ಆತಿಥೇಯ ಮಂಗಳೂರು ವಿವಿ ಪ್ರಥಮ, ಮುಂಬೈ ವಿವಿ ದ್ವಿತೀಯ
ಉಡುಪಿ : ಗ್ರಾಮೀಣ ಕ್ರೀಡೆಯಾದ ಖೋ-ಖೋ ಒಲಂಪಿಕ್‌ನಲ್ಲಿ ಸೇರುವಂತಾಗಬೇಕು. ದುಷ್ಟ ಚಟಗಳಿಂದ ದೂರವಿರಲು ಕ್ರೀಡೆ ಸಹಕಾರಿಯಾಗಿದೆ ಎಂದು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಪರಮಪೂಜ್ಯ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹೇಳಿದರು.
ಉಡುಪಿಯ ಪೂರ್ಣಪ್ರಜ್ಞ ಕಾಲೇಜು (ಸ್ವಾಯತ್ತ) ಮತ್ತು ಸ್ನಾತಕೋತ್ತರ ಕೇಂದ್ರ, ಉಡುಪಿ ಇದರ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಹಯೋಗದೊಂದಿಗೆ ನಡೆದ 2024-25ನೇ ಸಾಲಿನ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಖೋ-ಖೋ ಪಂದ್ಯಾಕೂಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ, ಉಡುಪಿ ಜಿಲ್ಲೆಯ ಶಾಸಕರಾಗಿರುವ ಶ್ರೀ ಯಶ್‌ಪಾಲ್ ಸವರ್ಣ, ಮಾಜಿ ಶಾಸಕರಾದ ಶ್ರೀ ವಿನಯಕುಮಾರ್ ಸೊರಕೆ. ಶ್ರೀ ಕೆ. ಜಯಪ್ರಕಾಶ ಹೆಗ್ಡೆ, ಮುನಿಯಾಲು ಉದಯಕೃಷ್ಣ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಮುನಿಯಾಲು ಉದಯಕುಮಾರ್ ಶೆಟ್ಟಿ, ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಎ.ಪಿ. ಭಟ್, ಉಡುಪಿ ಶ್ರೀ ಆದಮಾರು ಮಠ ಶಿಕ್ಷಣ ಸಂಸ್ಥೆಗಳ ಗೌರವ ಖಜಾಂಜಿ ಸಿ.ಎ. ಜಿ. ವಿ. ಕೃಷ್ಣ,
ಉಡುಪಿ ಪೂರ್ಣಪ್ರಜ್ಞ ಸಮೂಹ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕರಾದ ಡಾ. ಪಿ. ಶ್ರೀರಮಣ ಐತಾಳ್, ಕಾಲೇಜು ಆಡಳಿತ ಮಂಡಳಿಯ ಗೌರವ ಖಜಾಂಜಿ ಸಿ.ಎ. ಪ್ರಶಾಂತ್ ಹೊಳ್ಳ, ಬೆಂಗಳೂರಿನ ವಿದಿಯ ಪೂರ್ಣಪ್ರಜ್ಞ ಸಂಸ್ಥೆ ಹಾಗೂ ದೆಹಲಿಯ ಪೂರ್ಣಪ್ರಜ್ಞ ಪಬ್ಲಿಕ್ ಶಾಲೆಯ ಗೌರವ ಕಾವ್ಯದರ್ಶಿಗಳಾದ ಶ್ರೀ ಗೋಪಾಲ ಶಬರಾಯ, ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಗೌರವ ಖಜಾಂಜಿ ಸಿ.ಎ. ಗಣೇಶ್ ಹೆಬ್ಬಾರ್, ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ. ಜೆರಾಲ್ಡ್ ಸಂತೋಷ್ ಡಿಸೋಜ, ಪ್ರಾಂಶುಪಾಲರಾದ ಡಾ. ರಾಮು ಎಲ್ ಉಪಸ್ಥಿತರಿದ್ದರು.
ಕಾಲೇಜು ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ. ಜಿ.ಎಸ್ ಚಂದ್ರಶೇಖರ್ ಸ್ವಾಗತಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಶ್ರೀ ಸುಕುಮಾರ್ ವಂದಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಅಪೂರ್ವ ಓಸ್ತಾ ನಿರೂಪಿಸಿದರು.
ನಾಲ್ಕು ದಿನಗಳ ಕಾಲ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಖೋ-ಖೋ ಪಂದ್ಯಾಕೂಟದಲ್ಲಿ ಆತಿಥೇಯ ಮಂಗಳೂರು ವಿಶ್ವವಿದ್ಯಾಲಯದ ತಂಡವು 11-10ರ ಅಂತರದಿಂದ ಮುಂಬೈ ವಿಶ್ವವಿದ್ಯಾಲಯದ ತಂಡವನ್ನು ಸೋಲಿಸಿ ಪ್ರಥಮಸ್ಥಾನ ಪಡೆದುಕೊಂಡಿತು. ಮುಂಬೈ ವಿಶ್ವವಿದ್ಯಾಲಯವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಸ್ವಾಮಿ ರಮಾನಂದ ತೀರ್ಥ ಮರಾಠವಾಡ ವಿಶ್ವವಿದ್ಯಾಲಯ, ಮಹಾರಾಷ್ಟ್ರ ಹಾಗೂ ಡಾ. ಬಾಬಾಸಾಹೇಬ್. ಅಂಬೇಡ್ಕರ್ ವಿಶ್ವ ವಿದ್ಯಾಲಯ ಮಹಾರಾಷ್ಟ್ರ ಈ ಎರಡು ವಿಶ್ವವಿದ್ಯಾಲಯಗಳ ತಂಡಗಳು ತೃತೀಯ ಸ್ಥಾನವನ್ನು ಸಮವಾಗಿ ಹಂಚಿ ಕೊಂಡವು.
ವೈಯಕ್ತಿಕ ವಿಭಾಗದಲ್ಲಿ ಬೆಸ್ಟ್ ಡಿಫೆಂಡರ್ ಆಗಿ ಮಂಗಳೂರು ವಿವಿಯ ನಿಖಿಲ್ ಬಿ, ಬೆಸ್ಟ್ ಚೇಸರ್ ಆಗಿ ಮಂಗಳೂರು ವಿವಿಯ ದೀಕ್ಷಿತ್, ಬೆಸ್ಟ್ ಆಲ್‌ರೌಂಡರ್ ಆಗಿ ಮುಂಬೈ ವಿವಿಯ ಆಕಾಶ್ ಕದಮ್ ಬಹುಮಾನ ಪಡೆದುಕೊಂಡರು.