Header Ads Widget

ವಿಶ್ವ ಆರೋಗ್ಯ ದಿನ 2025~ ~ಡಾ ರಾಜಲಕ್ಷ್ಮಿ,

                                         

 "ಆರೋಗ್ಯಂ ಪರಮಂ ಭಾಗ್ಯಂ ಸ್ವಾಸ್ಥ್ಯಂ ಸರ್ವಾರ್ಥ ಸಾಧನಂ" ಸಾರ್ವಕಾಲಿಕ ಸತ್ಯವಾದ ಈ ಸಂಸ್ಕೃತ ಸುಭಾಷಿತ ಆರೋಗ್ಯದ ಮಹತ್ವವನ್ನು ಸಾರಿ ಹೇಳುತ್ತದೆ. ಆರೋಗ್ಯ ಎಂಬುದು ಮನುಜನ ಅತೀ ಬೆಲೆ ಬಾಳುವ ಸಂಪತ್ತು. ಅನಾರೋಗ್ಯ ಪೀಡಿತರಾದಾಗ ಆರೋಗ್ಯದ ಮೌಲ್ಯ ಅರಿವಾಗುತ್ತದೆ. ಆರೋಗ್ಯದ ಕುರಿತು ಅರಿವು ಹಾಗೂ ಕಾಳಜಿ ಮೂಡಿಸುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಏಪ್ರಿಲ್ ತಿಂಗಳ 7ನೇ ದಿನವನ್ನು ವಿಶ್ವ ಆರೋಗ್ಯ ದಿನವಾಗಿ ಘೋಷಿಸಿದೆ. 


1950 ರಿಂದ ಪ್ರತಿ ವರ್ಷ ಜಗತ್ತಿನಾದ್ಯಂತ ಈ ದಿನವನ್ನು ನಿರ್ಧಿಷ್ಟ ಧ್ಯೇಯೋದ್ದೇಶ ಗಳೊಂದಿಗೆ ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತದೆ. 2025ರ ಧ್ಯೇಯ ವಾಕ್ಯ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದ್ದು, ತಡೆಗಟ್ಟಲು ಸಾಧ್ಯವಿರುವ ಕಾರಣ ಗಳಿಂದಾಗುವ ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ತಗ್ಗಿಸಲು ಕಾರ್ಯತತ್ಪರರಾಗುವಂತೆ (WHO) ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿದೆ. *Healthy beginnings Hopeful future*, *ಆಶಾದಾಯಕ ಭವಿಷ್ಯಕ್ಕಾಗಿ ಆರೋಗ್ಯಯುತ ಆರಂಭ* ಎನ್ನುವುದು ಈ ಬಾರಿಯ ಘೋಷವಾಕ್ಯವಾಗಿದೆ. ತಾಯಿ ಮತ್ತು ನವಜಾತ ಶಿಶುವಿನ ಆರೋಗ್ಯಯುತ ಬೆಳವಣಿಗೆಗೆ ಒತ್ತು ನೀಡಿ ಸುಧ್ರೃಡ ಸಮಾಜದ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕುವುದು ಈ ಬಾರಿಯ ವಿಶ್ವ ಆರೋಗ್ಯ ದಿನಾಚರಣೆಯ ಉದ್ದೇಶವಾಗಿದೆ.


 ತಾಯಿ ಮತ್ತು ಮಕ್ಕಳ ಆರೋಗ್ಯ ಯಾವುದೇ ಸಮಾಜದ ಅಭಿವೃದ್ಧಿ ಮತ್ತು ಸ್ಥಿತಿಯನ್ನು ಬಿಂಬಿಸುವ ಕನ್ನಡಿಯಾಗಿದೆ. ಗರ್ಭಿಣಿ, ಬಾಣಂತಿ ಹಾಗೂ ನವಜಾತ ಶಿಶುವಿನ ಸ್ವಾಸ್ಥ್ಯವನ್ನು ಕಾಪಾಡಲು ಸರ್ಕಾರ, ಸರ್ಕಾರೇತರ ಆರೋಗ್ಯ ಸಂಸ್ಥೆಗಳು ಜೊತೆಗೆ ವೈದ್ಯರು ಸದಾ ಕಂಕಣ ಬದ್ಧರಾಗಿದ್ದಾರೆ. ಪ್ರತಿ ವರ್ಷ ಜಗತ್ತಿನಾದ್ಯಂತ ಸುಮಾರು ಮೂರು ಲಕ್ಷ ಮಹಿಳೆಯರು ಗರ್ಭಾವಸ್ಥೆ ಮತ್ತು ಹೆರಿಗೆಯ ಬಳಿಕ ಮರಣ ಹೊಂದುತ್ತಿದ್ದರೆ, ಸರಿ ಸುಮಾರು ಎರಡು ಲಕ್ಷದಷ್ಟು ನವಜಾತ ಶಿಶುಗಳು ತಡೆಗಟ್ಟಲು ಸಾಧ್ಯವಿರುವ ಕಾರಣಗಳಿಂದಾಗಿ ಜನಿಸಿದ ತಿಂಗಳೊಳಗೆ ಸಾವನ್ನಪ್ಪುತ್ತಿದ್ದಾರೆ. 


