Header Ads Widget

ಭೂಲೋಕದ ಸ್ವರ್ಗ ಕಾಶ್ಮೀರದಲ್ಲಿ ರಕ್ತದೋಕುಳಿ: ಇಂದು ಉಗ್ರರ ದಾಳಿ ವೇಳೆ ಆಗಿದ್ದೇನು?

 

ಜಮ್ಮು ಕಾಶ್ಮೀರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಪ್ರವಾಸೋದ್ಯ ಮವನ್ನೇ ಅವಲಂಬಿಸಿರುವ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಚಳಿಗಾಲದಲ್ಲಿ ಮತ್ತು ಈ ಬೇಸಿಗೆಯ ಮೂನಾರ್ಲ್ಕು ತಿಂಗಳು ಹಿಮಪಾತವಾಗುತ್ತದೆ. ಹಿಮಚ್ಛಾದಿತ ಶಿಖರ, ಕಣಿವೆಗಳನ್ನು ನೋಡಲು ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. 


ಹಾಗೇ, ಇಂದು ಕೂಡ ಪ್ರವಾಸಿಗರು ಕಾಶ್ಮೀರದ ಪಹಲ್ಗಾಮ್ ಕಣಿವೆಯಲ್ಲಿ ಸಣ್ಣ ರೆಸಾರ್ಟ್​ನ ಅಂಗಳದಲ್ಲಿ ಕುಳಿತು ತಿಂಡಿ ತಿನ್ನುತ್ತಾ, ಚಹಾ ಹೀರುತ್ತಾ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದಾಗ ಗುಟ್ಟಾಗಿ ಅಡಗಿ ಕುಳಿತಿದ್ದ ಉಗ್​ರರ ಗುಂಪು ಯಮರಾಜರಂತೆ ಆ ಪ್ರವಾಸಿಗರ ಎದುರು ಬಂದೂಕು ಹಿಡಿದು ನಿಂತಿದ್ದರು. ಹಾಗಾದರೆ, ಇಂದು 26ಕ್ಕೂ ಹೆಚ್ಚು ಪ್ರವಾಸಿಗರನ್ನು ಬಲಿ ಪಡೆದ ಉಗ್ರರ ದಾಳಿಯ ವೇಳೆ ನಿಜಕ್ಕೂ ಆಗಿದ್ದೇನು? ಎಂಬ ಕುರಿತು ಪೂರ್ತಿ ಮಾಹಿತಿ ಇಲ್ಲಿದೆ.


ಜಮ್ಮು ಮತ್ತು ಕಾಶ್ಮೀರವನ್ನು ಪ್ರವಾಸಿಗರ ಪಾಲಿನ ಭೂಲೋಕದ ಸ್ವರ್ಗವೆಂದೇ ಕರೆಯುತ್ತಾರೆ. ಕೆಲವು ವರ್ಷಗಳ ಹಿಂದೆ ಕಾಶ್ಮೀರಕ್ಕೆ  ಪ್ರವಾಸಿಗರು ಹೋಗಲು ಭಯಪಡುವ ಪರಿಸ್ಥಿತಿಯಿತ್ತು. ಇಲ್ಲಿ ಉಗ್ರರ ಅಟ್ಟಹಾಸ ಮಿತಿ ಮೀರಿತ್ತು. ಕಾಶ್ಮೀರಿ ಪಂಡಿತರು, ಕಾಶ್ಮೀರಿ ಸ್ಥಳೀಯ ನಿವಾಸಿಗಳು ಹಾಗೂ ಪ್ರವಾಸಿಗರು ಭಯದಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಇತ್ತೀಚಿನ ಕೆಲವು ವರ್ಷಗಳಲ್ಲಿ    ಕಾಶ್ಮೀರ ಮತ್ತೆ ತನ್ನತ್ತ ಪ್ರವಾಸಿಗರನ್ನು ಸೆಳೆಯತೊಡಗಿತ್ತು.


ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಮಾಡಿದ ನಂತರ ಅಲ್ಲಿನ ಪ್ರವಾಸೋದ್ಯಮ ಮತ್ತಷ್ಟು ಗರಿಗೆದರಿತ್ತು. ಪ್ರವಾಸಿಗರು ಕೂಡ ಅಲ್ಲಿನ ಹಿಮಪಾತ, ಪ್ರಕೃತಿ ಸೌಂದರ್ಯವನ್ನು ಸವಿಯಲು ಭಾರತದಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಬರಲಾರಂಭಿಸಿದ್ದರು. ಇದು ಹಿಮಪಾತದ ಸೀಸನ್ ಆದ್ದರಿಂದ ಕಾಶ್ಮೀರದಲ್ಲಿ ಸಹಜವಾಗಿಯೇ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಆದರೆ, ಹಿಮದಿಂದ ಬಿಳಿ ಸೆರಗು ಹೊದ್ದು ಕುಳಿತ ಕಾಶ್ಮೀರದ ಕಣಿವೆಯಲ್ಲಿ ಇಂದು ರಕ್ತ ದೋಕುಳಿ ಯಾಗಿದೆ. ಪುಲ್ವಾಮಾ ದಾಳಿಯ ನಂತರ ಇತ್ತಿಚಿನ ವರ್ಷಗಳಲ್ಲಿ ಭಾರತದಲ್ಲಿ ನಡೆದ ಅತಿ ದೊಡ್ಡ ಉಗ್ರರ ದಾಳಿ ಇದಾಗಿದೆ.


ರಜೆಯ ಮಜಾ ಸವಿಯಲು ತಮ್ಮ ಕುಟುಂಬದೊಂದಿಗೆ ಬಂದಿದ್ದ, ಹನಿಮೂನ್​ಗೆಂದು ಬಂದಿದ್ದ ನವಜೋಡಿಗಳಿಗೆ ಈ ದಿನ ಕರಾಳ ದಿನವಾಗಿ ಮಾರ್ಪಟ್ಟಿದೆ. ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿರುವ ಪಹಲ್ಗಾಮ್​ ಕಣಿವೆಯಲ್ಲಿ ಇಂದು ಉಗ್ರರ ಗುಂಡಿನ ದಾಳಿ ನಡೆದಿದ್ದು, 20ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಏನಾಯಿತು? ಎಂದು ಆ ಪ್ರವಾಸಿಗರು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಉಗ್ರರು ಕೆಲವು ಪ್ರವಾಸಿಗರ ಹಣೆಗೆ ಗುಂಡು ಹಾರಿಸಿಬಿಟ್ಟಿದ್ದರು. 

ಈಗಾಗಲೇ ಟಿಆರ್​ಎಫ್ ಉಗ್ರ ಸಂಘಟನೆ ತಾವೇ ಈ ದಾಳಿ ನಡೆಸಿದ್ದಾಗಿ ಒಪ್ಪಿಕೊಂಡಿದೆ. ಲಷ್ಕರ್-ಎ-ತೊಯ್ಬಾದ ಅಂಗ ಎಂದು ಕರೆಯಲ್ಪಡುವ ಟಿಆರ್​​ಎಫ್ ಅಥವಾ ದಿ ರೆಸಿಸ್ಟೆನ್ಸ್ ಫೋರ್ಸ್  ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಬಳಿಕ ಈ ದಿ ರೆಸಿಸ್ಟೆನ್ಸ್ ಫ್ರಂಟ್ ಅಸ್ತಿತ್ವಕ್ಕೆ ಬಂದಿದೆ.



