ಅಗತ್ಯ ವಸ್ತುಗಳ ದರ ಏರಿಕೆಯಿಂದ ಈಗಾಗಲೇ ಕಂಗಾಲಾಗಿರುವ ಜನಸಾಮಾನ್ಯರ ಜೇಬಿಗೆ ಇಂದಿನಿಂದ ಮತ್ತಷ್ಟು ಕತ್ತರಿ ಬೀಳಲಿದೆ. ರಾಜ್ಯದಲ್ಲಿ ನಂದಿನಿ ಹಾಲು, ಮೊಸರು, ವಿದ್ಯುತ್, ಡೀಸೆಲ್, ಟೋಲ್ ದರ ಹೆಚ್ಚಳವಾಗಲಿದ್ದು, ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಹೊರೆಯಾಗಲಿದೆ.
ರಾಜ್ಯ ಸರಕಾರವು ಏಪ್ರಿಲ್ 1ರಿಂದ ಅನ್ವಯವಾಗುವಂತೆ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಲೀಟರ್‌ಗೆ 4 ರೂ. ಹೆಚ್ಚಳ ಮಾಡಿದೆ. ಇದಕ್ಕೆ ಅನುಗುಣವಾಗಿ ನಂದಿನಿಯ ಎಲ್ಲಾ ಬಗೆಯ ಹಾಲಿನ ದರವು ಲೀಟರ್‌ಗೆ 4 ರೂ. ಏರಿಕೆಯಾಗಲಿದೆ. ಜತೆಗೆ, ತುಪ್ಪ, ಬೆಣ್ಣೆ, ಮಜ್ಜಿಗೆ, ಪನ್ನೀರ್ ಸೇರಿದಂತೆ ಹಾಲಿನ ಉತ್ಪನ್ನಗಳ ಬೆಲೆಯೂ ಹೆಚ್ಚಳವಾಗಲಿದೆ.
ಹಾಲಿನ ಬೆಲೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಹೊಟೇಲುಗಳಲ್ಲಿ ಕಾಫಿ, ಟೀ ದರದಲ್ಲಿ ಶೇ.10 ರಿಂದ 15ರಷ್ಟು ಹೆಚ್ಚಳವಾಗಲಿದೆ ಎಂದು ಹೋಟೆಲ್ ಮಾಲೀಕರ ಸಂಘ ತಿಳಿಸಿದೆ. ಇತ್ತೀಚೆಗೆ ಕಾಫಿ ಪುಡಿ ದರ ಏರಿಕೆಯಾದಾಗ ಬಹುತೇಕ ಹೋಟೆಲ್‌ಗಳು ಕಾಫಿ ಬೆಲೆ ಹೆಚ್ಚಿಸಿದ್ದವು. ಈಗ ಹಾಲಿನ ದರ ಏರಿಕೆಯಾಗಿರುವುದರಿಂದ ಹೋಟೆಲ್‌ಗಳಿಗೆ ಕಾಫಿ - ಟೀ ದರ ಹೆಚ್ಚಿಸಲಿದ್ದಾರೆ. ಇದರ ಹೊರೆ ನೇರವಾಗಿ ಗ್ರಾಹಕರ ಮೇಲೆ ಬೀಳಲಿದೆ.
ಮತ್ತೊಂದೆಡೆ ನಂದಿನಿಯ ಇತರೆ ಉತ್ಪನ್ನಗಳ ಬೆಲೆಯೂ ಹೆಚ್ಚಳವಾಗಬಹುದು. ಹೋಟೆಲ್‌ಗಳಲ್ಲಿ ಹಲವು ಖಾದ್ಯಗಳಿಗೆ ತುಪ್ಪ, ಬೆಣ್ಣೆ, ಮೊಸರು ಬಳಸಲಾಗುತ್ತದೆ. ಅನೇಕ ಮಾದರಿಯ ಸಿಹಿ ತಿನಿಸುಗಳನ್ನು ಹಾಲು ಮತ್ತು ಹಾಲಿನ ಉತ್ಪನ್ನಗಳಿಂದಲೇ ತಯಾರಿಸಲಾಗುತ್ತದೆ. ಹೀಗಾಗಿ, ಸಿಹಿ ತಿನಿಸುಗಳು, ಖಾದ್ಯಗಳ ದರದಲ್ಲೂ ಹೆಚ್ಚಳವಾಗುವ ಸಾಧ್ಯತೆಯಿದೆ.