ಭಾರತದಲ್ಲಿ 2018-2020 ರಲ್ಲಿ ತಾಯಿ ಮರಣದ ಪ್ರಮಾಣ ಒಂದು ಲಕ್ಷ ಸಜೀವ ಜನನಕ್ಕೆ 97 ಹಾಗೂ ಶಿಶು ಮರಣ ಪ್ರಮಾಣ ಒಂದು ಸಾವಿರ ಸಜೀವ ಜನನಕ್ಕೆ 25.799 ಆಗಿತ್ತು. 2030ರ ಒಳಗಾಗಿ ತಾಯಿ ಮರಣದ ಪ್ರಮಾಣವನ್ನು 70/1 ಲಕ್ಷ ಸಜೀವ ಜನನ ಮತ್ತು ಶಿಶು ಮರಣ ಪ್ರಮಾಣವನ್ನು 12/1 ಸಾವಿರ ಸಜೀವ ಜನನಕ್ಕೆ ಇಳಿಸುವ ಗುರಿ ವಿಶ್ವ ಆರೋಗ್ಯ ಸಂಸ್ಥೆಯದ್ದಾಗಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ವರುಷದ ವಿಶ್ವ ಆರೋಗ್ಯ ದಿನದ ಧ್ಯೇಯ ವಾಕ್ಯ ಹೆಚ್ಚಿನ ಮಹತ್ವವನ್ನು ಪಡೆದಿದೆ.


   ತಾಯಿ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಯಾವ ಕ್ರಮ ಕೈಗೊಳ್ಳಬಹುದು?

1. ದೇಶದ ಪ್ರತಿಯೊಂದು ಹಳ್ಳಿ ಮತ್ತು ಗ್ರಾಮಗಳಲ್ಲೂ ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕ ಆಹಾರ, ಕ್ಲಪ್ತ ಸಮಯದಲ್ಲಿ ಸೂಕ್ತ ಆರೈಕೆ ಹಾಗೂ ಹೆರಿಗೆ ಸೌಲಭ್ಯಗಳು ದೊರಕುವಂತಿರಬೇಕು. ಮಕ್ಕಳ ಪೌಷ್ಟಿಕ ಆಹಾರ ಮತ್ತು ಲಸಿಕೆ ಸಕಲರಿಗೂ ಕೈಗೆಟುಕುವ ದರದಲ್ಲಿ ಲಭ್ಯ ವಿರುವಂತಾಗಬೇಕು.

2. ದೇಶದ ಕಾನೂನು ಮತ್ತು ಆರೋಗ್ಯ ಯೋಜನೆಗಳು ಮಹಿಳೆ ಹಾಗೂ ಆಕೆಯ ಶಿಶುವಿನ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿರಬೇಕು.

3. ಅಗತ್ಯವಾದ ಆರೋಗ್ಯ ತಪಾಸಣೆ ವಿಧಾನಗಳು ಮತ್ತು ಸಲಕರಣೆಗಳು ಹಾಗೂ ಔಷಧಿ ತಯಾರಿ, ಪೂರೈಕೆಗೆ ಆರ್ಥಿಕ ಹೂಡಿಕೆ ಅಧಿಕಗೊಳ್ಳಬೇಕು.

4. ಜನಸಾಮಾನ್ಯರಲ್ಲಿ ಆರೋಗ್ಯ ಅರಿವು ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸರ್ವರೂ ಕೈಜೋಡಿಸಬೇಕು.