ಜಮ್ಮು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯ ಮೇಲಿನ ಹುಲ್ಲುಗಾವಲುಗಳಲ್ಲಿ . ಕಾಡುಗಳು, ಸ್ಫಟಿಕದಂತಹ ಸ್ಪಷ್ಟ ಸರೋವರಗಳು ಮತ್ತು ವಿಸ್ತಾರವಾದ ಹುಲ್ಲುಗಾವಲುಗಳಿಗೆ ಹೆಸರುವಾಸಿಯಾದ ಪಹಲ್ಗಾಮ್ ಜನಪ್ರಿಯ ಪ್ರವಾಸಿ ತಾಣವಾಗಿದೆ. ರಸ್ತೆ ಮಾರ್ಗಕ್ಕಿಂತ ಬಹಳ ಎತ್ತರದಲ್ಲಿರುವ ಈ ಪ್ರದೇಶಕ್ಕೆ ನಡೆದುಕೊಂಡೇ ಮೇಲೆ ಹತ್ತಬೇಕು ಅಥವಾ ಕುದುರೆಯ ಮೇಲೆ ಸವಾರಿ ಮಾಡಿಕೊಂಡು ಹೋಗಬೇಕು. ಇಲ್ಲಿಗೆ ಯಾವುದೇ ವಾಹನ ಹೋಗುವುದಿಲ್ಲ. 

ಇಂದು ಮಧ್ಯಾಹ್ನ 1.30ರಿಂದ 2 ಗಂಟೆಯ ಸುಮಾರಿಗೆ ಇಲ್ಲಿನ ಹೋಟೆಲ್ ಒಂದರಲ್ಲಿ ಹೊರಗೆ ಕುಳಿತು ಪ್ರಕೃತಿ ಸೌಂದರ್ಯ ಸವಿಯುತ್ತಾ ಪ್ರವಾಸಿಗರು ತಮ್ಮ ಕುಟುಂಬದವರ ಜೊತೆ, ಗೆಳೆಯರ ಜೊತೆ ಕುಳಿತಿದ್ದಾಗ ಇದ್ದಕ್ಕಿದ್ದಂತೆ ಉಗ್ರರು ಎಲ್ಲ ಕಡೆಯಿಂದಲೂ ಸುತ್ತುವರೆದು ಗುಂಡು ಹಾರಿಸಿದ್ದಾರೆ. ಅಲ್ಲಿದ್ದ ಪ್ರವಾಸಿಗರು ಓಡಿ ಪ್ರಾಣ ಉಳಿಸಿಕೊಳ್ಳಲೂ ಸಾಧ್ಯವಾಗದಂತಹ ಸ್ಥಳವದು. ಅಡಗಿ ಕೊಳ್ಳಲು ಯಾವುದೇ ಜಾಗವಿರಲಿಲ್ಲ. ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸಿದ ಉಗ್ರರು ಕೆಲವೇ ನಿಮಿಷಗಳಲ್ಲಿ ಅಲ್ಲಿಂದ ತೆರಳಿದ್ದಾರೆ.



ಮದುವೆಯಾಗಿ ಹನಿಮೂನಿಗೆಂದು ಬಂದ ನವಜೋಡಿಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅಪ್ಪ-ಅಮ್ಮ, ಹೆಂಡತಿ-ಮಕ್ಕಳೊಂದಿಗೆ ಕಾಶ್ಮೀರ ನೋಡಲು ಬಂದಿದ್ದವರು ಯಾಕಾದರೂ ಬಂದೆವೋ ಎಂದು ಗೋಳಾಡುತ್ತಾ ಸಹಾಯಕ್ಕಾಗಿ ಮೊರೆಯಿಡುತ್ತಿದ್ದರು. 

