ಉಡುಪಿ: ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ 2024-25ನೇ ಸಾಲಿನ “ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಹೊನಲು ಬೆಳಕಿನ ಖೋ-ಖೋ ಪಂದ್ಯಾ ಕೂಟ”ವನ್ನು ಎ.9ರಿಂದ 12 ರವರೆಗೆ ನಗರದ ಪಿಪಿಸಿ ಕಾಲೇಜಿನ ವಿಬುಧೇಶತೀರ್ಥ ಸ್ವಾಮೀಜಿ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಜಿ.ಎಸ್. ಚಂದ್ರಶೇಖರ್ ತಿಳಿಸಿದರು.
ಈ ಕುರಿತು ಕಾಲೇಜಿನ ಪ್ರಜ್ಞ ಹಾಲ್ ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಈ ಪಂದ್ಯಾಕೂಟದಲ್ಲಿ ಒಟ್ಟು ಆಯ್ದ 16 ತಂಡಗಳು ಭಾಗವಹಿಸುತ್ತಿದ್ದು, ದಕ್ಷಿಣ ವಲಯದಿಂದ ಕರ್ನಾಟಕದ ಮಂಗಳೂರು ವಿವಿ, ದಾವಣಗೆರೆ ವಿವಿ, ತಮಿಳುನಾಡಿನ ಭಾರತಿಯಾರ್ ವಿವಿ ಕೊಯಮುತ್ತೂರು, ಕೇರಳ ವಿವಿ ತಿರುವ ನಂತಪುರ ತಂಡ ಪಾಲ್ಗೊಳ್ಳಲಿವೆ. ಪಶ್ಚಿಮ ವಲಯದಿಂದ ನಾಲ್ಕು ತಂಡ, ಉತ್ತರ ವಲಯದಿಂದ ನಾಲ್ಕು ತಂಡ, ಪೂರ್ವ ವಲಯ ದಿಂದ ನಾಲ್ಕು ತಂಡಗಳು ಭಾಗವಹಿಸಲಿವೆ. ಪಂದ್ಯಾಟ ಲೀಗ್ / ನಾಕೌಟ್ ಆಧಾರದಲ್ಲಿ ನಡೆಯಲಿದ್ದು, ಭಾರತದ ವಿವಿಧ ಭಾಗಗಳಿಂದ 20 ಅಧಿಕಾರಿಗಳು ಆಗಮಿಸಲಿದ್ದಾರೆ ಎಂದರು.
ಇದೇ ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದ ಖೋ-ಖೋ ಪಂದ್ಯಾಕೂಟವು ‘ಜರ್ಮನ್ ಹ್ಯಾಂಗರ್ ತಂತ್ರಜ್ಞಾನದಲ್ಲಿ ತಾತ್ಕಾಲಿಕವಾಗಿ ನಿರ್ಮಿಸ ಲಾಗಿರುವ ಸಿಂಥೆಟಿಕ್ ಮೈದಾನದಲ್ಲಿ ನಡೆಯಲಿದೆ. ದಿನಕ್ಕೆ 12 ಪಂದ್ಯಾಟಗಳು ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ನಡೆಯಲಿದೆ. 3 ಸಾವಿರ ಪ್ರೇಕ್ಷಕರು ಕುಳಿತುಕೊಳ್ಳುವ ಗ್ಯಾಲರಿಯನ್ನು ನಿರ್ಮಿಸಲಾಗಿದೆ. ಎ.9 ರಂದು ಬೆಳಿಗ್ಗೆ 10.30ಕ್ಕೆ ಅದಮಾರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಅದಮಾರು ಮಠಾ ಧೀಶರಾದ ಈಶಪ್ರಿಯತೀರ್ಥ ಶ್ರೀಪಾದರು ಪಂದ್ಯಾ ಕೂಟಕ್ಕೆ ಚಾಲನೆ ನೀಡಲಿದ್ದಾರೆ.
ಮಂಗಳೂರು ವಿ.ವಿ. ಉಪಕುಲಪತಿ ಪ್ರೊ. ಪಿ.ಎಲ್.ಧರ್ಮ ಸಮಾರಂಭದ ಅಧ್ಯಕ್ಷತೆ ವಹಿಸ ಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ ಶೆಟ್ಟಿ, ಅದಮಾರು ಮಠ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಎ.ಪಿ.ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮೊದಲಾದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎ.12 ರಂದು ಬೆಳಗ್ಗೆ 11.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಶ್ರೀ ಈಶಪ್ರಿಯತೀರ್ಥರು ಆಶೀರ್ವಚನ ನೀಡಲಿ ದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಜೆರಾಲ್ಡ್ ಸಂತೋಷ್ ಡಿಸೋಜಾ, ಪಿಪಿಸಿ ಕಾಲೇಜಿನ ಪ್ರಾಂಶುಪಾಲ ಡಾ.ರಾಮು ಎಲ್, ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್ ಉಪಸ್ಥಿತರಿದ್ದರು.