ಅಕ್ರಮ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯೋರ್ವನನ್ನು ಉಡುಪಿ ಸೆನ್ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ತಾಲೂಕಿನ 80ಬಡಗಬೆಟ್ಟು ಗ್ರಾಮದ ಮಣಿಪಾಲ ತಾಂಗೋಡೆ 2ನೇ ಕ್ರಾಸ್ ಬಳಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಭಟ್ಕಳ ಗುಲ್ಜಾರ್ ಸ್ಟ್ರೀಟ್ ನಿವಾಸಿ ಆರೀಬ್ ಅಹಮ್ಮದ್(31) ಎಂದು ಗುರುತಿಸಲಾಗಿದೆ.
ಆರೀಬ್ ಅಹಮ್ಮದ್ ಎ.13ರಂದು ಆಂಧ್ರಪ್ರದೇಶದ ವಿಜಯವಾಡದಿಂದ ತಂದಿದ್ದ ಗಾಂಜಾವನ್ನು ಮಾರಾಟ ಮಾಡಲು ಮಣಿಪಾಲದ ತಾಂಗೋಡೆ 2ನೇ ಕ್ರಾಸ್ ಗೆ ಬಂದಿದ್ದನು. ಇದನ್ನು ಖರೀದಿಸಲು ಅಪರಿಚಿತರು ಬರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯಿಂದ 5.75 ಲಕ್ಷ ಮೌಲ್ಯದ 7 ಕಿಲೋ, 304 ಗ್ರಾಂ ತೂಕದ ಗಾಂಜಾ, ಎರಡು ಮೊಬೈಲ್ ಪೋನ್-2, 1520 ರೂ. ನಗದು ಸಹಿತ ಒಟ್ಟು 5,96,520 ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ವಿಚಾರಣೆ ವೇಳೆ ಆರೋಪಿ ವಿಜಯವಾಡದ ಸೈಕಲ್ ರಿಕ್ಷಾವಾಲನಿಂದ ಗಾಂಜಾ ಖರೀದಿಸಿರುವ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾನೆ. ಈ ಕುರಿತು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.