     

ಅತೀ ಕಿರಿಯ ಅಥವಾ ಅತೀ ಹಿರಿಯ ವಯಸ್ಸಿನಲ್ಲಿ ಗರ್ಭಧಾರಣೆ ಯಿಂದಾಗಿ ರಕ್ತಹೀನತೆ , ಮಧುಮೇಹ, ಅತಿ ರಕ್ತದೊತ್ತಡ, ಗರ್ಭಸ್ಥ ಶಿಶುವಿನ ಅಸಮರ್ಪಕ ಬೆಳವಣಿಗೆಗೆ ಇವೇ ಮುಂತಾದ ತೊಡಕುಗಳು ಎದುರಾಗುತ್ತವೆ. ಸೂಕ್ತ ವಯಸ್ಸಿನಲ್ಲಿ ವಿವಾಹ ಮತ್ತು ಗರ್ಭಧಾರಣೆಯ ಕುರಿತು ಸಮಾಜದಲ್ಲಿ ಅರಿವು ಮೂಡಬೇಕು. ಗರ್ಭಿಣಿಯಾಗುವ ಮುನ್ನ ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ತಮ್ಮದಾಗಿಸಿಕೊಳ್ಳಬೇಕು. ಅಪೌಷ್ಟಿಕತೆ, ರಕ್ತದೊತ್ತಡ, ರಕ್ತಹೀನತೆ, ಮಧುಮೇಹ, ಅತೀ ಕಡಿಮೆ ತೂಕ/ಸ್ಥೂಲಕಾಯಗಳಿದ್ದಲ್ಲಿ ತಜ್ಞ ವೈದ್ಯರ ಸಲಹೆ ಪಡೆದು ಆರೋಗ್ಯವನ್ನು ಸುಧಾರಿಸಿಕೊಳ್ಳಬೇಕು. 

  

ಗರ್ಭಾವಸ್ಥೆಯಲ್ಲಿ ನುರಿತ ಹೆರಿಗೆ ತಜ್ಞರಿಂದ ತಪಾಸಣೆಗೊಳಗಾಗಬೇಕು. ವೈದ್ಯರ ಸಲಹೆ ಮೇರೆಗೆ ರಕ್ತಪರೀಕ್ಷೆ, ಸ್ಕ್ಯಾನಿಂಗ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಕಬ್ಬಿಣಾಂಶ ಮತ್ತು ಫಾಲಿಕ್ ಆಸಿಡ್ ಮಾತ್ರೆ ಸೇವಿಸಿ ರಕ್ತಹೀನತೆ ಹಾಗೂ ಮಗುವಿನಲ್ಲಿ ನರವ್ಯೂಹದ ಸಮಸ್ಯೆಗಳಿಂದ ದೂರವಿರಬಹುದು. ರಕ್ತದೊತ್ತಡ ಮತ್ತು ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿರಿಸಿ ಅವಧಿ ಪೂರ್ವ ಹೆರಿಗೆ, ಶಿಶುವಿನ ಅಸಮರ್ಪಕ ಬೆಳವಣಿಗೆ, ಜನ್ಮಜಾತ ನ್ಯೂನತೆಗಳು ಹಾಗೂ ಗರ್ಭದಲ್ಲಿಯೇ ಶಿಶು ಮರಣ ಪ್ರಮಾಣ ವನ್ನು ತಗ್ಗಿಸಬಹುದು. ತೊಡಕಿನ ಗರ್ಭಿಣಿ (high risk pregnancy) ಎಂದು ಗುರುತಿಸಲ್ಪಟ್ಟ ಮಹಿಳೆಯರು ಸುಸಜ್ಜಿತ ಆಸ್ಪತ್ರೆಗಳಲ್ಲಿ ನುರಿತ ವೈದ್ಯರಿಂದ ಹೆರಿಗೆ ಮಾಡಿಸಿ ಕೊಳ್ಳುವುದು ಅತೀ ಅವಶ್ಯಕ. ಗರ್ಭಿಣಿಯರಿಗೆ ನೀಡುವ ಲಸಿಕೆಗಳು ತಾಯಿ ಮತ್ತು ಮಗುವಿನ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿ ಆರೋಗ್ಯವನ್ನು ಕಾಯ್ದುಕೊಳ್ಳಲು ಸಹಕಾರಿಯಾಗಿವೆ.