ವಾರ್ಷಿಕ ಹಣದುಬ್ಬರ ಆಧರಿಸಿ ಟೋಲ್ ದರವನ್ನೂ ಹೆಚ್ಚಿಸಲಾಗಿದ್ದು, ರಾಜ್ಯದ 66 ಟೋಲ್ ಪ್ಲಾಜಾಗಳಲ್ಲಿ ಮಂಗಳವಾರದಿಂದ ಪರಿಷ್ಕೃತ ದರ ಜಾರಿಯಾಗಲಿದೆ. ಟೋಲ್ ಗುತ್ತಿಗೆ ಅವಧಿ ಆಧರಿಸಿ ದರಗಳು ಬದಲಾಗಲಿದ್ದು, ಕನಿಷ್ಠ ಶೇಕಡಾ 3 ರಷ್ಟು ಮತ್ತು ಗರಿಷ್ಠ ಶೇ.5 ರಷ್ಟು ಹೆಚ್ಚಳವಾಗಲಿದೆ. ಈ ಹೆಚ್ಚುವರಿ ಶುಲ್ಕವನ್ನು ಗ್ರಾಹಕರಿಗೆ ವರ್ಗಾಯಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳ ನಿರ್ಣಯ ಮತ್ತು ಸಂಗ್ರಹ) ನಿಯಮಗಳು -2008ರ ಪ್ರಕಾರ ಸಗಟು ಬೆಲೆ ಸೂಚ್ಯಂಕದ ಆಧಾರದಲ್ಲಿ ಟೋಲ್ ಶುಲ್ಕ ಹೆಚ್ಚಿಸಲಾಗಿದೆ. ಈ ಹೆಚ್ಚುವರಿ ಟೋಲ್ ಶುಲ್ಕವನ್ನು ವಾಹನ ಮಾಲೀಕರಿಗೆ ವರ್ಗಾಯಿಸಲಾಗುತ್ತದೆ. ವಾಹನ ಮಾಲೀಕರು ಈ ಆರ್ಥಿಕ ಹೊರೆಯನ್ನು ಗ್ರಾಹಕರ ಮೇಲೆ ಹಾಕುತ್ತಾರೆ. ಸರಳವಾಗಿ ಹೇಳುವುದಾದರೆ ಟೋಲ್ ದರ ಏರಿಕೆಯ ಬಿಸಿ ನೇರವಾಗಿ ಪ್ರಯಾಣಿಕರಿಗೆ ತಟ್ಟಲಿದೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಮತ್ತು ವಿದ್ಯುತ್ ವಿತರಣಾ ಕಂಪನಿಗಳ (ಎಸ್ಕಾಂ) ನೌಕರರ ಪಿಂಚಣಿ, ಗ್ರಾಚ್ಯುಟಿಗೆ ಹಣ ಹೊಂದಿಸಲು ಏ.1ರಿಂದ ಜಾರಿಗೆ ಬರುವಂತೆ ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಿಸಲಾಗಿದೆ. ಹೆಚ್ಚುವರಿ ವಿದ್ಯುತ್ ಶುಲ್ಕವನ್ನು ಸರಕಾರದ ಬದಲು ಗ್ರಾಹಕರಿಂದಲೇ ಸರ್‌ಚಾರ್ಜ್ ರೂಪದಲ್ಲಿ ವಸೂಲಿ ಮಾಡುವಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಎಸ್ಕಾಂಗಳಿಗೆ ಸೂಚಿಸಿದೆ. ಇದರಿಂದ ಎಲ್ಲ ಬೆಲೆ ಏರಿಕೆಯ ನಡುವೆ ವಿದ್ಯುತ್ ದರವೂ ಶಾಕ್ ನೀಡಲಿದೆ.
ಡೀಸೆಲ್ ಬೆಲೆ 2 ರೂ. ಏರಿಸಿ ಸರ್ಕಾರ ರಾಜ್ಯದ ಜನರಿಗೆ ಮತ್ತೊಂದು ಬರೆ ಎಳೆದಿದೆ. ಏಪ್ರಿಲ್ 1ರಿಂದ ಅನ್ವಯವಾಗುವಂತೆ ಈಗಾಗಲೇ ಹಾಲು, ವಿದ್ಯುತ್, ಟೋಲ್ ದರ ಏರಿಕೆ ಮಾಡಿರುವ ಸರ್ಕಾರ, ಇದೀಗ ಆ ಪಟ್ಟಿಗೆ ಡೀಸೆಲ್ ಅನ್ನು ಸೇರಿಸಿದೆ. ಡೀಸೆಲ್ ಬೆಲೆ ಮೇಲಿನ ಮಾರಾಟ ತೆರಿಗೆಯನ್ನು ಶೇ 18.44 ರಿಂದ ಶೇ 21.17 ಗೆ ಏರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆ ಮೂಲಕ 2 ರೂ. ಏರಿಕೆ ಮಾಡಿದೆ.
ಅದರಂತೆ, ರಾಜ್ಯದಲ್ಲಿ ಡೀಸೆಲ್ ದರ 91.02 ರೂ. ಆಗಲಿದೆ. ಈ ಮುಂಚೆ ಬೆಂಗಳೂರಲ್ಲಿ ಡೀಸೆಲ್ ದರ 89.02 ರೂ. ಇದೆ. ಪರಿಷ್ಕೃತ ದರ ಇಂದಿನಿಂದಲೇ ಅನ್ವಯವಾಗಲಿದೆ. ಡೀಸೆಲ್ ಬೆಲೆ ಏರಿಕೆಯಿಂದ ರಾಜ್ಯದ ಜನರ ಮೇಲೆ ಮತ್ತೆ ಹೊರೆ ಬೀಳಲಿದೆ. ಸರಕುಗಳು, ಹಣ್ಣು, ತರಕಾರಿಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
2021ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ 25.92 ಕ್ಕೆ ಹಾಗೂ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ 14.34ಕ್ಕೆ ಇಳಿಕೆ ಮಾಡಿತ್ತು. ಬಳಿಕ 2024ರ ಜೂನ್ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು 29.84%ಗೆ ಏರಿಕೆ ಮಾಡಿದ್ದರೆ, ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು 18.44%ಗೆ ಏರಿಕೆ ಮಾಡಿತ್ತು. ಇದೀಗ ರಾಜ್ಯ ಸರ್ಕಾರ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು 21.17%ಗೆ ಏರಿಕೆ ಮಾಡಿದೆ.