Header Ads Widget

ಜಯನ್ ಮಲ್ಪೆ​ ಮಡಿಲಿಗೆ ಡಾ.ಬಾಬು ಜಗಜೀವನ ರಾಂ ​ಪ್ರಶಸ್ತಿ

 


ಉಡುಪಿ: ದಲಿತರಲ್ಲಿ ಸಂಘಟನೆಯ ಪ್ರಜ್ಞಾವಂತಿಯನ್ನು ಬೆಳೆಸಿದ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆಗೆ ಕರ್ನಾಟಕ ಸರಕಾರ 2025ನೇ ಸಾಲಿನ ಡಾ.ಬಾಬು ಜಗಜೀವನ ರಾಂ ಪ್ರಶಸ್ತಿಗೆ ಆಯ್ಕೆ ಮಾಡಿದೆ.


ಕಳೆದ ನಾಲ್ಕು ದಶಕಗಳಿಗಿಂತ ಹೆಚ್ಚು ಕಾಲ ಕರಾವಳಿಯ ಹಾಗೂ ಬಯಲು ಸೀಮೆಯ ಉದ್ದಕ್ಕೂ ದಲಿತರನ್ನು ಸಂಘಟಿಸಿ ಜಾಗೃತಿ ಮೂಡಿಸಿ ನೂರಾರು ಹೋರಾಟ,ಸಮಾವೇಶಗಳನ್ನು ಸಡಿಸಿದ್ದ ಜಯ ನ್ ಮಲ್ಪೆಯವರು ನಾಡಿನ ಅನೇಕ ದಿನಪತ್ರಿಕೆ,ವಾರಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದಿದ್ದಾರೆ.


 2021ರಲ್ಲಿ ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟ ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ,2020ರ ರಾಷ್ಟೀಯ ಪತ್ರಿಕಾ ದಿನಾಚರಣೆಯ ಅಂಗವಾಗಿ ಕಾರ್ಕಳ ಪತ್ರಕರ್ತರ ಸಂಘ ಜನಸಿರಿ ಪ್ರಶಸ್ತಿ, 2018ರಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಜಿಲ್ಲಾಮಟ್ಟದ ಸದಸ್ಯರನ್ನಾಗಿ ರಾಜ್ಯ ಸರಕಾರ ಆಯ್ಕೆ ಮಾಡಿತ್ತು.


ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ನವದೆಹಲಿ ಇದರ ಉಡುಪಿ ಜಿಲ್ಲಾಧ್ಯಕ್ಷರಾಗಿ ಇವರು ದಲಿತ್ ವರ್ಲ್ಡ್ ವೆಬ್ ಸೈಟ್‌ನ್ನು ಲೋಕಾರ್ಪಣೆಗೊಳಿಸಿರುತ್ತಾರೆ.ಕಳೆದ ಒಂದುವರೆ ವರ್ಷದಿಂದ ದಿವಾಣ ಪಂಚ್ ಯುಟ್ಯೂಬ್ ಚಾನಲ್‌ನಲ್ಲಿ ಜನದನಿ ಎಪಿಸೋಡ್ ಬಾರೀ ಜನಪ್ರೀಯತೆ ಹೊಂದಿತ್ತು.


ಹೋರಾಟದ ಉದ್ದಕ್ಕೂ ಕೋಮುಸೌಹಾರ್ದ ವೇದಿಕೆ,ಜಾತಿಮುಕ್ತ ಸಂಬoಧ ವೇದಿಕೆ,ವಿಚಾರವಾದಿ ವೇದಿಕೆ,ಮಾನವ ಹಕ್ಕುಗಳ ವೇದಿಕೆ, ಸಮಾನ ಮನಸ್ಕರ ಸಂಘಟನೆ ಮುಂತಾದ ಹಲವು ಸಂಘಟನೆ ಯಲ್ಲಿ ಪದಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ.


ದಲಿತ ಕುಟುಂಬಕ್ಕೆ ಸಿಗಬೇಕಾದ ವಿಮಾ ಪರಿಹಾರ ಹಣವನ್ನು ನಕಲಿ ದಾಖಲೆ ಹಾಗೂ ನಕಲಿ ವ್ಯಕ್ತಿಯನ್ನು ಸೃಷ್ಟಿಸಿ,ದಲಿತ ಕುಟುಂಬಕ್ಕೆ ಮತ್ತು ನ್ಯಾಯಾಲಯಕ್ಕೆ ವಂಚಿಸಿದ ವಕೀಲನೊಬ್ಬನ ವಿರುದ್ಧ ಮೊಕದ್ದಮೆ ದಾಖಲಿಸಿ,ಆತನಿಗೆ ಜೀವಾವಧಿ ಶಿಕ್ಷೆ ವಿಧಿಸುವಲ್ಲಿ ಯಶಸ್ವಿ ಹೋರಾಟ ನಡೆಸಿದ್ದ ಜಯನ್ ಮಲ್ಪೆ ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿ ಮಹಿಷ ದಶರ ಏರ್ಪಡಿಸಿದ್ದರು.


ಹೋರಾಟದ ಜೀವನದ ಉದ್ದಕ್ಕೂ ಸಾಮಾಜಿಕ ನ್ಯಾಯಕ್ಕಾಗಿ ನೂರಾರು ವಿಚಾರಸಂಕಿರ್ಣ,ಧರಣಿ, ಪ್ರತಿಭಟನೆ,ಮೆರವಣಿಗೆಯನ್ನು ಜಯನ್ ಮಲ್ಪೆ ಆಯೋಜಿಸಿದ್ದರು. ಡಾ.ಬಾಬಾ ಜಗಜೀವ ರಾಂ ಜನ್ಮ ದಿನಾಚರಣೆಯಂದು ಬೆಂಗಳೂರಿನ ವಿಧಾನಸೌಧದ ಬಳಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಪ್ರಶಸ್ತಿ ಪಡೆಯಲ್ಲಿದ್ದಾರೆ.