ಜನಿಸಿದ ಒಂದು ತಾಸಿನ ಒಳಗೆ ಸ್ತನ್ಯಪಾನ, ಆರು ತಿಂಗಳ ತನಕ ಮಗುವಿಗೆ ಕೇವಲ ಎದೆಹಾಲು, ಸಮಯಕ್ಕೆ ಸರಿಯಾಗಿ ಲಸಿಕೆಗಳು ಮಗುವಿನ ಆರೋಗ್ಯಯುತ ಬೆಳವಣಿಗೆಗೆ ಪೂರಕ. ಗರ್ಭಿಣಿ, ಬಾಣಂತಿ ಹಾಗೂ ನವಜಾತ ಶಿಶುವಿನಲ್ಲಿ ಯಾವುದೇ ಎಚ್ಚರಿಕೆಯ ಚಿಹ್ನೆಗಳಾದ ( ಗರ್ಭಿಣಿಯರಲ್ಲಿ - ಅತೀ ತಲೆ ನೋವು, ಅಧಿಕ ವಾಂತಿ, ಮೈ ಕೈ ಬಾವು, ಬಾಣಂತಿ ಯಾರಲ್ಲಿ -- ಅತೀ ರಕ್ತಸ್ರಾವ, ಅತೀವ ನಿತ್ರಾಣ, ನಂಜು, ನವಜಾತ ಶಿಶುವಿನಲ್ಲಿ -- ಅತೀ ಹೆಚ್ಚು ಅಳು, ಎದೆಹಾಲು ಸೇವಿಸಿಸದಿರುವಿಕೆ, ತೂಕ ಹೆಚ್ಚಾಗದಿರುವುದು, ಲವಲವಿಕೆಯಿಲ್ಲದ ಮಗು) ಮುಂತಾದ ಚಿಹ್ನೆಗಳು ಕಂಡು ಬಂದಲ್ಲಿ ತಕ್ಷಣವೇ ನುರಿತ ಸ್ತ್ರೀರೋಗ ತಜ್ಞರ/ಮಕ್ಕಳ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯುವುದು ಅತ್ಯಗತ್ಯ. 


ಮಕ್ಕಳ ನಡುವೆ ಅಂತರವಿಡಲು ಕುಟುಂಬ ನಿಯಂತ್ರಣ ವಿಧಾನಗಳ ಬಳಕೆ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ. ಗರ್ಭಿಣಿಯಾದಾಗ ಬಳಕೆಯಾದ , ಹೆರಿಗೆಯ ಸಮಯದಲ್ಲಿ ಕಳಕೊಂಡ ರಕ್ತ ಮರುಪೂರಣಗೊಳ್ಳಲು, ಗರ್ಭ ಪೂರ್ವ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಪುನಃ ಪಡೆದುಕೊಳ್ಳಲು ಹಾಗೂ ಮುಂದಿನ ಮಗು ಆರೋಗ್ಯಯುತವಾಗಿರಲು ಎರಡು ಮಕ್ಕಳ ನಡುವೆ ಮೂರು ವರ್ಷಗಳ ಅಂತರವನ್ನು ಇರಿಸಿಕೊಳ್ಳುವುದು ಸೂಕ್ತ.


ಭಾರತ ಸರ್ಕಾರದ ಪ್ರಧಾನ ಮಂತ್ರಿ ಸ್ವಸ್ಥ ಮಾತ್ರೃತ್ವ ಅಭಿಯಾನ, ಜನನಿ ಸುರಕ್ಷಾ ಯೋಜನೆ, ಸುರಕ್ಷಿತ ಮಾತ್ರೃತ್ವ ಆಶ್ವಾಸನೆ, ಮಾತೃ ವಂದನಾ ಮುಂತಾದ ಯೋಜನೆಗಳು ಗರ್ಭಿಣಿ ಹಾಗೂ ಬಾಣಂತಿಯರಿಗೆ ಅಗತ್ಯವಾದ ಪೌಷ್ಠಿಕ ಆಹಾರ, ಕಬ್ಬಿಣಾಂಶ ಫಾಲಿಕ್ ಆಸಿಡ್ ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ಉಚಿತವಾಗಿ ಒದಗಿಸಿ ಕೊಡುತ್ತಿವೆ. ಸುಸಜ್ಜಿತ ಆಸ್ಪತ್ರೆಗಳಲ್ಲಿ ನುರಿತ ವೈದ್ಯರಿಂದ ಹೆರಿಗೆ, ಪ್ರಸವ ಕೇಂದ್ರಕ್ಕೆ ಹೋಗಿ ಬರಲು ಉಚಿತ ವಾಹನ ಸೇವೆ, ತರಬೇತಿ ಪಡೆದ ಆಶಾ ಕಾರ್ಯಕರ್ತೆಯರ ನೆರವು ಮುಂತಾದ ಸೌಲಭ್ಯಗಳ ಮೂಲಕ ಸಹಾಯ ಹಸ್ತ ಚಾಚಿದೆ. 


ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ, ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ, ಪೋಷಣ್ 2.0 ಮುಂತಾದ ಯೋಜನೆಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಹಾಯದಿಂದ ಮಕ್ಕಳ ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುತ್ತಿದೆ. ಈ ಯೋಜನೆಗಳ ಮಾಹಿತಿ ಹಾಗೂ ಸೂಕ್ತ ಉಪಯೋಗ ದಿಂದಾಗಿ ಗರ್ಭಿಣಿ ಮತ್ತು ಶಿಶು ಮರಣದ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವಲ್ಲಿ ಸಫಲತೆ ಕಾಣುತ್ತಿದೆ.


ತಾಯಿ ಮಕ್ಕಳ ಆರೋಗ್ಯ ಕೇವಲ ಸರಕಾರ, ಆರೋಗ್ಯ ಇಲಾಖೆ, ವೈದ್ಯರು ಅಥವಾ ನಿರ್ದಿಷ್ಟ ವ್ಯಕ್ತಿಯೊಬ್ಬನಿಗೆ ಸೀಮಿತವಾಗಬಾರದು. ದೇಶದ ಪ್ರತಿಯೊಬ್ಬ ಪ್ರಜೆಯೂ ಈ‌ ನಿಟ್ಟಿನಲ್ಲಿ ತಂತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು. ಸ್ವಸ್ಥ ತಾಯಿ ಮತ್ತು ಮಗು ಸ್ವಸ್ಥ ಸಮಾಜದೆಡೆಗೆ ಮೊದಲ ಹೆಜ್ಜೆಯಾದುದರಿಂದ ಕುಟುಂಬದ ಸರ್ವ ಸದಸ್ಯನೂ ಸಹಕಾರ ನೀಡಬೇಕು. 


ಸಮಾಜದ ಪ್ರತಿಯೊಬ್ಬ ಪ್ರಜೆಯೂ ಗರ್ಭಿಣಿ, ಬಾಣಂತಿ ಹಾಗೂ ನವಜಾತ ಶಿಶುವಿನ ಪಾಲನೆ ಪೋಷಣೆಯಲ್ಲಿ ಕೈ ಜೋಡಿಸಿದಾಗ ವಿಶ್ವ ಸಂಸ್ಥೆಯ 2030ರ SDG ಗುರಿಯನ್ನು ಸುಲಭವಾಗಿ ತಲುಪಬಹುದು. ಗರ್ಭಧಾರಣೆಗೆ ಮುನ್ನವೇ ಆರೋಗ್ಯವನ್ನು ಸುದೃಢಗೊಳಿಸಿ ತಾಯ್ತನದ ಹೊಸಿಲೊಳಗೆ ಕಾಲಿರಿಸಿದಾಗ ಗರ್ಭಸ್ಥ ಹಾಗೂ ನವಜಾತ ಶಿಶುವಿನ ಭವಿಷ್ಯವೂ ಆರೋಗ್ಯಕರವಾಗಿ ಆಶಾದಾಯಕವಾಗಿರುತ್ತದೆ ಈ ದಿಸೆಯಲ್ಲಿ ನಾವೆಲ್ಲರೂ ಕಾರ್ಯ ಪ್ರವೃತ್ತರಾಗೋಣ.

~ಡಾ ರಾಜಲಕ್ಷ್ಮಿ, ಹೆರಿಗೆ ಮತ್ತು ಸ್ತ್ರೀ ಆರೋಗ್ಯ ತಜ್ಞರು ಉಡುಪಿ, ನಿಕಟ ಪೂರ್ವ ಅಧ್ಯಕ್ಷರು ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ, ಸದಸ್ಯರು, ಸಾಮಾಜಿಕ ಆರೋಗ್ಯ ಅರಿವು ಉಪಸಮಿತಿ ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ಶಾಖೆ