ಜೀವನದಲ್ಲಿ ಒಮ್ಮೆಯಾದರೂ ಕಾಶ್ಮೀರಕ್ಕೆ ಹೋಗಬೇಕೆಂಬ ಆಸೆಯಿಂದ ಬಂದಿದ್ದ ವೃದ್ಧರು ಗಾಯಗೊಂಡು ಅಳುತ್ತಾ, ನಿಲ್ಲಲೂ ಆಗದ ಪರಿಸ್ಥಿತಿಯಲ್ಲಿದ್ದರು. ಕೆಲವೇ ನಿಮಿಷಗಳ ಹಿಂದೆ ಅಕ್ಷರಶಃ ಸ್ವರ್ಗದಂತೆ ಕಾಣುತ್ತಿದ್ದ ಆ ಕಣಿವೆ ಅರ್ಧ ಗಂಟೆಯೊಳಗೆ ರಕ್ತ, ಛಿದ್ರವಾದ ಬಟ್ಟೆಗಳು, ಕಿರುಚಾಟ, ಗೋಳಾಟದಿಂದ ತುಂಬಿಹೋಗಿತ್ತು. ಅಲ್ಲಿದ್ದವರು ಕೆಲವರು ಅಲ್ಲಿಯ ದೃಶ್ಯವನ್ನು ಮೊಬೈಲಿನಲ್ಲಿ ಸೆರೆಹಿಡಿದಿದ್ದಾರೆ. 


ಆ ದೃಶ್ಯಗಳನ್ನು ನೋಡಿದರೆ ಎಂಥವರ ಕಣ್ಣಲ್ಲೂ ನೀರು ತುಂಬದಿರಲು ಸಾಧ್ಯವೇ ಇಲ್ಲ. ನನ್ನ ಗಂಡನನ್ನು ಹೇಗಾದರೂ ಬದುಕಿಸಿಕೊಡಿ ಎಂದು ನವವಿವಾಹಿತೆ ಗೋಳಾಡುತ್ತಾ, ರಕ್ತದ ಮಡುವಿನಲ್ಲಿ ಬಿದ್ದ ಗಂಡನ ಪಕ್ಕ ಕುಳಿತು ಅಸಹಾಯಕಳಾಗಿ ನೋಡುತ್ತಾ ಇರುವ ದೃಶ್ಯವನ್ನು ಯಾರೂ ಮರೆಯಲು ಸಾಧ್ಯವಿಲ್ಲ.

ಧರ್ಮ ಕೇಳಿ ಗುಂಡು ಹಾರಿಸಿದ್ದ ಉಗ್ರರು: ಪಹಲ್ಗಾಮ್ ಕಣಿವೆಯಲ್ಲಿದ್ದ ಪ್ರವಾಸಿಗರ ಪ್ರಕಾರ, ದಾಳಿ ಮಾಡಲು ಬಂದ ಉಗ್ರರು ‘ನಿಮ್ಮದು ಯಾವ ಧರ್ಮ?’ ಎಂದು ಕೇಳಿದ್ದರು. ಹಿಂದೂ ಮತ್ತು ಇತರೆ ಧರ್ಮದವರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು. ಮುಸ್ಲಿಮರ ಮೇಲೆ ಗುಂಡು ಹಾರಿಸಿಲ್ಲ ಎನ್ನಲಾಗಿದೆ. ಅಲ್ಲಿದ್ದವರ ಐಡಿ ಕಾರ್ಡ್ ಚೆಕ್ ಮಾಡಿ, ಕೆಲವರ ಪ್ಯಾಂಟನ್ನು ಜಾರಿಸಿದ ಉಗ್ರರು ಇನ್ನು ಕೆಲವರ ಬಳಿ ಕಲ್ಮಾ ಪಠಿಸಲು ಸೂಚಿಸಿದ್ದಾರೆ. ಮುಸ್ಲಿಮರಲ್ಲ ಎಂದು ಖಚಿತವಾಗುತ್ತಿದ್ದಂತೆ ಅವರ ಮೇಲೆ ಗುಂಡು ಹಾರಿಸಿದ್ದಾರೆ.


