನೀಯ , ಇವರುಗಳ ಆಸಕ್ತಿ ಹಾಗೂ ಇವರ ನಿಸ್ವಾರ್ಥ ಸೇವೆ ಇನ್ನೂ ಅನೇಕರಿಗೆ ಮಾದರಿಯಾಗಲಿ. 
                                                                                                                                                                                                           ವರದಿ : ವಿನೀತ ಸೀಕೇ ಶೆಟ್ಟಿ ಮಸ್ಕತ್