ಹೋಗಿ, ಮೋದಿಗೆ ಹೇಳು!ಕರ್ನಾಟಕದ ಶಿವಮೊಗ್ಗದ ಮಂಜುನಾಥ್ ಎಂಬ ಉದ್ಯಮಿ ತಮ್ಮ ಪತ್ನಿ ಪಲ್ಲವಿ ಮತ್ತು ಮಗನ ಜೊತೆ ಪ್ರವಾಸಕ್ಕೆ ಕಾಶ್ಮೀರಕ್ಕೆ ತೆರಳಿದ್ದರು. ಇಂದು ನಡೆದ ಗುಂಡಿನ ದಾಳಿಯಲ್ಲಿ ಮಂಜುನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಯನ್ನು ವಿವರಿಸಿರುವ ಅವರ ಪತ್ನಿ ಪಲ್ಲವಿ, ‘ನಾವು ಹೋಟೆಲಿನಲ್ಲಿ ಊಟ ಮಾಡುವಾಗ ಉಗ್ರರು ಸುತ್ತುವರೆದು ಗುಂಡು ಹಾರಿಸತೊಡಗಿದರು. ಆಗ ಮಧ್ಯಾಹ್ನ 1.30 ಇರಬಹುದು. 


ನನ್ನ ಗಂಡ ನನ್ನ ಕಣ್ಣೆದುರೇ ಪ್ರಾಣ ಬಿಟ್ಟರು. ಅವರ ಹಣೆಗೆ ಉಗ್ರರು ಗುಂಡು ಹಾರಿಸಿದ್ದರು. ಆಗ ನಾನು ಅವರ ಬಳಿ ನನ್ನನ್ನೂ ಕೊಂದು ಬಿಡು ಎಂದು ಹೇಳಿದೆ. ಅದಕ್ಕೆ ಅವರಲ್ಲೊಬ್ಬ ನಿನ್ನನ್ನು ಸಾಯಿಸುವುದಿಲ್ಲ, ಹೋಗಿ ಇದನ್ನೆಲ್ಲ ಮೋದಿಗೆ ಹೇಳು ಎಂದು ಹೇಳಿದ. ಆಮೇಲೆ ಅಲ್ಲಿನ ಸ್ಥಳೀಯರು 2-3 ಜನ ಬಂದು ನಮ್ಮನ್ನು ಅಲ್ಲಿಂದ ರಕ್ಷಿಸಿ ಕರೆದುಕೊಂಡು ಬಂದರು’ ಎಂದಿದ್ದಾರೆ.


ಸಹಾಯವಾಣಿ ಓಪನ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರಿಂದ ದಾಳಿ ನಡೆದಿದೆ. ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆ ಪಹಲ್ಗಾಮ್​ನಲ್ಲಿ ಅನಂತ್ ನಾಗ್ ಪೊಲೀಸರು ಹೆಲ್ಪ್​ಲೈನ್ ಶುರು ಮಾಡಿದ್ದಾರೆ.  ಮಾಹಿತಿಗಾಗಿ 9596777669, 01932225870, 9419051940 ಹೆಲ್ಪ್​ಲೈನ್​ಗೆ ಸಂಪರ್ಕಿಸಬಹುದು.


ಈಗಾಗಲೇ ಇಬ್ಬರು ವಿದೇಶಿಯರು ಸೇರಿದಂತೆ 26ಕ್ಕೂ ಹೆಚ್ಚು ಜನರು ಉಗ್ರರ ದಾಳಿಯಲ್ಲಿ ಸಾವನ್ನಪ್ಪಿ ದ್ದಾರೆ. ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೆಲವು ಕೇಂದ್ರ ಸಚಿವರು, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವು ನಾಯಕರು ಕಾಶ್ಮೀರಕ್ಕೆ ತೆರಳಿ ಅಲ್ಲಿನ ಭದ್ರತಾ ವ್ಯವಸ್ಥೆಯ ಬಗ್ಗೆ ಪರಿಶೀಲನೆಗೆ ತೆರಳಿದ್ದಾರೆ. ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಕಾಶ್ಮೀರದಲ್ಲಿನ ಉಗ್ರರ ದಾಳಿಯಿಂದಾಗಿ ಪ್ರವಾಸಿಗರು ಮಾತ್ರವಲ್ಲದೆ ಅಲ್ಲಿನ ಸ್ಥಳೀಯ ನಿವಾಸಿಗಳು ಕೂಡ ಭಯಪಡು ವಂತಾಗಿದೆ.